ಹುಣಸೂರು: ಸರ್ಕಾರ ವಿಕಲಚೇತನರ ಅಭ್ಯುದಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆಯಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲಿ ಶೇ.3ರಷ್ಟು ಅನುದಾನವನ್ನು ಕಡ್ಡಾಯವಾಗಿ ಬಳಸಬೇಕಿದ್ದು, ಅಗತ್ಯವುಳ್ಳವರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬೇಕೆಂದು ತಾಲೂಕು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ದೇವರಾಜ್ ಸೂಚಿಸಿದರು.
ತಾಲೂಕಿನ ಬೀಜಗನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರಿಗಾಗಿ ಆಯೋಜಿಸಿದ್ದ ಅರಿವಿನ ಚಿಂಚನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 3200 ಮಂದಿ ವಿಕಲಚೇತನರನ್ನು ಗುರುತಿಸಲಾಗಿದೆ. ವಿಕಲಾಂಗರನ್ನು 7 ವಿಭಾಗಗಳಾಗಿ ವಿಂಗಡಿಸಲಾಗಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಲಕ ಚೇತನರ ಹಾಗೂ ಹಿರಿಯನಾಗರೀಕರಿಗಾಗಿ ಸಾಕಷ್ಟು ಸೌಲಭ್ಯ ಕಲ್ಪಿಸಿದೆ,
ಗ್ರಾಮ ಪಂಚಾಯ್ತಿ ಮತ್ತು ನಗರಸಭೆಯ ಅನುದಾನದಲ್ಲಿ ಶೇ.3 ಮೀಸಲಿರಿಸಿದ್ದು, ಮುಂಬರುವ ದಿನಗಳಲ್ಲಿ ಶೇ.5ಕ್ಕೇರಲಿದೆ ಎಂದು ಮಾಹಿತಿ ನೀಡಿದ ಅವರು, ಈ ಯೋಜನೆಯಡಿಯಲ್ಲಿ ವಿಕಲಚೇತನರಿಗಾಗಿ ಅಗತ್ಯವಾದ ಸಲಕರಣೆ ಹಾಗೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿದಲ್ಲಿ ಶೌಚಾಲಯ ಹಾಗೂ ಮನೆ ನಿರ್ಮಿಸಿಕೊಳ್ಳಲು ಸಹ ಅನುದಾನ ನೀಡಲಿದೆ ಎಂದರು.
ಆದ್ಯತೆ ಮೇರೆಗೆ ಪರಿಗಣನೆ: ಪಿಡಿಒ ರಾಘವೇಂದ್ರ ಪ್ರಸಾದ್ ಮಾತನಾಡಿ, ಗ್ರಾಪ ವ್ಯಾಪ್ತಿಯಲ್ಲಿ ಒಟ್ಟು 51 ಮಂದಿ ವಿಕಲಚೇತನರನ್ನು ಗುರುತಿಸಲಾಗಿದ್ದು, ಇವರೊಂದಿಗೆ ಹಿರಿಯ ನಾಗರಿಕರಿಗೂ ಸಾಕಷ್ಟು ಸೌಲಭ್ಯಗಳಿದ್ದು, ಅರ್ಜಿಸಲ್ಲಿಸಿದಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದೆಂದರು. ಬೀಜಗನಹಳ್ಳಿ ಗ್ರಾಪಂ ಅಧ್ಯಕ್ಷೆ ಸೀತಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಂಗಸ್ವಾಮಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಚಂದ್ರಕುಮಾರ್, ನಮ್ಮ ಮಾಹಿತಿ ಕೇಂದ್ರದ ಸೌಮ್ಯ ಸೇರಿದಂತೆ ವಿಕಲ ಚೇತನರು, ಹಿರಿಯನಾಗರೀಕರು ಹಾಜರಿದ್ದರು.