Advertisement

ವಿವಾದಿತ ಸಿನಿಮಾ “ಕೇರಳ ಸ್ಟೋರಿ” ದೇಶಾದ್ಯಂತ ಬಿಡುಗಡೆ

07:59 PM May 05, 2023 | Team Udayavani |

ನವದೆಹಲಿ: ವಿವಾದಿತ “ದಿ ಕೇರಳ ಸ್ಟೋರಿ” ಸಿನಿಮಾ ಬಿಡುಗಡೆಗೆ ತಡೆಕೋರಿ ಸಲ್ಲಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದೆ. ಹಾಗಾಗಿ ದೇಶಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. ಅಲ್ಲದೇ, ಸಿನಿಮಾದ ಟ್ರೇಲರ್‌ ಯಾವುದೇ ನಿರ್ದಿಷ್ಟ ಸಮುದಾಯದ ಬಗ್ಗೆ ಆಕ್ಷೇಪಾರ್ಹ ವಿಚಾರವನ್ನು ಹೊಂದಿಲ್ಲವೆಂದು ಅಭಿಪ್ರಾಯಪಟ್ಟಿದೆ.
ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಿ ಹಾಗೂ ಸಿನಿಮಾವನ್ನು ನಿಷೇಧಿಸಲು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ನ್ಯಾಯಮೂರ್ತಿ ಎನ್‌.ನಗರೇಶ್‌ ಹಾಗೂ ನ್ಯಾಯಮೂರ್ತಿ ಸೋಫಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದೆ.

Advertisement

ಈ ವೇಳೆ ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಸಿನಿಮಾವನ್ನು ಪರಿಶೀಲಿಸಿಯೇ, ಪ್ರದರ್ಶನಕ್ಕೆ ಅನುಮತಿಸಿದೆ. ಅಲ್ಲದೇ, ಯಾವುದೇ ಸಮುದಾಯವನ್ನು ಗುರಿಯಾಗಿಸುವ ಆಕ್ಷೇಪಾರ್ಹ ಅಂಶಗಳನ್ನೂ ಟ್ರೇಲರ್‌ ಒಳಗೊಂಡಿಲ್ಲ. ಜತೆಗೆ ಚಿತ್ರ ಒಂದು ಕಾಲ್ಪನಿಕ ಕಥೆ ಎಂಬ ಸೂಚನೆಯನ್ನೂ ಚಿತ್ರತಂಡ ನೀಡಿದೆ. ವಿವಾದಕ್ಕೆ ಕಾರಣವಾಗಿದ್ದ 32,000 ಮಹಿಳೆಯರನ್ನು ಮತಾಂತರಿಸಲಾಗಿದೆ ಎನ್ನುವ ಹೇಳಿಕೆಯನ್ನೂ ಟ್ರೇಲರ್‌ನಿಂದ ತೆಗೆದುಹಾಕಿರುವುದಾಗಿಯೂ ನಿರ್ಮಾಪಕರು ತಿಳಿಸಿದ್ದಾರೆ. ಈ ಹಿನ್ನೆಲೆ ಚಿತ್ರಪ್ರದರ್ಶನಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದಿದೆ.

ಕೇರಳದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ
ಸಿನಿಮಾ ಸಂಬಂಧಿಸಿದಂತೆ ವಿವಾದ ಭುಗಿಲೇಳುತ್ತಿದ್ದಂತೆ ಕೇರಳದಲ್ಲಿ ನಿಜವಾಗಿಯೂ ಮತಾಂತರಕ್ಕೆ ಗುರಿಯಾಗಿರುವವರ ಸಂಖ್ಯ ಎಷ್ಟು ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿದೆ. 2011ರ ಭಾರತದ ಜನಗಣತಿಯ ಪ್ರಕಾರ, ಕೇರಳದಲ್ಲಿ ಶೇ.26.56ರಷ್ಟು ಮುಸ್ಲಿಮರಿದ್ದು, ಇದು ಮುಸ್ಲಿಂ ಜನಸಂಖ್ಯೆ ಹೇರಳವಾಗಿರುವ ರಾಜ್ಯ ಎನ್ನಲಾಗಿದೆ. ಇದೇ ವರದಿಯಲ್ಲಿ ಜನಸಂಖ್ಯೆ ಹೆಚ್ಚಳದ ಬಗ್ಗೆಯೂ ದತ್ತಾಂಶಗಳಿದ್ದು, 2001 ರಿಂದ 2011ರ ವೇಳೆಗೆ ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.12.8ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿನ ರಾಜ್ಯದ ಒಟ್ಟು ಜನಸಂಖ್ಯೆ ಹೆಚ್ಚಳ ದರದ ಶೇ.4.9ಕ್ಕಿಂತಲೂ ಹೆಚ್ಚಿನದಾಗಿದೆ.

ಮತಾಂತರದ ನಿಜಾಂಶವೇನು ?
2012ರಲ್ಲಿ ಕೇರಳ ಸರ್ಕಾರದ ಆಗಿನ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರು ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಮತಾಂತರ ಪ್ರಕರಣಗಳ ಕುರಿತಾದ ವರದಿ ಮಂಡಿಸಿದ್ದರು. ಆ ಪ್ರಕಾರ, 2006ರಿಂದ 2012ರ ಅವಧಿಯಲ್ಲಿ ರಾಜ್ಯದಲ್ಲಿ 7,713 ಮಂದಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಈ ಪೈಕಿ 2,267 ಮಂದಿ ಮಹಿಳೆಯರೇ ಇದ್ದು, ಅವರಲ್ಲಿ ಬಹುತೇಕರ ಮತಾಂತರದ ಹಿಂದಿನ ಕಾರಣ ಮದುವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಲವ್‌ ಜಿಹಾದ್‌ ಸತ್ಯವೇ?
ಕೇರಳದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್‌ ಧರ್ಮದ ಯುವತಿಯನ್ನು ಲವ್‌ ಜಿಹಾದ್‌ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಲೇ ಇವೆ. ಕೇರಳದ ಕ್ಯಾಥೋಲಿಕ್‌ ಬಿಶಪ್‌ ಕೌನ್ಸಿಲ್‌ನ ಮುಖವಾಣಿ ಜಾಗ್ರತಾ ಪತ್ರಿಕೆಯು 2015ರಲ್ಲಿ 2005ರಿಂದ 2012ರ ಅವಧಿಯಲ್ಲಿ 4,000 ಯುವತಿಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ವರದಿ ಮಾಡಿತ್ತು. ಅಲ್ಲದೇ, 2019ರಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವರಾಗಿದ್ದ ಜಿ.ಕಿಶನ್‌ ರೆಡ್ಡಿ, ಎನ್‌ಐಎ ಹಾಗೂ ಕೇರಳ ಪೊಲೀಸರು ಸೇರಿ ದೇಶಾದ್ಯಂತ ಐಸಿಸ್‌ ಜತೆಗೆ ನಂಟು ಹೊಂದಿರುವ 155 ಮಂದಿಯನ್ನು ಬಂಧಿಸಿವೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next