Advertisement

Mandyaದಲ್ಲಿ ವಿಶ್ವದ ಮೊದಲ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣ; ಒಬಾಮಗೆ ಆಹ್ವಾನ

10:28 AM Sep 01, 2023 | Team Udayavani |

ಮಂಡ್ಯ: ಅಮೆರಿಕಾದ ಪ್ರಸಿದ್ಧ ಸರ್ಜನ್‌ ಜನರಲ್‌ ಹಲ್ಲೇಗೆರೆ ವಿವೇಕ್‌ಮೂರ್ತಿ ಅವರ ತಂದೆ ಡಾ.ಎಲ್‌.ಎನ್‌.ಮೂರ್ತಿ ಹಲ್ಲೇಗೆರೆ ಅವರ ಸ್ಕೋಪ್‌ ಫೌಂಡೇಷನ್‌ ವತಿಯಿಂದ “ಭೂದೇವಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ’ (ಮದರ್‌ ಆಫ್‌ ಅರ್ಥ್)ವನ್ನು ಮಂಡ್ಯ ದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು, ಇದರ ಜೊತೆ ಗೆ 14 ಅಡಿ ಎತ್ತರದ ಭೂದೇವಿ ಪ್ರತಿಮೆ ನಿರ್ಮಿಸುವ ಯೋಜ ನೆಯನ್ನು ರೂಪಿಸಲಾಗಿದೆ.

Advertisement

ಏಕತೆಯ ಸಂಕೇತ ಎಂದು ಕರೆಯಲಾಗುವ ಈ ಯೋಜನೆಯು ಪ್ರಪಂಚದಲ್ಲೇ ಮೊದಲನೆಯದಾಗಿದೆ. ಜಗತ್ತಿನ ಯಾವುದೇ ಭಾಗದಿಂದ ಯಾವುದೇ ವ್ಯಕ್ತಿ ಇದರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಸಂಬಂಧ ಹೊಂದಬಹುದಾಗಿದೆ. ಸುಮಾರು 70
ಕೋಟಿ ರೂ. ವೆಚ್ಚದಲ್ಲಿ ತಮ್ಮ ಸ್ವಗ್ರಾಮದ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ತಮ್ಮ 12 ಎಕರೆ ಭೂಮಿಯಲ್ಲಿ ಮದರ್‌ ಆಫ್‌ ಅರ್ಥ್ ನಿರ್ಮಾಣವಾಗಲಿದೆ.

ಏಕಶಿಲೆ ಕಲ್ಲು ಆಗಮನ: 14 ಅಡಿ ಎತ್ತರದ ಮದರ್‌ ಆಫ್‌ ಅರ್ಥ್ ಅಂದರೆ ಭೂಮಿತಾಯಿಯ ಪ್ರತಿಮೆಯನ್ನು
ಒಂದೇ ಬಂಡೆಯಿಂದ ಪ್ರಸಿದ್ಧ ಶಿಲ್ಪಿಗಳಿಂದ ಕೆತ್ತಲಾಗುತ್ತಿದೆ. ಪ್ರತಿಮೆಯಲ್ಲಿ ನೀರು ಮತ್ತು ಅಲೆಗಳ ಚಿಹ್ನೆಗಳಿರುತ್ತವೆ. ಇದನ್ನು ನೀಲಿ ಗ್ರಾನೈಟ್‌ ಮತ್ತು ವೈಟ್‌ಸ್ಟೋನ್‌ನಿಂದ ನಿರ್ಮಿಸಲಾಗುತ್ತಿದೆ. ಚಿಕ್ಕಬಳ್ಳಾಪುರದ ಕ್ವಾರೆಯಿಂದ ಏಕಶಿಲೆಯ ಕಲ್ಲು ಗ್ರಾಮಕ್ಕೆ ಬರಲಿದೆ.

