Advertisement

ಅಕ್ರಮ ಮದ್ಯ, ಜೂಜು, ಮಟ್ಕಾ ನಿಯಂತ್ರಿಸಿ

04:41 PM Jul 08, 2018 | |

ದಾವಣಗೆರೆ: ಅಕ್ರಮ ಮದ್ಯ, ಇಸ್ಪೀಟ್‌, ಮಟ್ಕಾ ಹಾವಳಿ, ಶಾಲಾ-ಕಾಲೇಜುಗಳ ಬಳಿ ಬೀದಿ ಕಾಮಣ್ಣರ ಉಪಟಳ, ಕೆಲ ಗ್ರಾಮಗಳ ಹೋಟೆಲ್‌ಗ‌ಳಲ್ಲಿ ಚಾಲ್ತಿಯಲ್ಲಿರುವ ಅಸ್ಪೃಶ್ಯತೆ …ಇಂತಹ ಹಲವಾರು ದೂರು, ಅಹವಾಲು ಶನಿವಾರ ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದವು.

Advertisement

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌ ಮಾತನಾಡಿ, ಕೊಂಡಜ್ಜಿ-ಕಡ್ಲೆಬಾಳು-ದಾವಣಗೆರೆ ರಸ್ತೆಯಲ್ಲಿ ರಾತ್ರಿ ವೇಳೆ ಏಕಾಂಗಿಯಾಗಿ ಬೈಕ್‌ ಸವಾರ ಓಡಾಡುವಂತಿಲ್ಲ, ಬೈಕ್‌ ಸವಾರರನ್ನು ಅಡ್ಡಗಟ್ಟಿ ಬೆದರಿಸಲಾಗುತ್ತಿದೆ.

ಶ್ರೀರಾಮ ನಗರದ ಕಡೆ ಸಂಚರಿಸುವ ಆ್ಯಪೆ ಆಟೋಗಳ ವೇಗಕ್ಕೆ ಕಡಿವಾಣ ಹಾಕುವುದು, ಸಂಚಾರಿ ನಿಯಮಗಳ ಮಾಹಿತಿ ನೀಡುವಂತಹ ಕೆಲಸ ಆಗಬೇಕು. ಲೆನಿನ್‌ ನಗರದ ಆಟೋ ನಿಲ್ದಾಣದಿಂದ ಒಮ್ಮುಖ ಸಂಚಾರಿ ರಸ್ತೆ ಮಾಡಬೇಕು ಎಂಬ ಒತ್ತಾಸಿದಾಗ, ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ತಿಳಿಸಿದರು.
 
ದಸಂಸ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಪ್ರೊ| ಬಿ. ಕೃಷ್ಣಪ್ಪನವರ ಸಮಾಧಿ ಸ್ಥಳ ಮೈತ್ರಿ ವನದ ಪಕ್ಕದಲ್ಲಿರುವ ಬಾರ್‌ ಅಂಡ್‌ ರೆಸ್ಟೋರೆಂಟ್‌ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರಲ್ಲದೆ, ಜಿಲ್ಲೆಯಾದ್ಯಂತ ಜಾತಿ ನಿಂದನೆ ಪ್ರಕರಣದ ದೂರುಗಳನ್ನು ಹತ್ತಿಕ್ಕುವ ಹುನ್ನಾರ ನಡೆಸಲಾಗುತ್ತಿದೆ. ಜಾತಿ ನಿಂದನೆ ಪ್ರಕರಣಗಲ್ಲಿನ ಸಾಕ್ಷಿದಾರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕಾಗಿರುವ ದಿನ ಭತ್ಯೆ, ಇತರೆ ಸೌಲಭ್ಯ ದೊರೆಯುತ್ತಿಲ್ಲ. ಎಸ್‌ಒಜಿ ಕಾಲೋನಿಯಲ್ಲಿ ಅಕ್ರಮ ಮದ್ಯ, ಮಟ್ಕಾದ ಹಾವಳಿ ಹೆಚ್ಚಾಗಿದೆ. ನಿಯಂತ್ರಿಸಬೇಕು
ಎಂದು ಒತ್ತಾಯಿಸಿದರು. 

