Advertisement

ಕ್ಲಾಕ್‌ ಟವರ್‌ ಲೂಪ್‌ ರಸ್ತೆ ಸುತ್ತ ಕಾಮಗಾರಿ: ವಾಹನ ದಟ್ಟಣೆ

02:08 PM Jun 15, 2022 | Team Udayavani |

ಮಹಾನಗರ: ನಗರದ ಹೃದಯಭಾಗದಂತಿರುವ ಹಂಪನಕಟ್ಟೆ ಸುತ್ತಮುತ್ತಲೂ ಹಲವು ಅಭಿವೃದ್ಧಿ ಕಾಮ ಗಾರಿಗಳು ಪ್ರಗತಿಯಲ್ಲಿದೆ. ಈ ಕಾಮಗಾರಿ ಗಳು ಭವಿಷ್ಯದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಿದ್ದರೂ, ಕಾಮಗಾರಿ ವೇಳೆ ತೆಗೆದುಕೊಳ್ಳದ ಪೂರಕ ಕ್ರಮಗಳ ಪರಿಣಾಮ ಸುತ್ತಲಿನ ಪ್ರದೇಶಗಳಲ್ಲಿ ವಾಹನ ದಟ್ಟಣೆಗೆ ಕಾರಣವಾಗಿದೆ. ಇದ ರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

Advertisement

ನಗರದಲ್ಲಿ ಕ್ಲಾಕ್‌ಟವರ್‌-ಎ.ಬಿ. ಶೆಟ್ಟಿ ವೃತ್ತ-ಹ್ಯಾಮಿಲ್ಟನ್‌ ವೃತ್ತ-ರಾವ್‌ ಆ್ಯಂಡ್‌ ರಾವ್‌ ವೃತ್ತ ಮುಖೇನ ಮತ್ತೆ ಕ್ಲಾಕ್‌ ಟವರ್‌ ಸಂಪರ್ಕಿತ ರಸ್ತೆಯನ್ನು ಲೂಪ್‌ ರಸ್ತೆಯನ್ನಾಗಿ ಸ್ಮಾರ್ಟ್‌ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆ ಗಳ ಸುತ್ತಲೂ ಪ್ರಮುಖ ನಾಲ್ಕು ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿದೆ. ಅಂಡರ್‌ಪಾಸ್‌ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಅಂಡರ್‌ಪಾಸ್‌ ಬಳಿಯ ಕ್ಲಾಕ್‌ಟವರ್‌ ಬಳಿ ಒಂದು ಭಾಗದ ಸಂಪರ್ಕಿತ ರಸ್ತೆಯನ್ನು ಅಗೆಯಲಾಗಿದ್ದು, ಸದ್ಯ ಒಂದು ಪಥದಲ್ಲಿ ಮಾತ್ರ ವಾಹನ ಸಂಚರಿಸುತ್ತಿದೆ. ಈ ಭಾಗದಲ್ಲಿ ಸಿಟಿ ಬಸ್‌, ಸರಕಾರಿ ಬಸ್‌ ಸೇರಿದಂತೆ ನೂರಾರು ವಾಹನಗಳು ಸಂಚರಿಸುವಾಗ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಸ್ಟೇಟ್‌ಬ್ಯಾಂಕ್‌ನಲ್ಲಿ ಸರ್ವೀಸ್‌ ಬಸ್‌ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಪರಿಣಾಮ, ಕೆಎಸ್ಸಾರ್ಟಿಸಿ ಬಸ್‌ಗಳನ್ನು ಎ.ಬಿ. ಶೆಟ್ಟಿ ವೃತ್ತ ಬಳಿಯ ಆರ್‌ಟಿಒ ಕಚೇರಿ ಬಳಿ ಸಾಲಾಗಿ ನಿಲ್ಲಿಸಲಾಗಿದೆ. ಪೊಲೀಸ್‌ ಆಯುಕ್ತರ ಕಚೇರಿ ಬಳಿ ಯಿಂದ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಸಂಪರ್ಕಿತ ಸರ್ವೀಸ್‌ ರಸ್ತೆಯನ್ನು ಮುಚ್ಚಲಾಗಿದೆ.

ಪರಿಣಾಮ ಸುತ್ತು ಹಾಕಿಕೊಂಡು ವಾಹನ ಪ್ರವೇಶ ಪಡೆಯಬೇಕಾದ ಪರಿಸ್ಥಿತಿ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣ ಸಂಪರ್ಕದ ರಸ್ತೆಯಲ್ಲಿಯೂ ಕಾಮಗಾರಿ ಆರಂಭಗೊಳ್ಳಲಿದೆ. ಈ ರಸ್ತೆಯಲ್ಲಿ ಫುಟ್‌ಪಾತ್‌, ಚರಂಡಿ ಸೇರಿದಂತೆ ಅಭಿವೃದ್ಧಿಗೆಂದು ಮತ್ತೆ ರಸ್ತೆ ಅಗೆಯಲಾಗುತ್ತದೆ. ಮುಂಬರುವ ದಿನಗಳಲ್ಲಿ ಇವು ಕೂಡ ವಾಹನ ದಟ್ಟಣೆಗೆ ಕಾರಣವಾಗುವ ಸಾಧ್ಯತೆ ಇದೆ.

