Advertisement

ಮುಷರಫ್ ಅವಧಿಯಲ್ಲಿ ವಿವಾದವೇ ಹೈಲೈಟ್‌

01:57 AM Feb 06, 2023 | Team Udayavani |

ನವದೆಹಲಿ:ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಿಲಿಟರಿ ಆಡಳಿತಗಾರ ಜ.ಪರ್ವೇಜ್‌ ಮುಷರಫ್ ಅಧಿಕಾರದಲ್ಲಿ ಇದ್ದ ಅಷ್ಟೂ ಅವಧಿಯಲ್ಲಿ ಭಾರತದ ಜತೆಗೆ ಅತ್ಯಂತ ವಿವಾದಾಸ್ಪದ ಬಾಂಧವ್ಯದ ದಿನಗಳು. ಭಾರತದ ನೆರೆಯ ದೇಶದ ಸೇನಾ ಮುಖ್ಯಸ್ಥರಾಗಿದ್ದ ಅವರು 1999ರಲ್ಲಿ ನವಾಜ್‌ ಷರೀಫ್ ಪ್ರಧಾನಿಯಾಗಿದ್ದಾಗ ಕಾರ್ಗಿಲ್‌ ದಾಳಿ ನಡೆಸಿ ಖಳನಾಯಕನಾಗಿದ್ದವರು. ಆದರೆ, ಪಾಕಿಸ್ತಾನದಲ್ಲಿ ಅಧಿಕಾರ ಕಳೆದುಕೊಂಡು ಹಲ್ಲು ಕಿತ್ತ ಹಾವಿನಂತಾದ ಬಳಿಕ 1999ರ ದುಃಸ್ಸಾಹಸಕ್ಕೆ “ಪಶ್ಚಾತ್ತಾಪ’ ಪಟ್ಟಿದ್ದರು.

Advertisement

ಇಸ್ಲಾಮಾಬಾದ್‌ನಲ್ಲಿ ಭಾರತದ ಹೈಕಮಿಷನರ್‌ ಆಗಿ ಸೇವೆ ಸಲ್ಲಿಸಿದ್ದ ಜಿ.ಪಾರ್ಥಸಾರಥಿ ಮತ್ತು ಟಿ.ಸಿ.ಎ.ರಾಘವನ್‌ ಜ.ಪರ್ವೇಜ್‌ ಮುಷರಫ್ ಅಧಿಕಾರದ ಅವಧಿ ಅತ್ಯಂತ ವಿವಾದಾಸ್ಪದ ಎಂದು ಹೇಳಿದ್ದಾರೆ. 2004ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಬಾಂಧವ್ಯ ಸುಧಾರಣೆಗೆ ಪ್ರಯತ್ನದ ನೆಪವನ್ನಂತೂ ಮಾಡಿದ್ದರು. 2008ರಲ್ಲಿ ಡಾ.ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ವೇಳೆ ಪಾಕ್‌ ಪ್ರೇರಿತ ಉಗ್ರರು ಮುಂಬೈಗೆ ದಾಳಿ ನಡೆಸುವ ವರೆಗೆ ಪಾಕಿಸ್ತಾನದ ಜತೆಗೆ “ಉತ್ತಮ’ ಎನ್ನುವಂಥ ಬಾಂಧವ್ಯ ಇತ್ತು.

ನಿವೃತ್ತ ಹೈಕಮಿಷನರ್‌ ಟಿ.ಸಿ.ಎ.ರಾಘವನ್‌ ಮಾತನಾಡಿ “ಭಾರತದ ಜತೆಗೆ ಉತ್ತಮ ಸಂಬಂಧ ಹೊಂದಬೇಕಾಗಿತ್ತು. 1999ರ ಕಾರ್ಗಿಲ್‌ ಯುದ್ಧ ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು. ಜತೆಗೆ ಎಲ್‌ಒಸಿಯ ಬಗ್ಗೆ ಅವರು ತಳೆದಿದ್ದ ಕಠಿಣ ನಿರ್ಧಾರ ಸಡಿಲಗೊಳಿಸಿ ವ್ಯಾಪಾರ ಮತ್ತು ಜನರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು’ ಎಂದಿದ್ದಾರೆ.

ಆಗ್ರ ಸಮ್ಮೇಳನ:
ಅವರು ಅಧ್ಯಕ್ಷರಾದ ಬಳಿಕ 2001ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಆಗ್ರಾಕ್ಕೆ ಸಮ್ಮೇಳನಕ್ಕಾಗಿ ಬಂದಿದ್ದರು. ಈ ಮೂಲಕ ಭಾರತದ ಜತೆಗೆ “ಉತ್ತಮ ಬಾಂಧವ್ಯ’ ಬಯಸಲು ಪ್ರಯತ್ನ ಮಾಡಿದ್ದರು ಎಂದರು ರಾಘವನ್‌.