ಖ್ಯಾತ ಶಿಲ್ಪಿಗಳಿಂದ ವಿನ್ಯಾಸ: ಸುಭಾಷ್‌ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಕೆತ್ತಿದ್ದ ಖ್ಯಾತ ಶಿಲ್ಪಿ ಯೋಗಿರಾಜ್‌ ಅವರು ಭೂದೇವಿಯ ಪ್ರತಿಮೆಯನ್ನು ಕೆತ್ತಲಿದ್ದಾರೆ ಎನ್ನಲಾಗುತ್ತಿದ್ದು, ಹಲ್ಲೆಗೆರೆ ಡಾ.ಮೂರ್ತಿ ಅವರು ಯೋಜನೆಯಲ್ಲಿ ಕೆಲಸ ಮಾಡುವ ಸಂಬಂಧ ಚರ್ಚಿಸಿದ್ದಾರೆನ್ನಲಾಗಿದೆ. ಅಲ್ಲದೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಮುಖ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರನ್ನು ಸಹ ಸಂಪರ್ಕಿಸಿದ್ದು, ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಸಾಕ್ರಟೀಸ್‌ ನಿಂದ ಸ್ವಾಮಿ ವಿವೇಕಾನಂದರವರೆಗಿನ 64 ದಾರ್ಶನಿಕರ ಪ್ರತಿಮೆಗಳು ಇರಲಿವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು 13 ದೇಶಗಳಲ್ಲಿರುವ ಪ್ರತಿಷ್ಠಾನದ ಸ್ವಯಂ ಸೇವಕರೊಂದಿಗೆ ಹಲ್ಲೇಗೆರೆ ಡಾ.ಮೂರ್ತಿ ಅವರು ಸಭೆ ನಡೆಸಿದ್ದು, ಡಿಸೆಂಬರ್‌ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲಿ ಭೂಮಿ ಪೂಜೆ ಸಮಾರಂಭ ನಡೆಸಲು ತಯಾರಿ ನಡೆಸಿದ್ದಾರೆ.

ಸೆ.10ರಂದು ವಾಷಿಂಗ್ಟನ್‌ ಡಿಸಿಯಲ್ಲಿ ಉದ್ಘಾಟನೆ: ಇನ್ನು ಮದರ್‌ ಆಫ್‌ ಅರ್ಥ್ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ವಾಕಥಾನ್‌ ಕಾರ್ಯಕ್ರಮವನ್ನು ಯುಎಸ್‌ನ ಪ್ರಥಮ ಮಹಿಳೆ ಜಿಲ್‌ ಬಿಡೆನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಸೆ.10ರಂದು ವಾಷಿಂಗ್ಟನ್‌ ಡಿಸಿಯಲ್ಲಿ ಉದ್ಘಾಟಿಸಲಿದ್ದಾರೆ. ಅಲ್ಲದೆ ವಿದೇಶದ ಬೇರೆ ಬೇರೆ ನಗರಗಳಲ್ಲಿಯೂ ಸಹ ಇದೇ ರೀತಿಯ
ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಡಾ.ಎಲ್‌. ಎನ್‌.ಮೂರ್ತಿ ಹಲ್ಲೇಗೆರೆ ಮಾಹಿತಿ ನೀಡಿದ್ದಾರೆ.

Advertisement

ನಮ್ಮ ಕುಟುಂಬವು ಹಲವಾರು ಚಾರಿಟಿ ಚಟುವಟಿಕೆಗಳಿಗೆ ಹಣ ನೀಡಿದೆ. ಈಗ ಇಡೀ ಯೋಜನೆಗೆ ಸುಮಾರು 70 ಕೋಟಿ ರೂ. ಬೇಕಾಗಿರುವುದರಿಂದ ನಾವು ಕೆಲವು ದಾನಿಗಳನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ಒಟ್ಟಾರೆ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ವಿಶ್ವದ ಮೊದಲ ಭೂತಾಯಿ ಪ್ರತಿಮೆ ಹಾಗೂ ಆಧ್ಯಾತ್ಮಿಕ ಕೇಂದ್ರವಾಗುತ್ತಿರುವುದು ಖುಷಿಯ ವಿಚಾರ ಎಂದು ಹನಕೆರೆ ಎಂ.ಶ್ರೀನಿವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು ಹಾಗೂ ಡಾ.ಮೂರ್ತಿ ಅವರ ಸಹೋದರ ವಸಂತ್‌ಕುಮಾರ್‌ ತಿಳಿಸಿದರು.

ಒಬಾಮಗೆ ಆಹ್ವಾನ
ಭೂಮಿಪೂಜೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಅವರ ಪತ್ನಿ ಮಿಚೆಲ್‌ ಒಬಾಮ ಅವರನ್ನು ಆಹ್ವಾನಿಸಲು ತಯಾರಿ ನಡೆಸಿದ್ದಾರೆ. ಇನ್ನು ಎಂಟು ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಯೋಗ ಮತ್ತು ಧ್ಯಾನ ಸಾತ್ವಿಕ ಕೇಂದ್ರದ ಶಂಕುಸ್ಥಾಪನೆಗೆ ಟಿಬೆಟಿಯನ್‌ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಆಹ್ವಾನಿಸಲು ಪ್ರತಿಷ್ಠಾನವು ಯೋಜನೆ ರೂಪಿಸಿದೆ ಎಂದು ಕರ್ನಾಟಕ ಸಂಘದ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು.

*ಎಚ್.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next