ಟ್ರಾಫಿಕ್‌ ಜಾಮ್‌ಗೆ ಕಾರಣವಾಗುತ್ತಿದೆ ʼಐಲ್ಯಾಂಡ್‌’

ನಗರದ ಕ್ಲಾಕ್‌ಟವರ್‌, ಎ.ಬಿ. ಶೆಟ್ಟಿ ವೃತ್ತ ಮತ್ತು ಹ್ಯಾಮಿಲ್ಟನ್‌ ವೃತ್ತದಲ್ಲಿ ಟ್ರಾಫಿಕ್‌ ಐಲ್ಯಾಂಡ್‌ ನಿರ್ಮಾಣ ಮಾಡಿದ್ದು, ಇವುಗಳು ವಾಹನ ದಟ್ಟಣೆಗೆ ಮುಖ್ಯ ಕಾರಣವಾಗುತ್ತಿದೆ. ನಗರದಲ್ಲಿ ಟ್ರಾಫಿಕ್‌ ಐಲ್ಯಾಂಡ್‌ ನಿರ್ಮಾಣ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚು.

Advertisement

ಈ ಹಿಂದಿನಂತೆ ವೃತ್ತ ನಿರ್ಮಿಸಿ ಕೊಟ್ಟರೆ ಯಾವುದೇ ಕಡೆಯಿಂದ ಬರುವ ವಾಹನಗಳಿಗೆ ಸುಗಮ ಸಂಚಾರ ಸುಲಭ ಸಾಧ್ಯವಾಗಲಿದೆ ಎಂಬ ಅಭಿ ಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಅವೈಜ್ಞಾನಿಕ ಟ್ರಾಫಿಕ್‌ ಐಲ್ಯಾಂಡ್‌ನಿಂದ ಅಪಘಾತ, ವಾಹನ ದಟ್ಟಣೆ, ಸುತ್ತು ಬಳಸಿ ಸಂಚರಿಸುವ ಪ್ರಮೇಯ ಎದುರಾಗಲಿದೆ ಎಂದು ಜನಸಾಮಾನ್ಯರು ಅಭಿಪ್ರಾಯಪಟ್ಟಿದ್ದಾರೆ.

ಹ್ಯಾಮಿಲ್ಟನ್‌ ಬಳಿ ಅವೈಜ್ಞಾನಿಕ ಟ್ರಾಫಿಕ್‌ ಐಲ್ಯಾಂಡ್‌ನಿಂದಾಗಿ ಬಂದರ್‌ ಹಾಗೂ ನೆಲ್ಲಿಕಾಯಿ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಅಥವಾ ರೊಜಾರಿಯೋ ಶಾಲೆಯ ಕಡೆಗೆ ತೆರಳಬೇಕಾದರೆ ಕ್ಲಾಕ್‌ ಟವರ್‌ ಮೂಲಕ ಸುತ್ತಾಡಬೇಕಿದೆ.

ಇದರಿಂದ ಸುಮಾರು 2 ಕಿ.ಮೀ. ಕ್ರಮಿಸಬೇಕಿದೆ. ಅಲ್ಲದೆ ಸಮಯವೂ ವ್ಯರ್ಥವಾಗಲಿದೆ. ಜತೆಗೆ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ವಾಹನ ದಟ್ಟಣೆಯೂ ಹೆಚ್ಚಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತಿಯಲಿರುವ ಕಾಮಗಾರಿ

  • ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣ
  •  ಹಂಪನಕಟ್ಟೆ ಅಂಡರ್‌ಪಾಸ್‌-ಪಾರ್ಕ್‌ ಅಭಿವೃದ್ಧಿ/ರಸ್ತೆ ಅಗೆತ
  •  ಕ್ಲಾಕ್‌ಟವರ್‌ ಬಳಿ ಟ್ರಾಫಿಕ್‌ ಐಲ್ಯಾಂಡ್‌
  •  ಹ್ಯಾಮಿಲ್ಟನ್‌ ವೃತ್ತ ಬಳಿ ಟ್ರಾಫಿಕ್‌ ಐಲ್ಯಾಂಡ್‌
  •  ರೈಲ್ವೇ ನಿಲ್ದಾಣ ರಸ್ತೆ ಫುಟ್‌ಪಾತ್‌ ಅಭಿವೃದ್ಧಿ (ಸದ್ಯದಲ್ಲೇ ಆರಂಭ)

ಸ್ಮಾರ್ಟ್‌ಸಿಟಿ ಕಾಮಗಾರಿಯಿಂದಾಗಿ ನಗರದ ಹ್ಯಾಮಿಲ್ಟನ್‌ ವೃತ್ತ ಮತ್ತು ಕ್ಲಾಕ್‌ಟವರ್‌ ಬಳಿವಾಹನ ದಟ್ಟಣೆ ತುಸು ಏರಿಕೆಯಾಗುತ್ತಿದೆ. ಈ ಭಾಗದ ಬಹುತೇಕಕಾಮಗಾರಿಗಳು ಕೊನೆಯ ಹಂತದಲ್ಲಿದ್ದು, ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಳಿಕ ಟ್ರಾಫಿಕ್‌ ಸಮಸ್ಯೆ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ.   –ಅರುಣ್‌ ಪ್ರಭ, ಸ್ಮಾರ್ಟ್‌ಸಿಟಿ ಜನರಲ್‌ ಮ್ಯಾನೇಜರ್‌

Advertisement

Udayavani is now on Telegram. Click here to join our channel and stay updated with the latest news.

Next