ಭ್ರಮೆ ಇತ್ತು:
ಜ.ಮುಷರಫ್ ಸೇನಾ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಇಸ್ಲಾಮಾಬಾದ್‌ನಲ್ಲಿ ಭಾರತದ ಹೈಕಮಿಷನರ್‌ ಆಗಿದ್ದ ಜಿ.ಪಾರ್ಥಸಾರಥಿ ಮಾತನಾಡಿ ಕಾರ್ಗಿಲ್‌ ದಾಳಿಯ ಮೂಲಕ ಭಾರತವನ್ನು ಗೆಲ್ಲುವ ಭ್ರಮೆಯನ್ನು ಅವರು ಹೊಂದಿದ್ದರು. ಜತೆಗೆ ಕಾಶ್ಮೀರ ವ್ಯಾಪ್ತಿಯ ಪರ್ವತ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಂಚು ಹೂಡಿದ್ದರು ಎಂದರು. ಕಾಶ್ಮೀರ ಸಮಸ್ಯೆ ಪರಿಹಾರಕ್ಕಾಗಿ ಅವರು ನನ್ನ ಜತೆಗೆ ಹಲವು ಬಾರಿ ಮಾತಾಡಿದ್ದುಂಟು ಎಂದರು.

Advertisement

2005ರಲ್ಲಿ ಮುಷರಫ್ ಗೆ ಬರ್ತ್‌ ಸರ್ಟಿಫಿಕೆಟ್‌
ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜ. ಪರ್ವೇಜ್‌ ಮುಷರಫ್ ನವದೆಹಲಿಯಲ್ಲಿ 1943 ಆ.11ರಂದು ಜನಿಸಿದ್ದರು. ಆಗ ನವದೆಹಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಇದ್ದ ಈಗಿನ ಶ್ರೀಮತಿ ಗಿರ್ದಾರಿ ಲಾಲ್‌ ಹೆರಿಗೆ ಆಸ್ಪತ್ರೆಯಲ್ಲಿ ಅವರು ಜನಿಸಿದ್ದರು. ಪಾಕಿಸ್ತಾನದ ಮಾಜಿ ಅಧ್ಯಕ್ಷರ ಹೆತ್ತವರು ಹಳೆಯ ದೆಹಲಿಯಲ್ಲಿ ಬಹಳ ಕಾಲ ಇದ್ದರು. 1947ರಲ್ಲಿ ದೇಶ ವಿಭಜನೆಗೊಂಡಾಗ ಹೆತ್ತವರ ಜತೆಗೆ ಪಾಕಿಸ್ತಾನಕ್ಕೆ ತೆರಳಿದ್ದರು. 2005ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಆಸ್ಪತ್ರೆಯ ಆಡಳಿತ ಮಂಡಳಿ ಮುಷರ್ರಫ್ ಅವರಿಗೆ ಜನನ ಪ್ರಮಾಣ ಪತ್ರ ನೀಡಿತ್ತು.

ದಾವೂದ್‌ ಹಸ್ತಾಂತರಿಸಲು ಸೂಚಿಸಿದ್ದ ಅಡ್ವಾಣಿ
ಆಗ್ರಾದಲ್ಲಿ ನಡೆದಿದ್ದ ಸಮ್ಮೇಳನಕ್ಕಾಗಿ ಆಗಮಿಸಿದ್ದ ದಿ.ಪರ್ವೇಜ್‌ ಮುಷರಫ್  ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಆಗ ಗೃಹ ಸಚಿವರಾಗಿದ್ದ ಎಲ್‌.ಕೆ.ಅಡ್ವಾಣಿ ಸೂಚಿಸಿದ್ದರು. ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕ 2011ರ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು. “ದಾವೂದ್‌ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ನಾನು ಅವರಿಗೆ ಹೇಳಿದ್ದೆ. ಅದನ್ನು ಕೇಳಿದ ತಕ್ಷಣ ಜ.ಮುಷರಫ್ ಮುಖ ಕೆಂಪಾಯಿತು ಮತ್ತು ಕೋಪ ಬಂತು. ಅವರು ನನ್ನಿಂದ ಈ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ’ ಎಂದು ಬರೆದುಕೊಂಡಿದ್ದರು. ಜತೆಗೆ ಆತ ಪಾಕಿಸ್ತಾನದಲ್ಲಿ ಇಲ್ಲ ಎಂದು ಮುಷರಫ್ ಹೇಳಿದ್ದರು ಎಂದು ಅಡ್ವಾಣಿ ಉಲ್ಲೇಖಿಸಿದ್ದರು.

