ಎಚ್.ಡಿ.ಕೋಟೆ: ಕಳೆದ ವಾರದ ಹಿಂದಿನಿಂದ ಕೇರಳ ರಾಜ್ಯದ ವೈನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದ್ದು, ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು ಇನ್ನು 6 ಅಡಿಗಳ ನೀರು ಬಾಕಿ ಇದೆ.
ಕಳೆದ ವಾರದಿಂದ ವೈನಾಡಿನಲ್ಲಿ ಮಳೆಯಾಗುತ್ತಿ ರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವಿನಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿತ್ತು. ಮಂಗಳವಾರದಿಂದ ಕೇರಳದಲ್ಲಿ ಮತ್ತಷ್ಟು ಮಳೆಯ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಬುಧವಾರ ಹಾಗೂ ಗುರುವಾರದಿಂದ ಜಲಾಶಯದ ಒಳಹರಿವಿನಲ್ಲಿ ಏಕೆಯಾಗಿದೆ.
18 ಸಾವಿರ ಕ್ಯೂಸೆಕ್‌ಗೆ ಏರಿಕೆ: ಕಳೆದ 3 ದಿನಗಳ ಹಿಂದಿನಿಂದ 10 ಸಾವಿರ ಕ್ಯೂಸೆಕ್ ನೀರಿನಿಂದ ಏರಿಕೆ ಕಂಡ ಜಲಾಶಯದಲ್ಲಿ ಗುರುವಾರ ಜಲಾಶಯದ ಒಳಹರಿವಿನ ಪ್ರಮಾಣ 18 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸಂಜೆಯಿಂದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಜಲಾಶಯದ ಹೊರ ಹರಿವಿನಲ್ಲಿಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕಬಿನಿ ಜಲಾಶಯದ ಮೂಲಗಳು ತಿಳಿಸಿವೆ.
ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿಗಳಿದ್ದು, ಗುರುವಾರ ಜಲಾಶಯದ ನೀರಿನ ಮಟ್ಟ 2278 ಅಡಿಗಳಿತ್ತು. ಜಲಾಶ ಯದ ಒಳಹರಿವಿನ ಪ್ರಮಾಣ 18 ಸಾವಿರ ಕ್ಯೂಸೆಕ್ ಇದ್ದು 5 ಸಾವಿರ ಕ್ಯೂಸೆಕ್ ನೀರು ಹೊರ ಹರಿಯ ಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡು ಬಂದರೆ ಹೆಚ್ಚಿನ ಪ್ರಮಾಣದ ನೀರು ಹೊರಹರಿ ಬಿಡಲಾಗುತ್ತದೆ. ಜಲಾಶಯದಲ್ಲಿ 4 ಕ್ರಸ್ಟ್‌ಗೇಟ್ ಗಳಿದ್ದು, ಸದ್ಯದ ಸ್ಥಿತಿಯಲ್ಲಿ ಕ್ರಸ್ಟ್‌ಗೇಟ್‌ನ ಯಾವುದೇ ಗೇಟ್ ಮೂಲಕ ನೀರು ಹೊರ ಹರಿಯ ಬಿಟ್ಟಿಲ್ಲ. ಒಳಹರಿವು ಹೆಚ್ಚಾದರೆ ಕ್ರಸ್ಟ್‌ಗೇಟ್‌ಗಳ ಮೂಲಕ ಹೆಚ್ಚಿನ ಪ್ರಮಾಣದ ನೀರು ಹೊರ ಹರಿಯ ಬಿಡಲಾಗುತ್ತದೆ.
ಸಿಎಂರಿಂದ ಶೀಘ್ರ ಬಾಗಿನ ಅರ್ಪಣೆ?
ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಕೀರ್ತಿಗೆ ಪಾತ್ರವಾಗಿರುವ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು ಕೇವಲ 6 ಅಡಿ ನೀರಿನ ಶೇಖರಣೆ ಬಾಕಿ ಉಳಿದಿದ್ದು, ಜಲಾಶಯ ಭರ್ತಿಯಾಧಾರ ಆಳುವ ಸರ್ಕಾರದ ಮುಖ್ಯಮಂತ್ರಿಗಳು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ವಾಡಿಕೆ. ಅದರಂತೆಯೇ ಈ ಬಾರಿ ಜಲಾಶಯ ಭರ್ತಿಯಾಗುತ್ತಿದ್ದು, ಮುಖ್ಯಮಂತ್ರಿಗಳು ಯಾವಾಗ ಬಾಗಿನ ಸಮರ್ಪಣೆ ಮಾಡುವರೋ ಕಾದು ನೋಡಬೇಕಿದೆ
● ಎಚ್.ಬಿ.ಬಸವರಾಜು