ವಿಜಯಪುರ : ಪಕ್ಷ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಿದರೆ ಜಿಲ್ಲೆಯ ಜನರಿಗಾಗಿ ದುಡಿಯುತ್ತೇನೆ. ಇಲ್ಲವಾದಲ್ಲಿ ಪಕ್ಷಸ ಸಾಮಾನ್ಯ ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ನಾನೂ ಇರುತ್ತೇನೆ ಎಂದು ವಿಜಯಪುರ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಸಂಸದನಾದರೂ ಬಿಜೆಪಿ ಸರ್ಕಾರ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಸಚಿವನಾಗಿ, ಸಂಸದನಾಗಿ ಜಿಲ್ಲೆಗೆ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.
ರೈಲ್ವೇ ಅಭಿವೃದ್ಧಿ, ವಿಮಾನ ನಿಲ್ದಾಣ ನಿರ್ಮಾಣ, ಹೊಸದಾಗಿ 7 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಅಭವೃದ್ಧಿ ಕೆಲಸ ಮಾಡಿದ್ದೇನೆ. ಹೀಗೆ ಹಲವು ಅಭಿವೃದ್ಧಿ ಮಾಡಿದ್ದು, ಅಭಿವೃದ್ಧಿ ವಿಷಯದಲ್ಲಿ ನನ್ನ ಕೆಲಸಗಳು ನನಗೆ ಸಂತೃಪ್ತಿ ನೀಡಿವೆ. ಬರುವ ಚುನಾವಣೆಯಲ್ಲಿ ಪಕ್ಷ ಸ್ಪರ್ಧೇಗೆ ಅವಕಾಶ ನೀಡಿದರೆ ಇನ್ನೂ ಹೆಚ್ಚಿನ ಶ್ರಮ ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀೀಡಲಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 400ಕ್ಕೂ ಹೆಚ್ಚು ಸ್ಥಾನ ಗೆಲ್ಲವು ಮೂಲಕ ಮೋದಿ ಅವರು ಮತ್ತೊಮನ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೇವಲ ಜೋರು ಧ್ವನಿಯಲ್ಲಿ ಮಾತನಾಡುತ್ತಾರಷ್ಟೇ, ಅವರಿಂದ ಏನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕೂ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಿಲ್ಲ. 75 ವರ್ಷಗಳಲ್ಲಿ ಏನನ್ನೂ ಮಾಡದ ಕಾಂಗ್ರೆಸ್ ಪಕ್ಷ ಇದೀಗ ರಾಜ್ಯದಲ್ಲಿ ಗ್ಯಾರಂಟಿ ಹೆಸರಲ್ಲಿ ಮನೆ ಹೆಣ್ಣು ಮಕ್ಕಳಿಗೆ ಜಗಳ ಹಚ್ಚುವ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ವಿಜಯಪುರ ಲೋಕಸಭಾ ಉಸ್ತುವಾರಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಅರುಣ ಶಹಾಪೂರ ಮಾತನಾಡಿದರು.
ಮಾಜಿ ಶಾಸಕ ರಮೇಶ ಭೂಸನೂರ, ಪ್ರಕಾಶ ಅಕ್ಕಲಕೋಟ, ಸಂಜೀವ ಐಹೊಳೆ, ಬಸವರಾಜ ಯಂಕಂಚಿ, ಮಲ್ಲಮ್ಮ ಜೋಗೂರ, ಸಂಜೀವ ಐಹೊಳೆ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಮುಳುಗೌಡ ಪಾಟೀಲ ಉಪಸ್ಥಿತರಿದ್ದರು.