Advertisement

ಕಂಪನಿಯಿಂದ ಚಿಕಿತ್ಸೆ ವೆಚ್ಚ ವಾಪಸ್‌ ಪಡೆದ ಗ್ರಾಹಕ

12:10 PM Jun 04, 2018 | Team Udayavani |

ಬೆಂಗಳೂರು: ಜಾಹೀರಾತಿಗೆ ಮರುಳಾಗಿ ಬೋಳುತಲೆಯಲ್ಲಿ ಕೂದಲು ಬರಿಸಿಕೊಳ್ಳಲು ಸಾವಿರಾರು ರೂ. ವೆಚ್ಚ ಮಾಡಿಯೂ, ಕೂದಲು ಬೆಳೆಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಗ್ರಾಹಕರ ವೇದಿಕೆ ಮೊರೆ ಹೋಗಿ ಕಳೆದುಕೊಂಡ ಹಣವನ್ನು ಬಡ್ಡಿ ಸಹಿತ ವಾಪಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬೋಳುತಲೆಯಲ್ಲಿ ಕೂದಲು ಬರುವ ಚಿಕಿತ್ಸೆ ನೀಡುತ್ತೇವೆ ಎಂಬ ಖಾಸಗಿ ಹೆಲ್ತ್‌ಕೇರ್‌ನ ಭರವಸೆ ನಂಬಿ ಹಣ ಕಟ್ಟಿದ ಬಳಿಕ ಚಿಕಿತ್ಸೆ ಫ‌ಲ ಕಾಣದಿದ್ದಾಗ, ಅಸಮರ್ಪಕ ಸೇವೆ ನೀಡಿದ್ದ ಖಾಸಗಿ ಹೆಲ್ತ್‌ಕೇರ್‌ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದ ಬೆಳ್ಳಂದೂರು ನಿವಾಸಿ ಅಮೃಜೀತ್‌ ಸಿಂಗ್‌ (45) ಎಂಬುವವರು ಸ್ವತಃ ವಾದ ಮಂಡಿಸಿ ಒಂದು ವರ್ಷದ ಬಳಿಕ ಜಯ ಪಡೆದಿದ್ದಾರೆ.

ಅಮೃಜೀತ್‌ ಸಿಂಗ್‌ ವಾದ ಪುರಸ್ಕರಿಸಿರುವ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಯ 1ನೇ ಗ್ರಾಹಕ ವೇದಿಕೆ, ಚಿಕಿತ್ಸೆಗಾಗಿ ಪಾವತಿಸಿದ್ದ 56,180 ರೂ. ಮತ್ತು ಅದಕ್ಕೆ 2015ರ ಜ.11ರಿಂದ ಅನ್ವಯವಾಗುವಂತೆ ಶೇ.12ರಷ್ಟು ಬಡ್ಡಿ ಸೇರಿಸಿ ವಾಪಾಸ್‌ ನೀಡುವಂತೆ ಹೆಲ್ತ್‌ಕೇರ್‌ಗೆ ಆದೇಶಿಸಿದೆ. ಅಲ್ಲದೆ, ಹಣ ಕಳೆದುಕೊಂಡು ಮಾನಸಿಕ ಯಾತನೆ ಅನುಭವಿಸುವಂತೆ ಮಾಡಿದ ತಪ್ಪಿಗಾಗಿ ಅಮೃಜೀತ್‌ ಸಿಂಗ್‌ಗೆ 15 ಸಾವಿರ ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ.

ನಮ್ಮಲ್ಲಿ ಚಿಕಿತ್ಸೆ ಪಡೆದರೆ ಬೋಳು ತಲೆಯಲ್ಲಿ ಶೇ.40ರಿಂದ 50ರಷ್ಟು ಕೂದಲು ಬೆಳೆಯಲಿದೆ ಎಂದು ಭರವಸೆ ನೀಡಿರಲಿಲ್ಲ ಎಂಬ ಆಸ್ಪತ್ರೆಯವರ ವಾದವನ್ನು ಗ್ರಾಹಕ ವೇದಿಕೆ ತಳ್ಳಿಹಾಕಿದ್ದು, ಗ್ರಾಹಕ ಅಮೃಜೀತ್‌ ಆಸ್ಪತ್ರೆಗೆ ಹಣ ಪಾವತಿಸಿದ್ದ ರಸೀದಿ, ಹೆಲ್ತ್‌ಕೇರ್‌ ಸಿಬ್ಬಂದಿಯೊಬ್ಬರ ಇ-ಮೇಲ್‌ ಪ್ರತಿಕ್ರಿಯೆ ಇನ್ನಿತರೆ ದಾಖಲೆಗಳ ಅನ್ವಯ ಗ್ರಾಹಕನಿಗೆ ಹಣ ಮರುಪಾವತಿ ಮಾಡಲು ಆದೇಶಿಸಿದೆ.

