Advertisement

ಮುಂದುವರಿದ ಮಹದಾಯಿ ಧರಣಿ

11:48 PM Oct 18, 2019 | Team Udayavani |

ಬೆಂಗಳೂರು: ಮಹದಾಯಿ ಯೋಜನೆಯ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ವೀರೇಶ್‌ ಸೊಬರದಮಠ ನೇತೃತ್ವದ ನಿಯೋಗ ಶುಕ್ರವಾರ ರಾಜಭವನಕ್ಕೆ ತೆರಳಿದ್ದು, ರಾಜ್ಯಪಾಲರ ಜತೆ ಚರ್ಚಿಸಲು ಅವಕಾಶ ನೀಡದ ಕಾರಣ ಅಹೋರಾತ್ರಿ ಧರಣಿ ಮುಂದುವರಿಸಿದೆ. ಅಹೋರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದಾರೆ. ರಾಜಭವನದ ಅಧಿಕಾರಿಗಳು ಮನವಿ ಪತ್ರವನ್ನು ತಮ್ಮ ಬಳಿ ನೀಡಿ ಎಂದು ಸೂಚಿಸಿದ್ದಾರೆ.

Advertisement

ಆದರೆ, ನಿಯೋಗದ ಸದಸ್ಯರು ರಾಜ್ಯಪಾಲರೊಡನೆ ಮಾತನಾಡಲು ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳು ಅವಕಾಶ ನೀಡದಿ ರುವುದರಿಂದ ಮರಳಿ ಪ್ರತಿಭಟನಾ ಸ್ಥಳಕ್ಕೆ ಬಂದು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರ ಭೇಟಿಗೆ ಅವಕಾಶ ನೀಡಬೇಕು. ಯೋಜನೆಗೆ ಅಧಿಸೂಚನೆ ಹೊರಡಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬಿಸಿಲಿನಲ್ಲಿಯೇ ಅವರು ಪ್ರತಿಭಟನೆ ಮುಂದುವರಿಸಿದರು. ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದ್ದರೂ, ಸರ್ಕಾರದ ಯಾವೊಬ್ಬ ಪ್ರತಿನಿಧಿ ಸ್ಥಳಕ್ಕೆ ಬರಲಿಲ್ಲ.

ವಾಹನ ನಿಲುಗಡೆ ಸ್ಥಳದಲ್ಲಿಯೇ ಮಲಗಿದರು: ಗುರುವಾರ ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದು ಪಾದಯಾತ್ರೆ ಮೂಲಕ ರಾಜಭವನದತ್ತ ಸಾಗಲು ನಿರ್ಧರಿಸಿದ್ದ ರೈತ ಹೋರಾಟಗಾರರನ್ನು ಪೊಲೀಸರು ರೈಲ್ವೆ ನಿಲ್ದಾಣದಲ್ಲಿಯೇ ತಡೆದಿದ್ದರು. ಆದರೆ, ಅಷ್ಟಕ್ಕೆ ವಾಪಸ್‌ ಹೋಗದ ಹೋರಾಟಗಾರರು ರಾತ್ರಿಯಿಡೀ ರೈಲು ನಿಲ್ದಾಣದಲ್ಲೇ ಕಳೆದಿದ್ದು, ವಾಹನ ನಿಲುಗಡೆ ಸ್ಥಳದಲ್ಲಿಯೇ ಮಲಗಿದ್ದರು. ಶುಕ್ರವಾರ ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಸಂಸದ ಉಗ್ರಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಚರ್ಚಿಸಿ, ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ವೀರೇಶ್‌ ಸೊಬರದಮಠ, ರಾಜ್ಯಪಾಲರನ್ನು ಖುದ್ದು ಭೇಟಿಯಾಗಿ ಮನವಿ ನೀಡುವವರೆಗೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಒಂದು ವೇಳೆ, ಭೇಟಿಯಾಗದಿದ್ದರೆ ಇದೇ ಸ್ಥಳದಲ್ಲಿ ಧರಣಿ ಮುಂದುವರಿಸುತ್ತೇವೆ.  ಮಳೆ, ಚಳಿಗೆ ನಾವು ಹೆದರುವುದಿಲ್ಲ. ನಮಗೆ ನೀರು ಬೇಕು. ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.