ಸಿ. ರಮೇಶ್‌ನಾಯ್ಕ, ಹಿಂದಿನ ಪೊಲೀಸ್‌ ಚೌಕಿ ವ್ಯವಸ್ಥೆ ಮುಂದುವರೆಸುವ ಜೊತೆಗೆ ಬೈಕ್‌, ಆ್ಯಪೆ ಆಟೋರಿಕ್ಷಾಗಳಲ್ಲಿ ವಿಕೃತ ಶಬ್ದದ ಹಾರ್ನ್ಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. 

ಶೇಖರಪ್ಪ ಎಂಬುವರು ಮಾತನಾಡಿ, ಮಂಡಕ್ಕಿ ಭಟ್ಟಿಯಲ್ಲಿ ಟೈರ್‌ ಬಳಸುತ್ತಿರುವುದರಿಂದ ಹೊರ ಬರುವ ಹೊಗೆಯಿಂದ ಮಕ್ಕಳಿಗೆ ಓದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿಗೆ ಸ್ಪಂದಿಸಿದ ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಸೂಕ್ತ ಪರಿಶೀಲನೆ ನಡೆಸಿ, ಅಗತ್ಯ ಕ್ರಮ
ತೆಗೆದುಕೊಳ್ಳಲು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

Advertisement

ನ್ಯಾಮತಿ ಗ್ರಾಪಂ ಸದಸ್ಯ ಗಿರೀಶ್‌, ಸರ್ಕಾರಿ ಪಿಯು, ಐಟಿಐ, ಪದವಿ ಕಾಲೇಜು ಇರುವ ವೃತ್ತದಲ್ಲಿ ಹೆಚ್ಚುತ್ತಿರುವ ಬೀದಿ ಕಾಮಣ್ಣರ ಹಾವಳಿ ತಡೆಯಲು ಬೀಟ್‌ ವ್ಯವಸ್ಥೆಗೆ, ಫಣಿಯಾಪುರ ಲಿಂಗರಾಜ್‌, ಉಚ್ಚಂಗಿದುರ್ಗದಲ್ಲಿ ಹೊಸದಾಗಿ ಪೊಲೀಸ್‌ ಠಾಣೆ ಪ್ರಾರಂಭ, ಮಲ್ಲಿಕಾಜುನ್‌ ಎಂಬುವರು,
ಬಾಗಳಿಯಲ್ಲಿ ದಲಿತರಿಗೆ ಬಾವಿಗೆ ಪ್ರವೇಶ ನೀಡದೇ ಇರುವುದು, ಮಾಳಗಿ ಕೆಂಚಪ್ಪ ಎನ್ನುವರು, ಹೋಟೆಲ್‌ಗ‌ಳಲ್ಲಿ ಇಂದಿಗೂ ದಲಿತರಿಗೆ ಪ್ರತ್ಯೇಕ ಕಪ್‌ ಇಟ್ಟಿರುವ ಬಗ್ಗೆ, ಮಂಜು ಎಂಬುವರು, ಹರಿಹರ ತಾಲೂಕಿನ ಹೊಳೆ ಸಿರಿಗೆರೆ, ಧೂಳುಹೊಳೆ, ಎಳೆಹೊಳೆ ಇತರೆಡೆ ಅಸ್ಪೃತ್ಯತೆ ಆಚರಣೆ ಹೆಚ್ಚಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವ್ಯಕ್ತವಾದ ದೂರು, ಒತ್ತಾಯ, ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಎಲ್ಲರಂತೆ ಜೀವನ ನಡೆಸಲು ಅಗತ್ಯ ವಾತಾವರಣ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ದೂರುಗಳ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ, ಬೇಡಿಕೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು. 

