Advertisement

ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ಮುಂದುವರಿದ ಪ್ರಯತ್ನ

03:09 AM Jan 16, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ಗಂಭೀರವಾಗಿ ಪ್ರಯತ್ನ ಮುಂದುವರಿಸಿರುವ ಬಿಜೆಪಿಯು, ಮೈತ್ರಿ ಸರ್ಕಾರದ ಅತೃಪ್ತ ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಂಡು ಸರ್ಕಾರ ರಚನೆಗೆ ಸೂಕ್ತ ಅವಕಾಶ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಲೆಕ್ಕಾಚಾರ ಮುಂದುವರಿಸಿದೆ. ಈ ನಡುವೆ ಸದ್ಯದಲ್ಲೇ ಸಿಹಿ ಸುದ್ದಿ ತಿಳಿಸುವುದಾಗಿ ನಾಯಕರು ಹೇಳಿರುವುದು ಶಾಸಕರಲ್ಲಿ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

Advertisement

ಈ ಪ್ರಯತ್ನದ ಭಾಗವಾಗಿಯೇ ಹರಿಯಾಣದ ಗುರುಗ್ರಾಮದಲ್ಲಿ ಸುಮಾರು 90 ಶಾಸಕರ ವಾಸ್ತವ್ಯ ಮುಂದುವರಿದಿದ್ದು, ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಹಿರಿಯ ನಾಯಕರು ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ರೋಚಕ ತಿರುವು ಪಡೆಯುವ ಲಕ್ಷಣ ಕಾಣುತ್ತಿದೆ.

ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪಕ್ಷೇತರ ಶಾಸಕರಾದ ಆರ್‌.ಶಂಕರ್‌, ನಾಗೇಶ್‌ ಹಿಂಪಡೆದು ರಾಜ್ಯಪಾಲರಿಗೆ ಮಂಗಳವಾರ ಬರೆದಿರುವ ಪತ್ರ ಬಹಿರಂಗವಾಗುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗೆ ಗರಿಗೆದರಿತು. ಮೈತ್ರಿ ಸರ್ಕಾರದ ಪತನ ಪ್ರಕ್ರಿಯೆ ಶುರುವಾಗಿದ್ದು, ಆಡಳಿತದ ಪಕ್ಷದ ಕೆಲ ಶಾಸಕರು ರಾಜೀನಾಮೆ ನೀಡುವ ಪ್ರಕ್ರಿಯೆಯೂ ಸದ್ಯದಲ್ಲೇ ಶುರುವಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಇಬ್ಬರು ಪಕ್ಷೇತರರು ಬೆಂಬಲ ವಾಪಸ್‌ ಪಡೆದಿರುವುದರಿಂದ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 118ಕ್ಕೆ ಕುಸಿಯಲಿದೆ. ಇಬ್ಬರು ಪಕ್ಷೇತರರು ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿರುವುದರಿಂದ ಬಿಜೆಪಿ ಸಂಖ್ಯಾಬಲ 106ಕ್ಕೆ ಏರಿಕೆಯಾಗಿದೆ. ಇನ್ನು ಕಾಂಗ್ರೆಸ್‌ ಅಥವಾ ಜೆಡಿಎಸ್‌ನ 13 ಮಂದಿ ರಾಜೀನಾಮೆ ನೀಡಿದರೆ ಮೈತ್ರಿ ಪಕ್ಷಗಳ ಸಂಖ್ಯಾಬಲ 105ಕ್ಕೆ ಕುಸಿಯಲಿದೆ. ಆಗ ಸರ್ಕಾರ ಪತನವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಲೆಕ್ಕ್ಕ ಪಕ್ಕಾ?: ಅದರಂತೆ ಆಡಳಿತ ಪಕ್ಷಗಳ ಪೈಕಿ 14 ಶಾಸಕರು ಈಗಾಗಲೇ ತಮ್ಮ ಸಂಪರ್ಕದಲ್ಲಿದ್ದು, ಅವಕಾಶ ಸಿಕ್ಕರೆ ಸರ್ಕಾರ ರಚಿಸಿಯೇ ತೀರುತ್ತೇವೆ ಎಂದು ಬಿಜೆಪಿಯ ಒಂದು ಮೂಲಗಳು ಆತ್ಮವಿಶ್ವಾಸದಿಂದ ಹೇಳಿವೆ. ಆದರೆ ಅಗತ್ಯ ಸಂಖ್ಯೆಯ ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ರಯತ್ನ ನಡೆದಿದ್ದರೂ ಅಷ್ಟು ಶಾಸಕರು ಒಟ್ಟುಗೂಡಿಸಿ ಮುಂದುವರಿಯುವ ಹಂತದವರೆಗೆ ಬೆಳವಣಿಗೆಗಳಾಗಿಲ್ಲ. ಒಮ್ಮೆ ರಾಜೀನಾಮೆ ಪ್ರಕ್ರಿಯೆ ಶುರುವಾದರೆ ಅಗತ್ಯ ಸಂಖ್ಯೆ ಶಾಸಕರನ್ನು ರಾಜೀನಾಮೆ ಕೊಡಿಸುವ ಪ್ರಯತ್ನ ಸುಗಮವಾಗಲಿದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ. ಅಗತ್ಯ ಸಂಖ್ಯೆ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದರೆ ಎನ್ನುವುದಾದರೆ ಬಿಜೆಪಿ ವಿಳಂಬ ಧೋರಣೆ ಅನುಸರಿಸುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಕೂಡ ಪಕ್ಷದ ವಲಯದಿಂದಲೇ ಕೇಳಿಬಂದಿದೆ.

