ಚಿಕ್ಕಬಳ್ಳಾಪುರ: ತಮ್ಮನ್ನು ನಿವೃತ್ತಿಯವರೆಗೂ ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ನೇತೃತ್ವದಲ್ಲಿ ನೌಕರರು ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಬಳಿಕ ತಾಲೂಕು ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಘೋಷಣೆ ಕೂಗಿದರು.
ವೇತನ ನೀಡಿಲ್ಲ: ರಾಜ್ಯದ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಅಡುಗೆ, ಸ್ವತ್ಛತೆ, ಕಾವಲು ಮತ್ತಿತರ ವಿವಿಧ ಹುದ್ದೆಗಳಲ್ಲಿ ಸುಮಾರು ಮೂರು ಸಾವಿರ ಹೊರಗುತ್ತಿಗೆ ನೌಕರರಿಗೆ ಕಳೆದ 7-8 ತಿಂಗಳಿಂದ ವೇತನ ಕೊಟ್ಟಿಲ್ಲ. ಇವರಿಗೆಲ್ಲಾ ಕನಿಷ್ಠ ವೇತನ ಕಾಯ್ದೆಯಡಿ ವೇತನ ಕೊಡಬೇಕಿದ್ದು, ಇದುವರೆಗೂ ವೇತನ ಪಾವತಿಯಾಗದ ಕಾರಣ ಹೊರಗುತ್ತಿಗೆ ನೌಕರರು ಬದುಕು ನಡೆಸಲು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನೆ ನೇತೃತ್ವದ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ಒಂದೇ ಬಾರಿಗೆ ವೇತನ ಪಾವತಿಸಿ: ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರ ಪೈಕಿ ಬಹುತೇಕ ಮಹಿಳಾ ನೌಕರರಾಗಿದ್ದು, ಮಕ್ಕಳ ಶಿಕ್ಷಣ ಶುಲ್ಕ, ಮನೆ ಬಾಡಿಗೆ ಕಟ್ಟಲು ತೊಂದರೆ ಆಗಿರುವುದರಿಂದ ಬಾಕಿ ಇರುವ 7, 8 ತಿಂಗಳ ವೇತನವನ್ನು ಒಂದೇ ಬಾರಿಗೆ ಪಾವತಿ ಮಾಡಬೇಕೆಂದು ಆಗ್ರಹಿಸಿದರು. ಅಲ್ಪ ವೇತನಕ್ಕಾಗಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುವುದೆಂದು ಇಲಾಖೆಗಳ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದು,
ನಿವೃತ್ತಿಯವರೆಗೂ ಯಾವುದೇ ಕಾರಣಕ್ಕೂ ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯದೇ ಮುಂದುವರಿಸಬೇಕೆಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳರನ್ನು ಆಗ್ರಹಿಸಿದರು. ಹೊರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಕಾಯ್ದೆಯಡಿ ವೇತನ ನೀಡುವುದರ ಜೊತೆಗೆ ನಿಯಮಾನುಸಾರ ಪಿಎಫ್ ಹಾಗೂ ಇಎಎಸ್‌ಐ ಸೌಲಭ್ಯಗಳ ಜೊತೆಗೆ ರಜೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ಕಾರ್ಯದರ್ಶಿ ಮುನಿಯಪ್ಪ, ತಾಲೂಕು ಅಧ್ಯಕ್ಷ ಕದೀರಪ್ಪ, ತಾಲೂಕು ಕಾರ್ಯದರ್ಶಿ ಪ್ರಮೀಳಮ್ಮ, ಕೆ.ಕುಮಾರ್, ನಾರಾಯಣ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
19ರಿಂದ ಅನಿರ್ದಿಷ್ಟಾವಧಿ ಧರಣಿ: ರಾಜ್ಯ ಸರ್ಕಾರ ಕೂಡಲೇ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ಬಾಕಿ ವೇತನ ಸೇರಿದಂತೆ ನಿವೃತ್ತಿ ಆಗುವವರೆಗೂ ಸೇವೆಯಲ್ಲಿ ಮುಂದುವರಿಸುವ ಬೇಡಿಕೆಯನ್ನು ಸರ್ಕಾರ ಕೈಗೊಳ್ಳದಿದ್ದರೆ ಡಿ.19 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ಎಚ್ಚರಿಸಿದರು.