ಕಾಪು ತಾಲೂಕು ಮತ್ತು ಉಡುಪಿ ತಾಲೂಕು ಗರಿಷ್ಠ ನೆರೆ ಬಾಧಿತ ಪ್ರದೇಶವಾಗಿದ್ದು, ಸುಮಾರು 800ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮನೆಗಳು, ನೂರಾರು ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದ್ದು ಲಕ್ಷಗಟ್ಟಲೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪೊಲೀಸ್ ಪಡೆ, ಅಗ್ನಿಶಾಮಕ ದಳಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ನೆರೆ ಬಾಧಿತ ಪ್ರದೇಶಗಳಿಗೆ ತೆರಳಿವೆ. ಕುಂದಾಪುರ ಅಗ್ನಿಶಾಮಕ ಠಾಣೆಯಿಂದ 6 ಸಿಬಂದಿಯನ್ನು ಮತ್ತು ರಬ್ಬರ್ ಬೋಟ್‌ಗಳನ್ನು ಎರವಲು ಪಡೆಯಲಾಗಿದ್ದು, ರಕ್ಷಣೆ ಕಾರ್ಯ ಸಾಗಿದೆ.
Advertisement
ಎಲ್ಲೆಲ್ಲಿ ವಿಪರೀತ ಹಾನಿ? ಕಾಪು ತಾಲೂಕಿನ ಕಟಪಾಡಿ, ಪಡುಬಿದ್ರಿ, ಶಿರ್ವ ಗರಿಷ್ಠ ಮಳೆ ಬಾಧಿತವಾಗಿವೆ. ಇಲ್ಲಿನ ಮಲ್ಲಾರು, ಉಳಿಯಾರಗೋಳಿ, ಮಜೂರು, ಬೆಳಪು, ಪಾಂಗಾಳ, ಉದ್ಯಾವರ ಸಹಿತ ಹಲವೆಡೆ 200ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಉದ್ಯಾವರದಲ್ಲಿ 1 ಮನೆ ಕುಸಿದಿದೆ. ಕೆಲಭಾಗಗಳಲ್ಲಿ ರಕ್ಷಣಾ ಕಾರ್ಯ ನಡೆಸಿ 500ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಶಿರ್ವ ಹಾಗೂ ಬೆಳ್ಳೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳು, ರಸ್ತೆ, ಕೃಷಿಭೂಮಿ ಜಲಾವೃತಗೊಂಡಿವೆ. ಕಾಪುವಿನ ಸರಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ.
ಉಡುಪಿ ತಾಲೂಕಿನಲ್ಲೂ ವ್ಯಾಪಕ ನೆರೆ ಹಾನಿಯಾಗಿದೆ. ಮೂಡನಿಡಂಬೂರು, ನಿಟ್ಟೂರು, ಕೊಡಂಕೂರು, ಮಠದಬೆಟ್ಟು, ಬೈಲೂರು, ಕೊರಂಗ್ರಪಾಡಿ, ಬೈಲಕೆರೆ ಪೆರ್ಡೂರು, ಹಿರಿಯಡಕ ಮೊದಲಾದೆಡೆ ಭಾರೀ ನೆರೆ ಹಾವಳಿ ಉಂಟಾಗಿದೆ. ಮೂಡನಿಡಂಬೂರು-ನಿಟ್ಟೂರು ರಸ್ತೆ ಸಂಪರ್ಕ ಕಡಿದಿದೆ. ಕೊಂಡಂಕೂರಿನಲ್ಲಿ 35, ಮಲ್ಪೆಯಲ್ಲಿ 9 ಮಂದಿಯನ್ನು ರಕ್ಷಿಸಲಾಗಿದೆ. ಕುಂದಾಪುರ ತಾಲೂಕಿನ ಖಾರ್ವಿಕೆರೆ ವಾರ್ಡ್ ನಲ್ಲಿ 3 ಮನೆ ಕುಸಿದಿದೆ. ಹಾರ್ದಳ್ಳಿ, ಕಂದಾವರ ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿದಿವೆ. ಮಾರಣಕಟ್ಟೆಯ ಬ್ರಹ್ಮಕುಂಡ ನದಿ ಉಕ್ಕಿ ಹರಿಯುತ್ತಿದೆ. ವಂಡ್ಸೆಯಲ್ಲೂ ಮಳೆ ಹಾನಿಯಾಗಿದ್ದು, ಕೊಲ್ಲೂರಿನಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಖಾಸಗಿ ಬೋಟ್ ಮಾಲಕರ ಸಹಾಯ ಹಸ್ತ
ನೆರೆಯಲ್ಲಿ ಸಿಲುಕಿದವರ ರಕ್ಷಣೆಗೆ ಮಲ್ಪೆಯ ಅನುಷ್ಕಾ ಮತ್ತು ರಾಜರಾಜೇಶ್ವರಿ ಬೋಟ್‌ಗಳ ಮಾಲಕರು ತಮ್ಮ ಬೋಟನ್ನು ಉಚಿತವಾಗಿ ಒದಗಿಸಿದ್ದಾರೆ. ಇವರಲ್ಲಿ ಉತ್ತಮ ರಕ್ಷಣಾ ವ್ಯವಸ್ಥೆ ಇದ್ದು 100ಕ್ಕೂ ಹೆಚ್ಚು ಲೈಫ್ ಜಾಕೆಟ್‌ಗಳು, 100ಕ್ಕೂ ಹೆಚ್ಚು ಲೈಫ್ ಬಾಯ್‌ಗಳು, ಮುಳುಗು ತಜ್ಞರನ್ನು ಹೊಂದಿದ್ದಾರೆ. ತುರ್ತು ಸಂದರ್ಭ 9880593676 ಗೆ ಕರೆ ಮಾಡುವಂತೆ ಮಾಲಕರು ತಿಳಿಸಿದ್ದಾರೆ.