Advertisement

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸಂವಾದ ಕಾರ್ಯಕ್ರಮ

08:36 PM Mar 31, 2019 | Vishnu Das |

ಮುಂಬಯಿ: ಪ್ರತಿಯೊಬ್ಬರಲ್ಲೂ ಅಡಗಿರುವ ಕೌಶಲವು ಶ್ರಮದ ಬೆಂಬಲ ಪಡೆದಾಗ ಮಾತ್ರ ವಿನೂತನ ಹಾದಿಯಲ್ಲಿ ಮುನ್ನಡೆಯಲು ಹಾಗೂ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇರ್‌ ಸ್ಟೈಲೋ ಮೂಲಕ ಅಂತಾರಾಷ್ಟ್ರೀಯ ಪ್ರಸಿದ್ಧಿ ಗಿಟ್ಟಿಸಿಕೊಂಡಿರುವ ಮುಂಬಯಿಯ ಖ್ಯಾತ ಕೇಶ ವಿನ್ಯಾಸಕಾರ, ಶಿವಾಸ್‌ ಹೇರ್‌ ಡಿಝೈನರ್ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ ಅವರು ಹೇಳಿದರು.

Advertisement

ಮಾ. 28ರಂದು ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಮಾಸ್‌ ಕಮ್ಯೂನಿಕೇಶನ್‌ ಆ್ಯಂಡ್‌ ಜರ್ನಲಿಸಂ) ವಿಭಾಗದಲ್ಲಿ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಾಳಾಸಾಹೇಬ್‌ ಠಾಕ್ರೆ, ಅಮಿತಾಭ್‌ ಬಚ್ಚನ್‌ ಸೇರಿದಂತೆ ಬಾಲಿವುಡ್‌ನ‌ ಖ್ಯಾತ ಸಿನೆಮಾ ತಾರೆಯರ ಕೇಶವಿನ್ಯಾಸಕಾರರಾಗಿ ಗುರುತಿಸಿಕೊಂಡಿರುವ ಶಿವರಾಮ ಭಂಡಾರಿ ತಮ್ಮ ವೃತ್ತಿಪರ ಯಾನದ ವಿವಿಧ ವಿವರಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ದಕ್ಷಿಣ ಕನ್ನಡದ ಹಳ್ಳಿಯ ಹಿನ್ನೆಲೆಯೊಂದಿಗೆ ಮುಂಬಯಿ ಜಗತ್ತನ್ನು ಪ್ರವೇಶಿಸಿ ಬದುಕನ್ನು ಕಟ್ಟಿಕೊಂಡ ಬಗೆಯನ್ನು ವಿವರಿಸುತ್ತಾ, ಕುಲಕಸಬು ಎನ್ನುವುದು ಭಾರತೀಯರಿಗೆ ಪಾವಿತ್ರÂ ಹಾಗೂ ವಿಶಿಷ್ಟವಾಗಿದ್ದು ಇಂತಹ ಕುಲವೃತ್ತಿಯ ಸಾಧನೆ ಪ್ರತಿಷ್ಠೆ ಮತ್ತು ನೆಮ್ಮದಿಗೆ ಪೂರಕವಾಗಿದೆ. ಅತ್ಯಂತ ಕಡಿಮೆ ಸಂಬಳದೊಂದಿಗೆ ಶುರುವಾದ ಕೇಶವಿನ್ಯಾಸದ ವೃತ್ತಿಪರಯಾನ 250ಕ್ಕಿಂತಲೂ ಹೆಚ್ಚಿನ ಸಿಬಂದಿವರ್ಗ ಹೊಂದಿ ಬೃಹತ್‌ ಸಂಸ್ಥೆಯನ್ನು ಸ್ಥಾಪಿಸುವುದರೊಂದಿಗೆ ಯಶಸ್ಸಿನ ಉತ್ತುಂಗ ತಲಪಿದ್ದನ್ನು ನೆನಪಿಸಿಕೊಂಡರು. ಕಷ್ಟಗಳ ಮಧ್ಯೆಯೇ ಸಾಧಿಸುವ ಛಲ ಬಿಟ್ಟುಕೊಡದ ಕಾರಣಕ್ಕಾಗಿಯೇ ಬಾಲಿವುಡ್‌ನ‌ಲ್ಲಿ ವಿಭಿನ್ನ ಕೇಶವಿನ್ಯಾಸಕಾರ ಎಂಬ ಮೆಚ್ಚುಗೆಗೆ ಪಾತ್ರನಾಗಲು ಸಾಧ್ಯವಾಯಿತು. ಪ್ರತಿಯೊಬ್ಬರೂ ಕಷ್ಟಗಳ ನಡುವೆಯೇ ಬದುಕನ್ನು ಕಟ್ಟಿಕೊಳ್ಳಬೇಕು. ಕಷ್ಟಗಳು ಪ್ರತಿಭೆಯ ಮೇಲೆ ಸವಾರಿ ಮಾಡುವ ಅವಕಾಶ ಕೊಡ
ಬಾರದು. ಪ್ರತಿಭೆಯನ್ನು ಸಕಾಲಿಕವಾಗಿ ಪೂರಕ ವಾಗಿಸಿಕೊಂಡು ಬೆಳೆದು ನಿಲ್ಲುವ ಉತ್ಸಾಹ ಮತ್ತು ಶ್ರಮಿಸುವ ಶ್ರದ್ಧೆಯೊಂದಿಗೆ ಮುನ್ನಡೆದರೆ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ರೋನ್ಸ್‌ ಬಂಟ್ವಾಳ್‌ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪರಿಸರ ಕಾಳಜಿ ಸಾಮುದಾಯಿಕವಾಗಿ ವ್ಯಕ್ತವಾಗಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಮಹಾ ನಗರಗಳು ಸೇರಿದತೆ ಗ್ರಾಮೀಣ ಪ್ರದೇಶಗಳಲ್ಲೂ ಸದ್ಯ ಪ್ರಾಣಿ, ಪಕ್ಷಿ ಸೇರಿದಂತೆ ಜೀವಜಗತ್ತಿನ ಬಗ್ಗೆ ನಿರ್ಲಕ್ಷ್ಯಧೋರಣೆ ಮುಂದುವರಿಯುತ್ತಿದೆ. ಆ ಮೂಲಕ ಜೀವಪರ ಕಾಳಜಿ ಕಣ್ಮರೆಯಾಗುತ್ತಿದೆ. ಪರಿಸರ ಮತ್ತು ಜೀವಜಗತ್ತಿನ ಕುರಿತು ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಪಾಮಾಣಿಕ ಪ್ರಯತ್ನ ಅತ್ಯವಶ್ಯ.
ವಿದ್ಯಾರ್ಥಿಗಳು ಅಧ್ಯಯನನಿರತರಾದ ಸಂದರ್ಭದಲ್ಲಿ ಸಮಾಜಕ್ಕೆ ಉಪಯುಕ್ತ ಆಗಬಲ್ಲ ಬರಹಗಳನ್ನು ಬರೆಯುವುದರ ಕಡೆಗೆ ವಿಶೇಷ ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.

ಎಸ್‌. ಡಿ. ಎಂ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗೀತಾ ಎ. ಜೆ. ಬಿಳಿನೆಲೆ, ಡಾ| ಎನ್‌. ಕೆ. ಪ್ರಬಾಕರ್‌, ಪತ್ರಕರ್ತ ಆರಿಫ್‌ ಕಲಕಟ್ಟಾ ಉಪಸ್ಥಿತರಿದ್ದು ಪ್ರೊ| ಎಂ. ಪಿ. ಶ್ರೀನಾಥ್‌ ಅರಸಿನಮಕ್ಕಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಾಧ್ಯಾಪಕ ಡಾ| ಹಂಪೇಶ್‌ ಕೆ. ಎಸ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next