ಅರ್ಥಿಕ ಒಳಗೊಂಡಂತೆ ಕೆಲವಾರು ತಾಂತ್ರಿಕ ಅಂಶಗಳ ಹಿನ್ನೆಲೆಯಲ್ಲಿ ಹೊಸ ಠಾಣೆ ಪ್ರಾರಂಭಿಸುವುದಕ್ಕೆ ಆಗುವುದಿಲ್ಲ. ಅಗತ್ಯ ಇರುವ ಕಡೆ ಹೊರ ಠಾಣೆ, 24 ಗಂಟೆಯ ಬೀಟ್‌ ವ್ಯವಸ್ಥೆ ಮಾಡಲಾಗುವುದು. ಹರಪನಹಳ್ಳಿಯಲ್ಲಿ ಸಿಪಿಐ ಕಚೇರಿ ಮುಂದುವರೆಯಲಿದೆ. ಐದು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿರುವರ ವರ್ಗಾವಣೆ ಮಾಡಲಾಗುವುದು. ಅಸ್ಪೃಶ್ಯತೆ ಆಚರಣೆ ಮಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ಅಧೀಕ್ಷಕ ಉದೇಶ್‌ ಇದ್ದರು.

ಹೆಣ ಹೂಳ್ಳೋದು ಎಲ್ಲಿ….? ಹೆಣ ಹೂಳ್ಳೋದು ಎಲ್ಲಿ….?
ದಲಿತರು ಸತ್ರೆ ಹೆಣ ಹೂಳ್ಳೋಕೆ ಜಾಗವೇ ಇಲ್ಲ. ಚಾನೆಲ್‌ ಮೇಲೆ ಹೂಳ್ಳೋಕೆ ಹೋದ್ರೆ ಹೊಲ-ಗದ್ದೆಯವರು ಜಗಳ ಮಾಡ್ತಾರೆ. ಹಂಗಾದ್ರೆ ಹೆಣ ಹೂಳ್ಳೋದು ಎಲ್ಲಿ ಅಂತಾ ಪೊಲೀಸ್ನೋರೇ ಹೇಳಬೇಕು. ಇನ್ನು ಮುಂದೆ ಊರಾಗೆ ಯಾರಾದ್ರೂ ಸತ್ರೆ ನೀವೇ ಬಂದು ಧಪನ್‌ ಮಾಡಬೇಕಾಗುತ್ತೆ. ಹಂಗಾಗಿ ಸತ್ತಾಗ ಹೂಳ್ಳೋಕೆ ಜಾಗ ಕೊಡಿಸಿರಿ… ಎಂದು ಬಾಡ ಗ್ರಾಮದ ಬಸವರಾಜಪ್ಪ ಎಂಬುವರು ಸಭೆಯಲ್ಲಿ ಒತ್ತಾಯಿಸಿದರು. ಸಮಾಜ ಕಲ್ಯಾಣ, ಕಂದಾಯ ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮಾಯಕೊಂಡ ಪಿಎಸ್‌ಐ ಗುರುಬಸವರಾಜ್‌ಗೆ ಸೂಚಿಸಿದರು.

ಪ್ರತ್ಯೇಕ ಸಭೆ…
ಸಭೆಯಲ್ಲಿ ಮಾತನಾಡಿದ ಬಹುತೇಕರು ತಮ್ಮ ಹಾಗೂ ಸುತ್ತಮುತ್ತ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಆಗುತ್ತಿರುವ ಬಗ್ಗೆಯೇ ಹೆಚ್ಚಿನದ್ದಾಗಿ ದೂರು ಸಲ್ಲಿಸಿದರು. ಅಕ್ರಮ ಮದ್ಯದ ಹಾವಳಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಹಾಳಾಗುತ್ತಿದ್ದಾರೆ. ದುಡಿದ ಹಣವನ್ನೆಲ್ಲ ಕುಡಿತಕ್ಕೆ ಕಳೆಯುತ್ತಿದ್ದಾರೆ. 

ಕುಡುಕರ ಹಾವಳಿಯಿಂದಾಗಿ ಮಹಿಳೆಯರು ಧೈರ್ಯದಿಂದ ಓಡಾಡದಂತ ಸ್ಥಿತಿ ಇದೆ… ಹೀಗೆ ಹಲವಾರು ಬಗೆಯ ದೂರು ತಿಳಿಸಿದರು. ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸಮರ್ಪಕವಾಗಿ ಸೌಲಭ್ಯ ದೊರೆಯದೇ ಇರುವ ಬಗ್ಗೆ ಹೆಚ್ಚಿನ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅಬಕಾರಿ, ಸಮಾಜ ಕಲ್ಯಾಣ ಒಳಗೊಂಡಂತೆ ಇತರೆ ಇಲಾಖೆ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next