ಜಾಹೀರಾತು ನೋಡಿ ಮರುಳಾದರು: “ನಮ್ಮಲ್ಲಿ ಚಿಕಿತ್ಸೆ ಪಡೆದರೆ ಬೋಳುತಲೆಯಲ್ಲಿ ಕೂದಲು ಬರುವುದು ಖಚಿತ’ ಎಂಬ ಜಾಹೀರಾತುಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ. ಅಮೃಜೀತ್‌ ಸಿಂಗ್‌ಗೆ ಕೂದಲು ಉದುರುವ ಸಮಸ್ಯೆಯಿತ್ತು. ತಲೆ ಬಹುತೇಕ ಬೋಳಾಗಿತ್ತು. ಹೀಗಾಗಿ ಜಾಹೀರಾತು ನೋಡಿ ಚಿಕಿತ್ಸೆ ಮೂಲಕ ಕೂದಲು ಬರಿಸಿಕೊಳ್ಳಲು ನಿರ್ಧರಿಸಿದ್ದರು.

Advertisement

ಅದರಂತೆ, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಪ್ರತಿಷ್ಠಿತ ಹೆಲ್ತ್‌ ಕೇರ್‌ಗೆ 2015ರ ಜನವರಿಯಲ್ಲಿ ಭೇಟಿ  ನೀಡಿ ಚರ್ಚಿಸಿದ್ದರು. ಈ ವೇಳೆ ಹೆಲ್ತ್‌ಕೇರ್‌ ಸಿಬ್ಬಂದಿ, ತಲೆಯಲ್ಲಿ ಶೇ 40ರಿಂದ 50ರಷ್ಟು ಕೂದಲು ಬೆಳೆಸುವ ಭರವಸೆ ಹಾಗೂ ಮುಖದಲ್ಲಿನ ಅನಗತ್ಯ ಕೂದಲು ತೆಗೆದು ಹಾಕುವ ಟ್ರೀಟ್‌ಮೆಂಟ್‌ ನೀಡಲಾಗುವುದು. ಚಿಕಿತ್ಸೆಗೆ 56,180 ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದ್ದರು.

ಅದರಂತೆ ಜನವರಿ 11ರಂದು ಕ್ರೆಡಿಟ್‌ ಕಾರ್ಡ್‌ ಮೂಲಕ ಅಮೃಜೀತ್‌ ಹಣ ಪಾವತಿಸಿದ್ದರು. ಬಳಿಕ ಚಿಕಿತ್ಸೆ ಪಡೆದರಾದರೂ ತಲೆಯಲ್ಲಿ ಕೂದಲು ಬರಲಿಲ್ಲ. ಅಲ್ಲದೆ, ಕ್ರೆಡಿಟ್‌ ಕಾರ್ಡ್‌ನಿಂದ ಪಾವತಿಸಿದ್ದ ಮೊತ್ತವನ್ನು ಕಂತುಗಳ ರೂಪದಲ್ಲಿಯೂ ಪರಿವರ್ತಿಸಿಕೊಟ್ಟಿರಲಿಲ್ಲ. ಇದರಿಂದ ಕಂಗಾಲಾದ ಅವರು ಹಣ ವಾಪಸ್‌ ಮಾಡುವಂತೆ ಮನವಿ ಮಾಡಿದ್ದರು.

ಆದರೆ, ಸಿಬ್ಬಂದಿ ಹಣ ವಾಪಸ್‌ ನೀಡಲು ಒಪ್ಪಲಿಲ್ಲ. ನಂತರ ಹೆಲ್ತ್‌ಕೇರ್‌ ಸಿಬ್ಬಂದಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸುತ್ತಿರಲಿಲ್ಲ. ಸುಮಾರು ಎರಡು ವರ್ಷ ಹಣ ವಸೂಲಿಗೆ ಪ್ರಯತ್ನಿಸಿದರೂ ಪ್ರಯೋಜನವಾಗದಾಗ 2017ರಲ್ಲಿ ಗ್ರಾಹಕ ವೇದಿಕೆ ಮೊರೆಹೋಗಿದ್ದರು.

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next