ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಈ ಬಾರಿಯೂ ಯಶಸ್ವಿಯಾಗಬೇಕಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ 2021-22ನೇ ಸಾಲಿನ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಪ್ರಗತಿ ಕುರಿತು ಸಭೆ ನಡೆಸಿದ ಅವರು, ನಮ್ಮ ಮೊಬೈಲ್ ಆ್ಯಪ್ ದೇಶದ್ಯಾಂತ ಗಮನ ಸೆಳೆದಿದೆ ಹಾಗೂ ಕೇಂದ್ರ ಸರಕಾರದ ಮೆಚ್ಚುಗೆಗೆ ಪಾತ್ರವಾಗಿದೆ. ಇತರ ರಾಜ್ಯಗಳಿಗೆ ಕರ್ನಾಟಕ ಕೃಷಿ ಇಲಾಖೆಯ ಈ ಸಾಧನೆ ಮಾದರಿಯೂ ಆಗಿದೆ. ಕೇಂದ್ರದಿಂದ ಅಗ್ರಿ ಟ್ರೆಂಡ್ ಸೆಟ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.
ಇದನ್ನೂ ಓದಿ:ಪಾಲಿಕೆ ಚುನಾವಣೆ: ಬಿಜೆಪಿಗೆ ಮತ ಹಾಕದಂತೆ ಸ್ವಪಕ್ಷದ ಉಪಾಧ್ಯಕ್ಷರಿಂದಲೇ ಮನವಿ
ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸುಮಾರು 2.09 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು, ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಿಸುವ ಉದ್ದೇಶವನ್ನು ಹೊಂದಿದ್ದು, ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರೇ ಸ್ವತಃ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ, ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.