Advertisement

ಬಿಜೆಪಿ ಕಡೆ ವಿಶ್ವಕರ್ಮರ ಸಂಘಟಿಸಲು ಸಮಾವೇಶ

11:42 AM Jul 24, 2017 | |

ಬೆಂಗಳೂರು: ಇಷ್ಟು ದಿನ ಕಾಂಗ್ರೆಸ್‌ ಜತೆಗಿದ್ದ ವಿಶ್ವ ಕರ್ಮ ಸಮುದಾಯ ಇನ್ನು ಮುಂದೆ ಬಿಜೆಪಿ ಬೆನ್ನಿಗೆ ನಿಲ್ಲಲಿದೆ ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ ನಂಜುಂಡಿ ಹೇಳಿದ್ದಾರೆ. ವಿಶ್ವಕರ್ಮ ಮಹಾಸಭಾ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ರಾಜ್ಯ ನಾಯಕರಿಗೆ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು.

Advertisement

ಅಲ್ಲದೆ, ರಾಜ್ಯದ ವಿವಿಧೆಡೆಗಳಿಂದ ವಿಶ್ವಕರ್ಮ ಸಮುದಾಯದ ಸುಮಾರು 2 ಲಕ್ಷ ಮಂದಿಯನ್ನು ಸಂಘಟಿಸಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳುವುದಾಗಿ ಕೆ.ಪಿ.ನಂಜುಂಡಿ ತಿಳಿಸಿದ್ದಾರೆ. ಆ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಕರೆಸಿ ಅವರ ಮೂಲಕ ನಂಜುಂಡಿ ಅವರಿಗೆ ಸನ್ಮಾನ ಮಾಡಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಕೆ.ಪಿ ನಂಜುಂಡಿ, “ರಾಜ್ಯದಲ್ಲಿ ಸಮಾಜದ ಜನಸಂಖ್ಯೆ 30ರಿಂದ 35 ಲಕ್ಷದಷ್ಟಿದ್ದು, ಶೇ.80ರಷ್ಟು ಜನ ಈಗ ಬಿಜೆಪಿಯ ಜತೆಗಿದ್ದಾರೆ. ಚುನಾವಣೆ ಒಳಗಾಗಿ ಉಳಿದ ಶೇ.20 ರಷ್ಟು ಜನರನ್ನು ಬಿಜೆಪಿಗೆ ಕರೆ ತರುತ್ತೇನೆ. ಆ ನಿಟ್ಟಿನಲ್ಲಿ 30 ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ವಿಶ್ವಕರ್ಮ ಸಮುದಾಯದ ಜತೆಗೆ ಇತರೆ ಎಲ್ಲ ಹಿಂದುಳಿದ ವರ್ಗದವರನ್ನು ಕರೆತರುತ್ತೇನೆ ಎಂದು ಭರವಸೆ ನೀಡಿದರು.

ಇನ್ನೊಂದೆಡೆ ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ನಾವು 16 ವರ್ಷ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದೆವು. ಆ ವೇಳೆ ನಾವು ಕೆ.ಪಿ.ನಂಜುಂಡಿ ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಿ ಎಂಬ ಏಕೈಕ ಬೇಡಿಕೆ ಇಟ್ಟಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತು ಬಿಜೆಪಿ ಸೇರಿದ ಆರು ಗಂಟೆಗಳಲ್ಲಿ ನಂಜುಂಡಿ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಹೀಗಾಗಿ ಸಮುದಾಯದ ಎಲ್ಲಾ ಮಠಾಧೀಶರು ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ಇರಲು ತೀರ್ಮಾನಿಸಿದ್ದೇವೆ. ಜತೆಗೆ ಸಮುದಾಯದ ಎಲ್ಲರನ್ನೂ ಬಿಜೆಪಿಗೆ ಕರೆತರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಪಿ.ನಂಜುಂಡಿ, ಒಂದು ರಾಜಕೀಯ ಪಕ್ಷ ಕಟ್ಟಬಹುದು. ಆದರೆ, ಜಾತಿ ಕಟ್ಟಲು ಸಾಧ್ಯವಿಲ್ಲ. ನಾವು ಒಂದು ರಾಜಕೀಯ ಪಕ್ಷದ ಜತೆ ಹದಿನಾರು ವರ್ಷ ಕಳೆದರೂ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿಯಲಿಲ್ಲ. ವಿಶ್ವಕರ್ಮರು ಬುದ್ಧವಂತರು. ಅವರಿಗೆ ಶಿಕ್ಷಣ, ಸೌಲಭ್ಯ ಕೊಟ್ಟರೆ ಕಷ್ಟ ಎಂದು ಇತರೆ ಹಿಂದುಳಿದವರು ನಮಗೆ ಮೋಸ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.  ಇದರಲ್ಲಿ ನನ್ನ ಸ್ವಾರ್ಥಕ್ಕಿಂತ ಸಮುದಾಯದವರಿಗೆ ಏನಾದರೂ ಮಾಡಬೇಕೆಂಬ ತುಡಿತ ಇದೆ ಎಂದರು.