ಬಿಎಸ್‌ವೈ ಹೇಳಿಕೆಗೆ ಆಕ್ರೋಶ: ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾ ರಾಷ್ಟ್ರಕ್ಕೆ ನೀರು ಬಿಡುವುದಾಗಿ ಹೇಳಿದ್ದಾರೆ. ಕರ್ನಾಟಕಕ್ಕೆ ನೀರಿಲ್ಲ. ಈ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆಂದು ಹೇಳಿರುವುದು ಎಷ್ಟು ಸಮಂಜಸ. ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿಯೋ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಾಲ್ವರು ಆಸ್ಪತ್ರೆಗೆ ದಾಖಲು: ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಭಟನಾ ನಿರತ ರೈತರಲ್ಲಿ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಕೆಸಿ ಜನರಲ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ರಾಜ್ಯಪಾಲರ ನಿಯೋಗಕ್ಕಾಗಿ ಮಳೆ, ಬಿಸಿಲಿನಲ್ಲಿಯೇ ಕಾದು ಕುಳಿತಿದ್ದರು. ಗುರುವಾರ ಸುರಿದ ಮಳೆಯಿಂದ ಚಳಿಜ್ವರ ಬಂದಿದ್ದು, ಯವಗಲ್‌ ಗ್ರಾಮದ 4 ವರ್ಷದ ಬಾಲಕ ರಾಜು ಕೂಡ ಜ್ವರಕ್ಕೆ ತುತ್ತಾಗಿದ್ದಾನೆ. ಗಂಗಪ್ಪ, ವಾಸು ಚವ್ಹಾಣ್‌, ಬಸಪ್ಪ, ಚನ್ನಬಸಪ್ಪ ಕಾಗದಾಳ್‌ ಎಂಬುವರು ಚಿಕಿತ್ಸೆ ಪಡೆದು ಪ್ರತಿಭಟನೆಗೆ ಮರಳಿದ್ದಾರೆ. ಯಾವುದೇ ಸೌಕರ್ಯವಿಲ್ಲದೇ ಅಹೋರಾತ್ರಿ ಧರಣಿ ನಡೆಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರೈತ ಮುಖಂಡರೊಬ್ಬರು ತಿಳಿಸಿದರು.

ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಧಿಸೂಚನೆ ಹೊರಡಿಸಲು ಇದೇ ಸರಿಯಾದ ಸಮಯವಾಗಿದೆ. ಕಳಸಾ -ಬಂಡೂರಿ ಯೋಜನೆಯಿಂದ ಸ್ಥಳೀಯ ಜನರಿಗೆ ಕುಡಿಯುವ ನೀರು ಸಿಗಲಿದ್ದು, ರೈತರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಿದೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಕಳಸಾ – ಬಂಡೂರಿ ಭಾಗದ ರೈತ ಮುಖಂಡರು ನ್ಯಾಯಯುತವಾದ ಹಕ್ಕಿಗೆ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ವಿಶ್ವಾಸ ಕಳೆದುಕೊಂಡಿದೆ. ಅದಕ್ಕಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ನ್ಯಾಯಯುತವಾಗಿ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು.
-ವಿ.ಎಸ್‌. ಉಗ್ರಪ್ಪ, ಮಾಜಿ ಸಂಸದ

ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸದೆ ಸರ್ಕಾರ ಮಹ ದಾಯಿ ನ್ಯಾಯಾಧಿಕರಣ ತೀರ್ಪಿಗೆ ಅವಮಾನ ಮಾಡುತ್ತಿದೆ. ಜನಪ್ರತಿನಿಧಿಗಳು ಸಂವಿಧಾನದ ಆಶಯ ಮರೆತಿದ್ದಾರೆ. ನಮ್ಮ ಹೋರಾಟಕ್ಕೆ ಭಾಗಶಃ ಜಯ ಸಿಕ್ಕಿದೆ. ಜನರ ನೀರಿನ ಸಮಸ್ಯೆ ಗಮನಿಸಿ ರಾಜ್ಯಪಾಲರು ಮಧ್ಯಪ್ರವೇಶಿಸಿ, ಅಧಿಸೂಚನೆ ಹೊರಡಿಸಲು ಸೂಚಿಸಬೇಕು.
-ವೀರೇಶ್‌ ಸೊಬರದಮಠ, ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next