ಬಂದಾರ್ ಸೆರಿ ಬಿಗಾವನ್: ಬ್ರೂನೈ ದೇಶದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಭಾರತೀಯ ವೈದ್ಯರು ಹಾಗೂ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬ್ರೂನೈ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಬಂದಾರ್ ಸೆರಿ ಬಿಗಾವನ್‌ನಲ್ಲಿ ಭಾರತೀಯ ಹೈಕಮಿಷನ್‌ನ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿ, ಭಾರತೀಯ ಸಮುದಾಯದ ಜತೆ ಸಂವಾದ ನಡೆಸಿದರು. ಇಲ್ಲಿನ ಭಾರತೀಯರ ಉಭಯ ದೇಶಗಳ ನಡುವೆ ಜೀವಂತ ಸೇತು ಆಗಿದ್ದಾರೆಂದು ಬಣ್ಣಿಸಿದರು. ಬ್ರೂನೈನಲ್ಲಿ ಅಂದಾಜು 14,000 ಭಾರತೀಯರು ವಾಸವಾಗಿದ್ದಾರೆ.
ಮೋದಿ ಬ್ರೂನೈ, ಸಿಂಗಾಪುರ ಪ್ರವಾಸ ಆರಂಭ: ಪ್ರಧಾನಿ ಮೋದಿ ಅವರ ಬ್ರೂನೈ ಮತ್ತು ಸಿಂಗಾಪುರಗಳ 2 ದಿನಗಳ ಪ್ರವಾಸವು ಮಂಗಳವಾರ ಆರಂಭವಾಯಿತು. ಪ್ರವಾಸದ ಮೊದಲ ಭಾಗದಲ್ಲಿ ಅವರು ಬ್ರೂನೈಗೆ ಭೇಟಿ ನೀಡಿದ್ದು, ರಾಜಕುಮಾರ್ ಹಾಜಿ ಅಲ್-ಮುಹತಾದೀ ಬಿಲ್ಲಹ್ ಅವರು ಮೋದಿಯನ್ನು ಬರಮಾಡಿಕೊಂಡರು. ಬ್ರೂನೈ ದಾರುಸ್ಸಲಾಂ ಜತೆ ಭಾರತವು ದ್ವಿಪಕ್ಷೀಯ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಮೋದಿ ಉತ್ಸುಕರಾಗಿದ್ದಾರೆ. ಬುಧವಾರ ಬ್ರೂನೈ ರಾಜ ಸುಲ್ತಾನ್ ಹಸನಾಲ್ ಬೊಲ್ಕಿಯಾ ಜತೆ ಮಾತುಕತೆ ನಡೆಸಲಿದ್ದಾರೆ. ಮೋದಿ ಬ್ರೂನೈಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ. ಅಲ್ಲಿಂದ ಪ್ರಧಾನಿ ಸಿಂಗಾಪುರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಬ್ರೂನೈ ಮತ್ತು ಭಾರತ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಈಗ 40 ವರ್ಷಗಳಾಗಿವೆ.
ಬ್ರೂನೈ ದೊರೆ ಜಗತ್ತಿನಲ್ಲೇ ಶ್ರೀಮಂತ!
ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬ್ರೂನೈನ ಸುಲ್ತಾನ ತನ್ನ ಶ್ರೀಮಂತಿಕೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯವೇ 2.88 ಲಕ್ಷ ಕೋಟಿ ರೂ!. ಸುಲ್ತಾನ ಹಾಜಿ ಹಸನಲ್ ಬೊಲ್ಕಿಯಾ ತಮ್ಮ 21ನೇ ವಯ ಸ್ಸಿನಲ್ಲಿ ಅಂದರೆ 1967ರಲ್ಲಿ ಬ್ರೂನೈನ ರಾಜರಾಗಿದ್ದಾರೆ.
7,000 ಕಾರುಗಳ ಮಾಲಕ
ಬೊಲ್ಕಿಯಾ ಕಾರು ವ್ಯಾಮೋಹಿ. ಇವರ ಬಳಿ 7,000 ಕಾರುಗಳಿದ್ದು, ಈ ಪೈಕಿ ಅತ್ಯಂತ ದುರಿಯಾದ 600 ರೋಲ್ಸ್ ರಾಯ್ಸ, 300 ಫೆರಾರಿ ಕಾರುಗಳಿವೆ. 200 ಕುದುರೆಗಳಿಗೆ ಹವಾನಿಯಂತ್ರಿತ ಕೋಣೆಗಳಿವೆ.
3,000 ಕೋಟಿ ವಿಮಾನ
ದೊರೆ ಬಳಿ 3,000 ಕೋ. ರೂ. ಮೌಲ್ಯದ ಬೋಯಿಂಗ್ ವಿಮಾನವಿದ್ದು, ಇದರಲ್ಲಿ ಬಂಗಾರದ ಶೌಚಾಲಯ ಇದೆ!. ಜತೆಗೆ ಖಾಸಗಿ ಜೆಟ್‌ಗಳು ಕೂಡ ಇವೆ.
ಬೃಹತ್ ಬಂಗಲೆ
20 ಲಕ್ಷ ಚದರ ಅಡಿಯಲ್ಲಿ ತಲೆ ಎತ್ತಿರುವ ಇಸ್ತಾನಾ ನೂರುಲ್ ಇಮಾನ್ ಬೃಹತ್ ಬಂಗ್ಲೆ ಮೌಲ್ಯ 2,250 ಕೋಟಿ ರೂ. ಇದು 1,700 ಕೋಣೆ, 257 ಬಚ್ಚಲುಮನೆ, 5 ಈಜುಕೊಳ ಮತ್ತು ಕಟ್ಟಡ ಗುಮ್ಮಟ್ಟಕ್ಕೆ ಚಿನ್ನದ ಲೇಪನವಿದೆ.