ನಾಗರ ಕೋಯಿಲ್ : ತಮಿಳುನಾಡಿನಲ್ಲಿ ಆನೆಯೊಂದಕ್ಕೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ಥಳಿಸಲಾಗಿದ್ದು, ಅದರ ಮಾವುತರು ಎಂದು ಭಾವಿಸಲಾದ ವ್ಯಕ್ತಿಗಳು ನೀಡಿರುವ ಕ್ರೂರ ಹಿಂಸೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಬಯಲಾಗುತ್ತಿದ್ದಂತೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಘಟನೆಗಳು ಉಗ್ರ ಪ್ರತಿಭಟನೆ ತೋರಿದ್ದು, ಆಕ್ರೋಶ ಹೊರ ಹಾಕಿವೆ. ಜೋಯ್ಮಾಲಾ ಅಥವಾ ಜೇಮಲ್ಯತಾ ಎಂಬ ಹೆಸರಿನ ಆನೆಯನ್ನು ಅಸ್ಸಾಂನಿಂದ ತರಲಾಗಿದ್ದು, ಅಲ್ಲಿ ಆನೆಯನ್ನು ಆರಂಭದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎಂದು ತಿಳಿದು ಬಂದಿದೆ.
ದೇವಸ್ಥಾನದಲ್ಲಿರುವ ಆನೆ ಜೇಮಲ್ಯತಾಗೆ ಆಕೆಯ ಮಾವುತರು ಪದೇ ಪದೇ ಚಿತ್ರಹಿಂಸೆ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರಾಣಿ ಹಕ್ಕುಗಳ ಗುಂಪು, ತಮಿಳುನಾಡು ಮತ್ತು ಅಸ್ಸಾಂನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪಶುವೈದ್ಯಕೀಯ ತಪಾಸಣಾ ವರದಿಯನ್ನು ಸಲ್ಲಿಸಲು ಸೂಚಿಸಿದೆ.
ಒಂದು ದಶಕದಿಂದ ಶ್ರೀವಿಲ್ಲಿಪುತ್ತೂರ್ ನಾಚಿಯಾರ್ ತಿರುಕೋವಿಲ್ ದೇವಸ್ಥಾನದಲ್ಲಿ ಆನೆಯನ್ನು ಅಕ್ರಮವಾಗಿ ಇಡಲಾಗಿತ್ತು ನಂತರ ಹತ್ತಿರದ ಕೃಷ್ಣನ್ ಕೋವಿಲ್ ದೇವಸ್ಥಾನದಲ್ಲಿ ಇಡಲಾಗಿದೆ ಎಂದು ಪೆಟಾ ಹೇಳಿದೆ.