ದೋನಿಗೆ ಹೇರ್‌ ಕಟ್‌ ಮಾಡಬೇಡ ಎಂದಿದ್ದರು
ಭಾರತದ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿದ್ದ ಎಂ.ಎಸ್‌.ದೋನಿ ಒಂದು ಕಾಲದಲ್ಲಿ ನೀಳ ಕೇಶ ಹೊಂದಿದ್ದರು. ಅದನ್ನು ನೋಡಿದ್ದ ಜ.ಮುಷರಫ್ ಕೂದಲು ಕತ್ತರಿಸುವುದು ಬೇಡ ಎಂದು ಹೇಳಿದ್ದರು. 2006ರಲ್ಲಿ ಕೊನೇಯ ಬಾರಿಗೆ ಪಾಕಿಸ್ತಾನಕ್ಕೆ ಕ್ರಿಕೆಟ್‌ ಪಂದ್ಯಕ್ಕಾಗಿ ತೆರಳಿದ್ದ ವೇಳೆ ಲಾಹೋರ್‌ನಲ್ಲಿ ಭಾರತ ಗೆದ್ದಿತ್ತು. ಆ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಅಭಿನಂದಿಸಿದ್ದರು. ಈ ಸಂದರ್ಭದಲ್ಲಿ ಪ್ಲಕಾರ್ಡ್‌ನಲ್ಲಿ ದೋನಿಗೆ ಹೇರ್‌ ಕಟ್‌ ಮಾಡುವಂತೆ ಸಲಹೆ ಇತ್ತು. ಆದರೆ, ಆ ರೀತಿ ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದರು

ದೇಶದ್ರೋಹಕ್ಕಾಗಿ ಶಿಕ್ಷೆಗೊಳಗಾಗಿದ್ದ ಮೊದಲಿಗ
ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇಶದ್ರೋಹದ ಆರೋಪದಲ್ಲಿ ಶಿಕ್ಷೆಗೆ ಗುರಿಯಾದ ಮೊದಲ ಮಿಲಿಟರಿ ಆಡಳಿತಗಾರ ಮುಷರಫ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. 2007ರಲ್ಲಿ ಸಂವಿಧಾನವನ್ನು ತಿರುಚಿದ್ದಕ್ಕಾಗಿ 2019ರ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಕೋರ್ಟ್‌ ಜ.ಮುಷರಫ್ ಗೆ ಗಲ್ಲು ಶಿಕ್ಷೆ ನೀಡಿತ್ತು.

ಭಾರತದ ನಾಯಕರ ಜತೆಗೆ ಐದು ಪ್ರಮುಖ ಭೇಟಿ
2001- ಆಗ್ರಾ ಸಮ್ಮೇಳನ- ಪ್ರಧಾನಿಯಾಗಿದ್ದ ಎ.ಬಿ.ವಾಜಪೇಯಿ ಜತೆಗೆ ಭೇಟಿ
2004 ಜನವರಿ- ಸಾರ್ಕ್‌ ಸಮ್ಮೇಳನ- ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ ಸಭೆಗೆ ವಾಜಪೇಯಿ ತೆರಳಿದ್ದರು.
2004 ಸೆಪ್ಟೆಂಬರ್‌- ವಿಶ್ವಸಂಸ್ಥೆಯಲ್ಲಿ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಜತೆ ಭೇಟಿ
2005 ಏಪ್ರಿಲ್‌- ಭಾರತ-ಪಾಕ್‌ ಕ್ರಿಕೆಟ್‌ ಸರಣಿ. ನವದೆಹಲಿಯಲ್ಲಿ ನಡೆದಿದ್ದ ಒಂದು ಪಂದ್ಯವನ್ನು ಮನಮೋಹನ್‌ ಸಿಂಗ್‌ ಜತೆಗೆ ಮುಷರಫ್ ವೀಕ್ಷಿಸಿದ್ದರು.
2006 ಸೆಪ್ಟೆಂಬರ್‌- ಕ್ಯೂಬಾ ರಾಜಧಾನಿ ಹವಾನದಲ್ಲಿ ನಡೆದಿದ್ದ ಅಲಿಪ್ತ ಶೃಂಗದಲ್ಲಿ ಭಾರತೀಯ ನಾಯಕರ ಜತೆಗೆ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next