Advertisement

ನಿರಂತರ ಮಳೆ: ಶತಕ ದಾಟಿದ ಟೊಮ್ಯಾಟೋ

01:10 PM Nov 20, 2021 | Team Udayavani |

ಬೆಂಗಳೂರು: ನಿರಂತರ ಮಳೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹಣ್ಣು-ತರಕಾರಿ ಹಾಗೂ ಹೂವು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅತ್ತ ರೈತರಿಗೂ ನಷ್ಟ, ಇತ್ತ ವರ್ತಕರಿಗೂ ಸಂಕಷ್ಟ ಎಂಬಂತಾಗಿದೆ. ಜತೆಗೆ, ಗ್ರಾಹಕರಿಗೂ ದರ ಏರಿಕೆ ಬಿಸಿ ತಾಕಿದೆ. ಮಳೆಯಿಂದಾಗಿ ಬೆಳೆನಷ್ಟ ಉಂಟಾಗಿರುವುದರಿಂದ ಹಣ್ಣು-ತರಕಾರಿಗಳ ಅಭಾವವುಂಟಾಗಿದೆ.

Advertisement

ಮಾರುಕಟ್ಟೆಗೆ ಪೂರೈಕೆ ಯಾಗುವ ಪ್ರಮಾಣವೂ ಕಡಿಮೆಯಾಗಿ ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆಗಳು ಗ್ರಾಹಕರ ಕೈ ಸುಡುತ್ತಿವೆ. ಇದೇ ಮೊದಲ ಬಾರಿಗೆ ನಿತ್ಯ ಬೇಡಿಕೆಯ ಟೊಮ್ಯಾಟೋ ದರ ಪ್ರತಿ ಕೆ.ಜಿ.ಗೆ ನೂರು ರೂ.ದಾಟಿದ್ದು, ಇತರೆ ತರಕಾರಿ ಹಾಗೂ ಹಣ್ಣುಗಳ ಬೆಲೆಯೂ ದುಬಾರಿಯಾಗಿದೆ.

ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ, ಬನಶಂಕರಿ ಮಾರುಕಟ್ಟೆ, ಕೆ.ಆರ್‌.ಪುಂರ, ಯಶವಂತಪುರ ಸೇರಿದಂತೆ ಬೆಂಗಳೂರಿನ ಹಲವು ಮಾರುಟ್ಟೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ ಮತ್ತು ತಮಿಳು ನಾಡಿನ ಹಲವು ಕಡೆಗಳಿಂದ ಹೂವು, ಹಣ್ಣು ಮತ್ತು ತರಕಾರಿಗಳು ಪೂರೈಕೆ ಆಗುತ್ತದೆ. ಆದರೆ, ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಬೆಳೆ ನಷ್ಟವುಂಟಾಗಿ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಯಾಗುವ ಪ್ರಮಾಣ ಕಡಿಮೆಯಾಗಿದೆ. ಇತ್ತ ಮಾರುಕಟ್ಟೆಗೆ ಬಂದ ಹಣ್ಣು ಮತ್ತು ತರಕಾರಿ ಮಳೆ ಕಾರಣ ಮಾರಾಟವಾಗುತ್ತಿಲ್ಲ. ಇದರ ನಡುವೆ ಬೆಲೆ ಏರಿಕೆ ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಚಿತ್ರೋತ್ಸವ 52 : ಈ ಬಾರಿ ಎಂಟು ಕನ್ನಡ ಚಲನಚಿತ್ರಗಳ ಪ್ರದರ್ಶನ

ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಶುಕ್ರವಾರ ಟೊಮ್ಯಾಟೋ ಪ್ರತಿ ಕೆ.ಜಿ (ಹೋಲ್‌ ಸೇಲ್‌ ದರದಲ್ಲಿ ) 80 ರಿಂದ 85 ರೂ.ಗೆ ಮಾರಾಟವಾಯಿತು. ರಿಟೇಲ್‌ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಕೆ.ಜಿ.ಗೆ 120ರೂ.ಗೆ ಮಾರಾಟವಾಯಿತು. ತಳ್ಳುಗಾಡಿಗಳಲ್ಲಿ 90 ರಿಂದ 100 ರೂ. ವರೆಗೂ ಖರೀದಿಯಾಯಿತು. ಕಳೆದೊಂದು ವಾರದ ಹಿಂದೆ ಟೊಮ್ಯಾಟೋ ಬೆಲೆ ಪ್ರತಿ ಕೆ.ಜಿಗೆ 50ರ ಆಸುಪಾಸಿನಲ್ಲಿತ್ತು. ಆದರೆ ಈಗ ಬೆಲೆಯಲ್ಲಿ ದುಪ್ಪಟ್ಟು ಆಗಿದೆ ಎಂದು ಹೋಲ್‌ಸೇಲ್‌ ವ್ಯಾಪಾರಿಗಳು ಹೇಳುತ್ತಾರೆ.