Advertisement

ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದರು. ನಮ್ಮ ಪಾಲಿಗೆ ನಿರ್ಲಕ್ಷ್ಯದ ಅರಸರಾದರು. ದೇವರಾಜ ಅರಸರ ಕಾಲದಲ್ಲೂ ನಮಗೆ ಏನೂ ನೆರವು ಸಿಗಲಿಲ್ಲ. ಆದರೆ, ನಮ್ಮ ಸಮಾಜದ ನೋವುಗಳಿಗೆ ಸ್ಪಂದಿಸುವ ನಾಯಕರು ಬಿಜೆಪಿಯಲ್ಲಿದ್ದಾರೆ. ಅದಕ್ಕಾಗಿ ಬಿಜೆಪಿ ಸೇರಿದ್ದೇನೆ. ನಮ್ಮಲ್ಲಿ ಹದಿನಾರು ಸ್ವಾಮಿಗಳ ಒಕ್ಕೂಟ ಇದೆ. ಈ ಒಕ್ಕೂಟದಲ್ಲಿ ನಿರ್ಧಾರವಾಗದೆ ಸಮಾಜದಲ್ಲಿ ಒಂದು ಕಡ್ಡಿಯೂ ಅಲುಗಾಡುವುದಿಲ್ಲ ಎಂದು ಹೇಳಿದರು.

ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಕಾಲು ಹಿಡಿದು ಎಳೆಯುವವರ ಜತೆ ನಾಯಕರಾಗುವ ಬದಲು ಕೈ ಹಿಡುಯವವರ ಸೇವಕರಾಗುವುದು ಲೇಸು ಎಂಬ ಉದ್ದೇಶದಿಂದ ಯಡಿಯೂರಪ್ಪ ಅವರೊಂದಿಗೆ ಇಂದು ನಮ್ಮ ಸಮಾಜ ಬಂದಿದೆ. ಕಳೆದ ಬಾರಿ ನಂಜುಂಡಿ ಅವರಿಗೆ ವಿಧಾನ ಪರಿಷತ್‌ ಸ್ಥಾನ ಕೊಡದೆ ಕಾಂಗ್ರೆಸ್‌ ವಂಚಿಸಿದಾಗ ನಂಜುಂಡಿ ಅವರನ್ನು ಕರೆದು, ಇದುವರೆಗೆ ಸಮಾಜ ಮತ್ತು ಮಠಾಧೀಶರು ನೀವು ಹೇಳಿದಂತೆ ಕೇಳಿದೆವು. ಇನ್ನುಮುಂದೆ ನಾವು ಹೇಳಿದಂತೆ ಕೇಳಬೇಕು ಎಂದು ಸೂಚಿಸಿದ್ದೆ. ಅದರಂತೆ ಅವರು ಕಾಂಗ್ರೆಸ್‌ ತೊರೆಯುವ ಮನಸ್ಸು ಮಾಡಿದರು ಎಂದರು.

ಕಾಂಗ್ರೆಸ್‌ ಅಧಿಕಾರದಲ್ಲಿರುವವರೆಗೆ ಕಾವಿಗೆ ಬೆಲೆ ಇಲ್ಲ
ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವವರೆಗೂ ಕಾವಿಗೆ (ಸ್ವಾಮೀಜಿಗಳಿಗೆ) ಬೆಲೆ ಇಲ್ಲ. ಆ ಬೆಲೆ ಸಿಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದ್ದಾರೆ. ಹಿಂದೆ ಯಡಿಯೂರಪ್ಪ ಮತ್ತು ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಠ-ಮಾನ್ಯಗಳು, ಸ್ವಾಮೀಜಿಗಳಿಗೆ ಗೌರವ ಇರುತ್ತಿತ್ತು.

ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಗೌರವ ಸಿಗುತ್ತಿಲ್ಲ. ಏನಾದರೂ ಸಮಸ್ಯೆಗಳನ್ನು ಹೇಳಿಕೊಂಡು ಹೋದರೆ ಕುಳಿತುಕೊಳ್ಳಿ ಎಂಬ ಉತ್ತರ ಬರುತ್ತಿತ್ತೇ ಹೊರತು ಗೌರವಯುತವಾಗಿ ನಡೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವಕರ್ಮ ಸಮುದಾಯದ ಮಠಗಳೂ ಸುತ್ತೂರು ಮಠದಂತೆ ಬೆಳೆಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next