ಮಸ್ಕಿ: ತಾಲೂಕಿನ ಬುದ್ದಿನ್ನಿ (ಎಸ್) ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಮುನ್ನವೇ ಕಟ್ಟಡ ನಿರ್ಮಿಸಲಾಗಿದೆ. ಲಕ್ಷಾಂತರ ವ್ಯಯಿಸಿ ಬಿಲ್ಡಿಂಗ್ ನಿರ್ಮಿಸಿದರೂ ಪ್ರೌಢಶಿಕ್ಷಣಕ್ಕೆ ಇಲ್ಲಿನ ವಿದ್ಯಾರ್ಥಿಗಳು ದೂರದ ಊರಿಗೆ ಹೋಗಬೇಕು. ಆದರೆ ಇಂತಹ ಪರಿಸ್ಥಿತಿಯಲ್ಲಿ ಈಗ ಇದ್ದ ಕಟ್ಟಡದಲ್ಲಿ ವಿದ್ಯಾರ್ಥಿಗಳ ಬದಲಾಗಿ ಪುಂಡರ ಪ್ರವೇಶ ನಡೆಯುತ್ತಿದೆ!.
ಇಲ್ಲಿನ ಪ್ರೌಢಶಾಲೆ ವಿವಾದ ರಾಜ್ಯಮಟ್ಟದಲ್ಲಿ ಸದ್ದು ಮಾಡಿದೆ. ಶಿಕ್ಷಣ ಇಲಾಖೆಗೆ ಇದು ಸವಾಲಾಗಿ ಪರಿಣಮಿಸಿದೆ. ಇಲ್ಲಿ ಮಕ್ಕಳು, ಪೋಷಕರು ಶಾಲೆ ಆರಂಭಕ್ಕೆ ಆಗ್ರಹಿಸಿ ಆಗಾಗ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಇದಕ್ಕೆ ಬೆದರಿದ ಹಾಲಿ-ಮಾಜಿ ಶಾಸಕರಿಬ್ಬರು ಪ್ರೌಢಶಾಲೆ ಆರಂಭಕ್ಕೆ ಶತಪ್ರಯತ್ನ ಮಾಡಿದ್ದಾರೆ. ಆದರೆ ಇದು ಇನ್ನು ಪರಿಹಾರವಾಗಿಲ್ಲ. ಇಷ್ಟರ ನಡುವೆ ಈಗ ನೆಟ್ಟಗಿರುವ ಶಾಲಾ ಕಟ್ಟಡಕ್ಕೆ ಪುಂಡ-ಪೋಕರಿಗಳ ಕಾಟ ಶುರುವಾಗಿದೆ.
ಏನಿದು ಪ್ರಕರಣ?: ಬುದ್ದಿನ್ನಿ (ಎಸ್) ಗ್ರಾಮದಲ್ಲಿ ಹಲವು ವರ್ಷಗಳಿಂದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದೆ. ಕೇವಲ ಬುದ್ದಿನ್ನಿ ಎಸ್. ಗ್ರಾಮದ ವಿದ್ಯಾರ್ಥಿಗಳು ಮಾತ್ರವಲ್ಲ; ಹಾರ್ವಾಪುರ, ಹೂವಿಬಾವಿ, ಕಾಟಗಲ್, ಮುದಬಾಳ, ಬೆಂಚಮರಡಿ ಸೇರಿ ಇತರೆ ಹಳ್ಳಿಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. 1-8ನೇ ತರಗತಿವರೆಗೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 8ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ 9-10ನೇ ತರಗತಿ ಅವಶ್ಯಕ ಹಿನ್ನೆಲೆಯಲ್ಲಿ ಇಲ್ಲಿ ಪ್ರೌಢಶಾಲೆ ಮಂಜೂರಿಗೆ ಬೇಡಿಕೆ ವ್ಯಕ್ತವಾಗಿತ್ತು. ಪ್ರೌಢಶಾಲೆಗಾಗಿ ಸ್ವತಃ ಗ್ರಾಮಸ್ಥರೇ ಜಮೀನು ಬಿಟ್ಟುಕೊಟ್ಟಿದ್ದಾರೆ.
