ಉಡುಪಿ: ಪೇಜಾವರ ಶ್ರೀಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಹಲವು ಗಣ್ಯರು ಭೇಟಿ ನೀಡಿ ಅವರ ಕ್ಷೇಮಾರ್ಥ ಪ್ರಾರ್ಥನೆ ಸಲ್ಲಿಸಿದರು. ಕಾಂಗ್ರೆಸ್ ಪ್ರದೇಶ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ನೀಡಿ, “ನಾನು ಚಿಕ್ಕ ವಯಸ್ಸಿನಲ್ಲಿ ತಂದೆ ಜತೆ ಭೇಟಿ ಮಾಡಿದ್ದೆ. ಆಧ್ಯಾತ್ಮಿಕ, ಧಾರ್ಮಿಕ ಸೇವೆ ಮಾಡಿದ ಶಕ್ತಿ ಅವರಲ್ಲಿದೆ. ಅವರು ಶೀಘ್ರ ಗುಣಮುಖರಾಗಲಿ’ ಎಂದು ಪ್ರಾರ್ಥಿಸಿದರು.
ವಿಹಿಂಪ ರಾಷ್ಟ್ರೀಯ ಅಧ್ಯಕ್ಷ, ಮಾಜಿ ರಾಜ್ಯಪಾಲ ಸದಾಶಿವ ಕೋಕಡೆ, ಪ್ರ.ಕಾರ್ಯದರ್ಶಿ ಮಿಲಿಂದ್ ಪೆರಾಂಜೆ ಭೇಟಿ ನೀಡಿ, ವಿಹಿಂಪದೊಂದಿಗೆ ದಶಕಗಳ ಕಾಲದಿಂದ ಇದ್ದ ಸಂಬಂಧ, ಸಂಘಟನೆಯನ್ನು ಬೆಳೆಸುವಲ್ಲಿ ಶ್ರೀಗಳ ಪರಿಶ್ರಮವನ್ನು ನೆನಪಿಸಿಕೊಂಡು ಆರೋಗ್ಯ ಯಾಗುವಂತೆ ಹಾರೈಸಿದರು.
ತಿರುಮಲದಲ್ಲಿ ಪೂಜೆ: ಶ್ರೀಗಳ ಆಯುರಾರೋಗ್ಯಕ್ಕಾಗಿ ತಿರುಮಲ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಶ್ರೀಗಳವರನ್ನು ಭೇಟಿಯಾಗುತ್ತೇನೆ ಎಂದು ದೇವಸ್ಥಾನದ ಅಧ್ಯಕ್ಷ ವೈ.ವಿ.ಸುಬ್ಬರಾವ್ ತಿಳಿಸಿದ್ದಾರೆ.
ಮೈಸೂರಿನ ಹನಸೋಗೆಯ ಶ್ರೀ ವಿಶ್ವನಂದನತೀರ್ಥರು, ಕಣ್ವ ಮಠದ ಶ್ರೀ ವಿದ್ಯಾವಿರಾಜತೀರ್ಥರು, ಮಾಜಿ ಸಚಿವರಾದ ವಿನಯಕುಮಾರ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಕ್ಯಾ|ಗಣೇಶ ಕಾರ್ಣಿಕ್, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರು, ಎಂ.ಎ.ಗಫೂರ್ ಭೇಟಿ ನೀಡಿದರು.
ಹಂಪಿಯಲ್ಲಿ ಪೂಜೆ: ಶ್ರೀಗಳು ಸನ್ಯಾಸದೀಕ್ಷೆ ತೆಗೆದುಕೊಂಡ ಹಂಪಿ ಚಕ್ರತೀರ್ಥದ ಯಂತ್ರೋದ್ಧಾರಕ ಪ್ರಾಣದೇವರ ಸನ್ನಿಧಾನದಲ್ಲಿ ಗಂಗಾವತಿಯ ವಿಜಯಧ್ವಜ ವಿದ್ಯಾಪೀಠದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಲಕ್ಷ ಧನ್ವಂತರಿ ಜಪ, ತಲಾ 108ರಂತೆ ವಾಯುಸ್ತುತಿ ಪುರಶ್ಚರಣ, ಪವಮಾನ ಸೂಕ್ತ, ಮನ್ಯುಸೂಕ್ತ ಪುರಶ್ಚರಣ, ಸುಂದರಕಾಂಡ, ವಿಷ್ಣುಸಹಸ್ರನಾಮ ಪಾರಾಯಣಗಳನ್ನು ನಡೆಸಿದರು. ಆನೆಗುಡ್ಡೆ ದೇವಸ್ಥಾನದಲ್ಲಿ, ಅರ್ಚಕರು ವಿಶೇಷ ಪೂಜೆ ನಡೆಸಿದರು.