ಬಳ್ಳಾರಿ: ಮಹಿಳಾ ಸಬಲೀಕರಣ, ಸಮಾನತೆಗೆ ಸ್ಥಾಪಿಸಲಾಗಿರುವ “ಅವಳ ಹೆಜ್ಜೆ’ ಸಂಸ್ಥೆ ಆಶ್ರಯದಲ್ಲಿ ಮಹಿಳೆಯರು ಪರಸ್ಪರ ಬೆಂಬಲಕ್ಕೆ ನಿಲ್ಲಲು ಸಾಧ್ಯವಾಗುವಂತಹ ವೇದಿಕೆಗಳನ್ನು ರಾಜ್ಯಾದ್ಯಂತ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ ಸಮಾಜ ಒಂದು ಹಂತಕ್ಕೆ ಮೇಲ್ಮಟ್ಟಕ್ಕೆ ಏರಲಿದೆ ಎನ್ನುವ ಆಶಾಭಾವನೆಯಿಂದ ಕಳೆದ ವರ್ಷ ಬೆಂಗಳೂರು ನಗರದಲ್ಲಿ “ಅವಳ ಹೆಜ್ಜೆ’ ಸಂಸ್ಥೆ
ಆರಂಭಿಸಲಾಗಿದೆ ಎಂದು ವಿವರಿಸಿದರು. ಸಂಸ್ಥೆ ಆಶ್ರಯದಲ್ಲಿ ಈಗಾಗಲೇ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಕಡೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿಯಲ್ಲೂ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಅದೇ ರೀತಿ ಸಂಸ್ಥೆಯ ಮೈಸೂರಿನ ಸಂಘಟಕಿ ಉಷಾ ಸಂಪತ್ ಕುಮಾರ್ ಅವರು ಆಗಸ್ಟ್ ತಿಂಗಳಲ್ಲಿ ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಶಿಬಿರ ಆಯೋಜಿಸಲು ಪ್ರಾಯೋಜಕರು ಬೇಕಾಗಿದ್ದಾರೆ. ದೊರೆತ ಬಳಿಕ ಎಲ್ಲ ಜಿಲ್ಲೆಗಳಲ್ಲೂ ವಿನೂತನ ತರಬೇತಿ ಶಿಬಿರ, ಕರ್ನಾಟಕದ ಸಮಕಾಲೀನ ಸಾಧಕಿಯರು ಎನ್ನುವ ವಿಡಿಯೋ ಸಂದರ್ಶನ, ಸರಣಿ ಹಾಗೂ ವಾರ್ಷಿಕ ಹಬ್ಬ ಕನ್ನಡತಿ ಉತ್ಸವಗಳನ್ನು ಹಮ್ಮಿಕೊಳ್ಳುವ ಯೋಜನೆಗಳಿವೆ ಎಂದು ಹೇಳಿದರು. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಎನ್ನುವುದನ್ನು ಮಾಧ್ಯಮಗಳಲ್ಲಿ ನೋಡುತ್ತೇವೆ.
ಆದರೆ, ವೃತ್ತಿಗೆ ಸೇರುವವರಲ್ಲಿ ಪುರುಷರೇ ಮೇಲುಗೈ ಆಗಿದ್ದಾರೆ. ಹೀಗಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾಗುವ ಸಂದರ್ಶನ, ವೇತನ, ಕಾರ್ಯ ಯೋಜನೆ, ಬಡ್ತಿ ಸೇರಿದಂತೆ ವಿವಿಧ ಹಂತಗಳಲ್ಲಿ ಎದುರಾಗುವ ಅಡೆತಡೆ, ಪಕ್ಷಪಾತ ಮೆಟ್ಟಿ ನಿಲ್ಲುವ ಜಾಣ್ಮೆ, ಯಶಸ್ವಿಯ ಹಾದಿಗಳಲ್ಲಿ ಸಾಗಲು ಅಳವಡಿಸಿಕೊಳ್ಳಬೇಕಾದ ಕ್ರಿಯಾತ್ಮಕತೆ ತರಬೇತಿಯನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಗಾಯತ್ರಿ, ಉಷಾ ಸಂಪತ್ ಕುಮಾರ್ ಇದ್ದರು
ಕಿರುಚಿತ್ರಕ್ಕೆ ಆಹ್ವಾನ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡತಿಯರ ಪಾತ್ರ ಸ್ಮರಿಸಲು ಸಂಸ್ಥೆಯಿಂದ
ಕನ್ನಡತಿ ಉತ್ಸವ-2018 ಆಯೋಜಿಸಲಾಗುತ್ತದೆ. ಈ ವೇಳೆ ಕಿರುಚಿತ್ರ ನಿರ್ಮಿಸಬಯಸುವ ಮಹಿಳೆಯರು ಆ.31ರೊಳಗೆ ತಮ್ಮ ಕಥೆಯ ಸಂಕ್ಷಿಪ್ತ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 8217297238ಕ್ಕೆ ಸಂಪರ್ಕಿಸಬಹುದು.
ಶಾಂತಲಾ ದಾಮ್ಲೆ, “ಅವಳ ಹೆಜ್ಜೆ’ ಸಂಸ್ಥಾಪಕಿ