Advertisement

ಪತನಗೊಳ್ಳುವುದು ಮುಖ್ಯ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರಕ್ಕಿಂತಲೂ ಮೈತ್ರಿ ಸರ್ಕಾರ ಅಸ್ಥಿರಗೊಂಡು ಪತನವಾಗುವುದೇ ಮುಖ್ಯ. ಆಯಾ ಪಕ್ಷದ ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವುದು ಆಯಾ ಪಕ್ಷಗಳ ಜವಾಬ್ದಾರಿ. ಶಾಸಕರೇ ಬೇಸತ್ತು ರಾಜೀನಾಮೆ ನೀಡಿದರೆ ಅದು ಆಯಾ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಅದಕ್ಕಾಗಿ ಬಿಜೆಪಿಯನ್ನು ದೂರಿದರೆ ಅರ್ಥವಿಲ್ಲ. 104 ಸದಸ್ಯ ಬಲವಿರುವ ಪಕ್ಷ ಅವಕಾಶ ಸಿಕ್ಕರೆ ಸರ್ಕಾರ ರಚಿಸಲಿದೆ. ಇದರಲ್ಲಿ ಅನುಮಾನವೇ ಬೇಡ ಎಂದು ಬಿಜೆಪಿ ರಾಜ್ಯ ನಾಯಕರೊಬ್ಬರು ತಿಳಿಸಿದರು.

ಹೋಟೆಲ್‌ನಲ್ಲಿ ಹಬ್ಬ ಆಚರಣೆ: ದೆಹಲಿಯಿಂದ ಸೋಮವಾರ ಸಂಜೆ ಗುರುಗ್ರಾಮದ ಖಾಸಗಿ ಹೋಟೆಲ್‌ಗೆ ವಾಸ್ತವ್ಯ ಬದಲಾಯಿಸಿದ ಬಿಜೆಪಿ ಶಾಸಕರು ಮಂಗಳವಾರ ಹೋಟೆಲ್‌ನಲ್ಲೇ ಸಂಕ್ರಾಂತಿ ಹಬ್ಬ ಆಚರಿಸಿದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಾಸಕರ ಸಭೆ ನಡೆಸಿ ಮಂಗಳವಾರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ. ಪಕ್ಷೇತರ ಸದಸ್ಯರ ರಾಜೀನಾಮೆ ನಮಗೆ ಮೊದಲ ಜಯ. ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ. ಮೈತ್ರಿ ಸರ್ಕಾರದ ಕೆಲ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ವಿಚಾರವನ್ನು ಸೂಚ್ಯವಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.

ಇನ್ನಷ್ಟು ದಿನ ವಾಸ್ತವ್ಯ ಮುಂದುವರಿಕೆ: ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಸುಮಾರು 90 ಬಿಜೆಪಿ ಶಾಸಕರು ಇನ್ನಷ್ಟು ದಿನ ರಾಜ್ಯದಿಂದ ಹೊರಗಡೆಯೇ ವಾಸ್ತವ್ಯ ಮುಂದುವರಿಸುವುದು ಅನಿವಾರ್ಯವೆನಿಸಿದೆ. ನಿರೀಕ್ಷಿತ ಸಂಖ್ಯೆಯ ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡಿದರೆ ಆನಂತರದ ಬೆಳವಣಿಗೆ ಆಧರಿಸಿ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಕೆಲ ದಿನಗಳಷ್ಟೇ ಅವರು ವಾಸ್ತವ್ಯ ಮುಂದುವರಿಸಲಿದ್ದು, ನಂತರ ರಾಜ್ಯಕ್ಕೆ ಹಿಂತಿರುಗಲಿದ್ದಾರೆ ಎನ್ನಲಾಗಿದೆ.

ಕೆಲವರಿಗೆ ಅಸಮಾಧಾನ: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಿರುಸಿನ ಚಟುವಟಿಕೆಗಳ ಕ್ಷಣದ ಕ್ಷಣದ ಮಾಹಿತಿ ಆಯ್ದ ಕೆಲ ನಾಯಕರಿಗಷ್ಟೇ ತಿಳಿಯುತ್ತಿದ್ದು, ಬಹುತೇಕರಿಗೆ ಹೆಚ್ಚಿನ ಮಾಹಿತಿಯಿಲ್ಲ. ಇದು ಸಹ ಹಲವು ಹಿರಿಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಮೊದಲ ಬಾರಿ ಆಯ್ಕೆಯಾಗಿರುವ ಶಾಸಕರು ಸಹಜವಾಗಿಯೇ ದಿಢೀರ್‌ ಬೆಳವಣಿಗೆಯಿಂದ ಪುಳಕಿತರಾಗಿದ್ದು, ಉತ್ಸಾಹದಿಂದ ಇದ್ದಾರೆ. ಆದರೆ ಕೆಲ ಹಿರಿಯ ಶಾಸಕರಿಗೆ ಅಸಮಾಧಾನವಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆಂದು ಅಗತ್ಯವಿರುವಷ್ಟು ಉಡುಪುಗಳನ್ನೇ ಕೊಂಡೊಯ್ದಿದ್ದವರು ಅನಿವಾರ್ಯವಾಗಿ ಹೊಸ ಉಡುಪುಗಳನ್ನು ಖರೀದಿಸಿ ಬಳಸುವಂತಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಆಯ್ದ ನಾಯಕರಷ್ಟೇ ನಿರ್ಧಾರ ಕೈಗೊಳ್ಳುತ್ತಿರುವ ಬಗ್ಗೆ ಬೇಸರವಿದ್ದರೂ ಪಕ್ಷ ಅಧಿಕಾರಕ್ಕೆ ಬರುವುದಾದರೆ ಸಹಿಸಿಕೊಳ್ಳೋಣ ಎಂಬ ಕಾರಣಕ್ಕೆ ಸುಮ್ಮನಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next