ಉಡುಪಿ: ಮಠದಬೆಟ್ಟು ಸಮೀಪ ಕೆಲವು ದಿನಗಳಿಂದ ನಡೆಯುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕಿಂಡಿ ಅಣೆಕಟ್ಟಿನ ಕಾಮಗಾರಿ ವೇಳೆ ಬ್ಲಾಕ್ ಆಗಿ ನಾಲ್ಕೈದು ಮನೆಗಳ ಬಾವಿಗಳಿಗೆ ಕಲುಷಿತ ನೀರು ಮಿಶ್ರಣವಾಗಿದ್ದು, ಇದೀಗ 30ಕ್ಕೂ ಅಧಿಕ ಬಾವಿಗಳು ಕಲುಷಿತಗೊಂಡಿವೆ. ಸಮಸ್ಯೆ ತತ್‌ಕ್ಷಣಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ನಗರಸಭೆ ಆಡಳಿತ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ದೂರು ಕೇಳಿಬರುತ್ತಿದೆ.
ಇಂದ್ರಾಣಿ ಹೊಳೆಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು ಪಶ್ಚಿಮ ವಾಹಿನಿ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಂತೆ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಇಂದ್ರಾಣಿ ಹರಿಯುವ ನದಿಗೆ ಮಣ್ಣು ಹಾಕಿ ನೀರನ್ನು ತಡೆ ಹಿಡಿಯಲಾಗಿದ್ದು, ಇನ್ನೊಂದೆಡೆ ನಗರಸಭೆಯಿಂದ ಒಳಚರಂಡಿ ನೀರನ್ನು ಇಲ್ಲಿಗೆ ಬಿಡಲಾಗುತ್ತಿದೆ.
ಸೇತುವೆ ನಿರ್ಮಾಣದ ಪ್ರದೇಶದಲ್ಲಿ ಡ್ರೈನೇಜ್ ನೀರು ಸಂಗ್ರಹ ಗೊಂಡಿದೆ. ಅಣೆಕಟ್ಟು ನಿರ್ಮಿಸಲು ಹೊಳೆಗೆ ಮಣ್ಣು ಹಾಕಿ ಕಟ್ಟ ಹಾಕಿದ್ದಾರೆ.ಆದರೆ ನೀರು ಹರಿದು ಹೋಗಲು ನಾಲ್ಕು ಇಂಚಿನ್‌ನ ಪೈಪ್‌ಅನ್ನು ಅವೈಜ್ಞಾನಿಕವಾಗಿ ಅಳವಡಿಸಿದ್ದಾರೆ. ಇದರಿಂದ ನೀರು ಸರಿಯಾಗಿ ಹರಿದುಹೋಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಹೊಳೆಯಲ್ಲಿ ನೀರು ಸಂಗ್ರಹಗೊಂಡು, ಕೈತೋಡಿನ ಮೂಲಕ ಹರಿದು, ಅಂತರ್ಜಲ ಮೂಲಕ ಮನೆಗಳ ಬಾವಿಗಳನ್ನು ಸೇರುತ್ತಿವೆ. ಈ ಬಗ್ಗೆ ನಗರಸಭೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ನಾಗರಿಕರ ಅಳಲು. ಪರಿಸರದ 30ಕ್ಕೂ ಅಧಿಕ ಮನೆಗಳ ಬಾವಿಯ ನೀರು ಸಂಪೂರ್ಣ ಹಸುರು ಬಣ್ಣಕ್ಕೆ ತಿರುಗಿ ಮಲೀನಗೊಂಡಿವೆ.
ಬಾವಿಯ ನೀರಿನಲ್ಲಿ ತ್ಯಾಜ್ಯ ನೀರು ಸೇರಿರುವುದರಿಂದ ನೀರಿನ ಮಟ್ಟವು ಜಾಸ್ತಿಯಾಗಿದೆ. ಬೇಸಿಗೆಯಲ್ಲಿ ನಗರಸಭೆ ನೀರು ಬಾರದೆ ಇದ್ದಾಗ ಸ್ಥಳೀಯರು ತಮ್ಮ ಬಾವಿಯ ನೀರನ್ನು ಬಳಸುತ್ತಿದ್ದರು. ಆದರೆ ಈ ಬಾರಿ ತ್ಯಾಜ್ಯ ನೀರಿನಿಂದಾಗಿ ಬಾವಿಯ ನೀರು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯರ ಅಳಲು. ವಿಜಯ ತಾರ ಹೊಟೇಲ್ ಪರಿಸರದ ಹಿಂಬದಿಯೂ ಕೆಲವು ಮನೆಗಳಿಗೆ ಸಮಸ್ಯೆಯಾಗಿದ್ದು, ಈ ತೋಡಿಗೆ ಎರಡು ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸದ ಪರಿಣಾಮ ಬಾವಿಗೆ ಕಲುಷಿತಗೊಳ್ಳಲು ಕಾರಣವಾಗಿದೆ. ಒಟ್ಟಾರೆ ಪರಿಸರ ದುರ್ವಾಸನೆಯಿಂದ ಕೂಡಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು ದೂರಿದ್ದಾರೆ.