ನವದೆಹಲಿ: ಉತ್ತರ ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಲು ಆ ಕುಟುಂಬದ ಸದಸ್ಯನೊಬ್ಬನ ಸತ್ತ ಅಪ್ಪನೊಂದಿಗೆ ನಡೆಸುತ್ತಿದ್ದ ಸಂಭಾಷಣೆಯೇ ಕಾರಣ ಎಂದು ತಿಳಿದುಬಂದಿದೆ. ಆತನ ಹೇಳಿಕೆಯನ್ನು ನಂಬಿ ಇಡೀ ಕುಟುಂಬವೇ “ಸಾಮೂಹಿಕ ಮತಿಭ್ರಮಣೆ’ಗೆ ಒಳಗಾಗಿ ಈ ಕೃತ್ಯವೆಸಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕುಟುಂಬದ ಸದಸ್ಯನಾದ ಲಲಿತ್ ಭಾಟಿಯಾ(45) ತಾವು ಎಷ್ಟೋ ವರ್ಷಗಳ ಹಿಂದೆ ಮೃತಪಟ್ಟಿರುವ ಅಪ್ಪನೊಂದಿಗೆ ಸಂಭಾಷಣೆ ನಡೆಸುತ್ತಿದ್ದೇನೆ, ಅಪ್ಪ ನನಗೆ ಪ್ರತಿಯೊಂದು ವಿಚಾರದಲ್ಲೂ ಸೂಚನೆ ನೀಡುತ್ತಿದ್ದಾರೆ ಎಂದೇ ನಂಬಿದ್ದ. ಅದನ್ನೇ ಕುಟುಂಬ ಸದಸ್ಯರಿಗೂ ಹೇಳಿದ್ದ. ಹಿಂದೊಮ್ಮೆ ಆದ ಅಪಘಾತದಲ್ಲಿ ತಾನು ಮಾತು ಕಳೆದುಕೊಂಡಿದ್ದೆನಾದರೂ, ನಂತರ ನನಗೆ ಹಠಾತ್ತಾಗಿ ಮಾತು ಬರಲು ಅಪ್ಪನ ಆತ್ಮ ನನ್ನಲ್ಲಿ ಸೇರಿದ್ದೇ ಕಾರಣ ಎಂದೂ ಹೇಳಿಕೊಂಡಿದ್ದ.
ಜತೆಗೆ, ಕುಟುಂಬ, ಉದ್ದಿಮೆ, ಆಹಾರ ಸೇರಿದಂತೆ ಎಲ್ಲ ವಿಷಯಗಳ ಆಯ್ಕೆಯಲ್ಲೂ ನನಗೆ ಮೃತ ತಂದೆ ಆದೇಶ ನೀಡುತ್ತಿದ್ದಾರೆ. ಎಲ್ಲದಕ್ಕೂ “ಮೇಲಿನಿಂದ ಆದೇಶ ಬಂದಿದೆ’ ಎನ್ನುತ್ತಿದ್ದ. ಈತನ ಹೇಳಿಕೆಗಳನ್ನು ಕುಟುಂಬದ ಎಲ್ಲ ಸದಸ್ಯರೂ ನಂಬಿದ್ದರು. ಹೀಗಾಗಿ, ಇದುವೇ ಅವರ ಸಾವಿಗೂ ಪ್ರೇರಣೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ದೇವರು ರಕ್ಷಿಸುತ್ತಾನೆ ಎಂದು ನಂಬಿದ್ದರು: ನೇಣು ಹಾಕಿಕೊಂಡರೂ ನಾವು ಸಾಯುವುದಿಲ್ಲ ಎಂದೇ ಕುಟುಂಬ ಸದಸ್ಯರು ನಂಬಿದ್ದರು ಎಂಬುದು ಅಲ್ಲಿ ಸಿಕ್ಕಿದ ಸಾಕ್ಷ್ಯಾಧಾರಗಳಿಂದ ಬಲವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮನೆಯಲ್ಲಿ ಸಿಕ್ಕಿರುವ ಒಂದು ಪತ್ರದಲ್ಲಿ, “ಮೊದಲು ಎಲ್ಲರೂ ತಮ್ಮ ತಮ್ಮ ಕೈಗಳನ್ನು ಕಟ್ಟಿಕೊಳ್ಳಬೇಕು.
ಕ್ರಿಯೆ ಮುಗಿದ ಮೇಲೆ ಎಲ್ಲರೂ ಕೈಗಳ ಕಟ್ಟು ಬಿಚ್ಚಲು ಪರಸ್ಪರ ನೆರವಾಗಬೇಕು’ ಎಂದು ಬರೆಯಲಾಗಿದೆ. ಇದನ್ನು ನೋಡಿದರೆ, ಅವರು ಕ್ರಿಯೆ ಮುಗಿದ ನಂತರವೂ ತಾವು ಬದುಕುತ್ತೇವೆ ಎಂದು ನಂಬಿರುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ ಪೊಲೀಸರು. ಜತೆಗೆ, ಮೃತರ ಪೈಕಿ 10 ಮಂದಿ ನೇಣು ಹಾಕಿಕೊಳ್ಳಲು 5 ಸ್ಟೂಲ್‌ಗಳನ್ನು ಹಂಚಿಕೊಂಡಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.
ಸಾವಿಗೆ ಹಿಂದೆ ಆಲದ ಮರ: ಒಂದು ಪತ್ರದಲ್ಲಿ ಆಲದಮರದ ಬೇರುಗಳನ್ನು ಪೂಜಿಸುವ(ವಟ ತಪಸ್ಯ) ಬಗ್ಗೆಯೂ ಉಲ್ಲೇಖೀಸಲಾಗಿದೆ. ಆಲದ ಮರದ ಬೇರುಗಳು ಹೇಗೆ ನೇತಾಡುತ್ತಿರುತ್ತವೆಯೋ, ಅದೇ ಮಾದರಿಯಲ್ಲಿ ಕುಟುಂಬ ಸದಸ್ಯರು ನೇಣಿನ ಕುಣಿಕೆಯಲ್ಲಿ ನೇತಾಡಿದ್ದಾರೆ. ಇದೂ ಒಂದು ತಪಸ್ಸು ಎಂದು ಅವರು ನಂಬಿದ್ದರು. ಇದೇ ವೇಳೆ, “ಚಿಂತೆ ಮಾಡಬೇಡಿ, ಚಿಂತನೆ ಮಾಡಿ. ಲಲಿತ್‌ನ ಅನಾರೋಗ್ಯದ ಬಗ್ಗೆ ಯೋಚಿಸಬೇಡಿ. ನನ್ನ ಆತ್ಮದ ಪ್ರವೇಶದಿಂದ ಆತನಿಗೆ ಸಮಸ್ಯೆ ಉಂಟಾಗಿರುವುದು’ ಎಂದೂ ಬರೆಯಲಾಗಿದೆ.