Advertisement

ಹಾಗೆಯೇ ಬೀನ್ಸ್‌ ಕೆ.ಜಿಗೆ 60 ರೂ. ಮೆಣಸಿನಕಾಯಿ 30 ರೂ. ಕ್ಯಾರೆಟ್‌ 50 ರೂ. ಬೆಂಡೆಕಾಯಿ 40 ರೂ.ಗೆ ಮಾರಾಟವಾಗುತ್ತಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ,ರಾಮನಗರ ಹಾಗೂ ಮಂಡ್ಯ ಭಾಗಗಳಿಂದ ಈ ಹಿಂದೆ 10 ರಿಂದ 20 ಲೋಡ್‌ ಟೊಮ್ಯಾಟೋ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ಐದಾರು ಟೆಂಪೋಗಳಲ್ಲಿ ಟೊಮ್ಯಾಟೋ ಪೂರೈಕೆ ಆಗುತ್ತಿದೆ. ನನ್ನ 50 ವರ್ಷದ ವ್ಯಾಪಾರದಲ್ಲಿ ಟೊಮ್ಯಾಟೋ ದರ ಇಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದನ್ನು ನೋಡಿರಲಿಲ್ಲ ಎಂದು ಕೆ.ಆರ್‌. ಮಾರುಕಟ್ಟೆಯ ಹೋಲ್‌ ಸೇಲ್‌ ವ್ಯಾಪಾರಿ ಆರ್‌.ವಿ.ಗೋಪಿ ಹೇಳುತ್ತಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ತರಾಕರಿಗಳ ದರದಲ್ಲಿ ಏರಿಕೆಯಾಗಿದೆ ಬೆಳೆನಷ್ಟದ ಹಿನ್ನೆಲೆಯಲ್ಲಿ ಬೇಡಿಕೆಯಷ್ಟು ಉತ್ಪನ್ನ ಪೂರೈಕೆ ಆಗುತ್ತಿಲ್ಲ. ಮಂಡ್ಯ ಭಾಗದಿಂದ ಟೊಮ್ಯಾಟೋ ಪೂರೈಕೆ ಆಗುತ್ತಿದೆ. ದರ ಕೂಡ ಅಧಿಕವಾಗಿದೆ ಎಂದು ಮಾಹಿತಿ ನೀಡುತ್ತಾರೆ.

ಕನಕಾಂಬರ ಹೂವಿಗೆ ಡಿಮ್ಯಾಂಡ್‌

ಮಳೆಯ ಹಿನ್ನೆಲೆಯಲ್ಲಿ ಕೆಲವು ಹೂವುಗಳ ಬೆಲೆಗಳಲ್ಲೂ ಏರಿಕೆ ಆಗಿದೆ. ಕನಕಾರಂಬರ ಹೂವು ಪೂರೈಕೆ ಕಡಿಮೆ ಇದ್ದು ಆ ಹಿನ್ನೆಲೆಯಲ್ಲಿ ಕೆ.ಜಿ.1600 ರೂ. ದಿಂದ 1800 ರೂ. ವರೆಗೂ ಕೆ.ಆರ್‌.ಮಾರುಕಟ್ಟೆಯಲ್ಲಿ ಖರೀದಿ ಆಯಿತು. ಕಳೆದ 15 ದಿನಗಳ ಹಿಂದಷ್ಟೇ ಕನಕಾಂಬರ ಹೂವು ಕೆ.ಜಿ.ಗೆ 900 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಪೂರೈಕೆ ಕಡಿಮೆ ಆಗಿರುವುದರಿಂದ ಇದರ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೂವಿನ ವ್ಯಾಪಾರಿ ಮಂಜುನಾಥ್‌ ಹೇಳುತ್ತಾರೆ. ಹಾಗೆಯೇ ಸಿಂಪಿಗೆ ಹೂವು ಕೆ.ಜಿ ಗೆ 2000ರೂ.ಗೆ ಖರೀದಿಯಾಯಿತು. ಮಲ್ಲಿಗೆ ಮೊಗ್ಗು 1600 ರೂ.ಗೆ ಮಾರಾಟವಾಯಿತು.ಸೇವಂತಿಗೆ ಹೂವು ಮಾರಿಗೆ 100 ರಿಂದ 120 ರೂ.ಮತ್ತು ಸುಗಂಧರಾಜ ಹೂವು 110-120 ರೂ.ವರೆಗೂ ಖರೀದಿಯಾಯಿತು. ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಹೂವಿನ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜನರು ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಹೂವಿನ ದಾಸ್ತಾನು ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೂವಿನ ವ್ಯಾಪಾರಿ ಪೆರುಮಾಳ್‌ ಹೇಳುತ್ತಾರೆ. ಇದೇ ರೀತಿ ಬಾಳೆಹಣ್ಣು, ಪಪ್ಪಾಯ ಸೇರಿದಂತೆ ಹಣ್ಣುಗಳ ಪೂರೈಕೆಯಲ್ಲೂ ವ್ಯತ್ಯಯ ವುಂಟಾಗಿದ್ದು, ಬೇಡಿಕೆ ತಕ್ಕಂತೆ ಸಿಗುತ್ತಿಲ್ಲ. ಹೀಗಾಗಿ, ಅವುಗಳ ದರವೂ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next