ಸರ್ಕಾರ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಲಕ್ಷಾಂತರ ರೂ. ಹಣ ಬಿಡುಗಡೆ ಮಾಡಿದೆ. ಈಗ ಪ್ರೌಢಶಾಲೆ ಭವ್ಯ ಕಟ್ಟಡವೂ ನಿರ್ಮಾಣವಾಗಿದೆ. ಆದರೆ ಪ್ರೌಢಶಾಲೆಯೇ ಇನ್ನೂ ಮಂಜೂರಾಗಿಲ್ಲ. ಕಳೆದ ಮೂರ್‍ನಾಲ್ಕು ವರ್ಷಗಳಿಂದಲೂ ಪ್ರೌಢಶಾಲೆ ಮಂಜೂರಿ ಮಾಡಬೇಕೆಂದು ಹೋರಾಟಗಳು ನಡೆಯುತ್ತಿವೆ. ಈ ಹಿಂದಿನ ಶಾಸಕ ಪ್ರತಾಪಗೌಡ ಪಾಟೀಲ್, ಹಾಲಿ ಶಾಸಕ ಆರ್. ಬಸನಗೌಡ ತುರುವಿಹಾಳ ಖುದ್ದಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದಾರೆ. ಆದರೆ ಈ ವರ್ಷವೂ ಈ ಸಮಸ್ಯೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ.
ಈಗ ಕಿರಿಕಿರಿ: ಪ್ರೌಢಶಾಲೆ ಆರಂಭವಾಗುತ್ತಿಲ್ಲ ಎನ್ನುವ ಚಿಂತೆ ಒಂದೆಡೆಯಿದ್ದರೆ ಈಗ ಪ್ರೌಢಶಾಲೆಗೆ ನಿರ್ಮಿಸಿದ ಕಟ್ಟಡಕ್ಕೆ ಕಿರಿಕಿರಿ ಶುರುವಾಗಿದೆ. ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಶಾಲೆ ಕಿಟಕಿ, ಬಾಗಿಲು ಮುರಿಯಲಾಗುತ್ತಿದೆ. ಹಲವು ದಿನಗಳಿಂದ ಇದು ಹೀಗೆ ಪುನರಾವರ್ತನೆಯಾಗುತ್ತಿದ್ದು, ಹೀಗೆ ಇಂತಹ ಕೃತ್ಯ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಲೆ ಶಿಕ್ಷಕರು, ಎಸ್ ಡಿಎಂಸಿ ಸಮಿತಿಯವರು ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರಿಗೆ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಹಲವು ಬಾರಿ ಹೋರಾಟ ಮಾಡಲಾಗಿದೆ. ಆದರೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಪ್ರೌಢ ಶಾಲೆಗಾಗಿ ಈಗಾಗಲೇ ಜಮೀನು ನೀಡಿದ್ದು, ಸರ್ಕಾರ ಕಟ್ಟಡವನ್ನೂ ಕಟ್ಟಿದೆ. ಆದರೆ ಕಟ್ಟಡ ಕಟ್ಟಿದ ಬಳಿಕವೂ ಶಾಲೆ ಏಕೆ ಆರಂಭಿಸುತ್ತಿಲ್ಲ ಎನ್ನುವುದೇ ತಿಳಿಯುತ್ತಿಲ್ಲ. ಇಲ್ಲಿ ಶಾಲೆ ಆರಂಭಿಸದ್ದಕ್ಕೆ ಕಟ್ಟಡ ಹಾಳು ಮಾಡುವ ಕೆಲಸ ನಡೆದಿದೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
-ನಾಗರೆಡ್ಡೆಪ್ಪ ದೇವರಮನಿ, ಎಸ್‌ಡಿಎಂಸಿ ಅಧ್ಯಕ್ಷ, ಬುದ್ದಿನ್ನಿ ಶಾಲೆ
-ಮಲ್ಲಿಕಾರ್ಜುನ ಚಿಲ್ಕರಾಗಿ