Advertisement

ಉತ್ತರಾಖಂಡದಲ್ಲಿ ಗಡಿ ರಸ್ತೆ ಸಂಸ್ಥೆಯಿಂದ ಮೂರು ವಾರದಲ್ಲಿ ಸೇತುವೆ ನಿರ್ಮಾಣ

11:04 PM Aug 18, 2020 | Team Udayavani |

ನಿರಂತರ ಮಳೆ ಹಾಗೂ ಭಾರೀ ಭೂಕುಸಿತದ ನಡುವೆಯೇ ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ(ಬಿಆರ್‌ಒ)ಯು ಉತ್ತರಾಖಂಡದ ಜೌಲ್ಜಿಬಿ ವಲಯದಲ್ಲಿ 180 ಅಡಿ ಉದ್ದದ ಸೇತುವೆಯೊಂದನ್ನು ಕೇವಲ 3 ವಾರಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಿಸಿದೆ. ಈ ಮೂಲಕ ಪ್ರಾಕೃತಿಕ ವಿಕೋಪದಿಂದ ಅತಂತ್ರರಾಗಿದ್ದ ಅನೇಕ ಗ್ರಾಮಗಳ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.

Advertisement

ಕೊಚ್ಚಿಹೋಗಿತ್ತು ಸೇತುವೆ
ಮೊದಲು ಈ ಪ್ರದೇಶದಲ್ಲಿ 50 ಮೀಟರ್‌ ಉದ್ದದ ಕಾಂಕ್ರೀಟ್‌ ಸೇತುವೆಯೊಂದು ಇತ್ತು. ಆದರೆ ಇತ್ತೀಚೆಗೆ ಉತ್ತರಾಖಂಡದಲ್ಲಿ ಉಂಟಾದ ಮೇಘ ಸ್ಫೋಟದಿಂದಾಗಿ ಏಕಾಏಕಿ ನಾಲೆಗಳು ಹಾಗೂ ನದಿಗಳಲ್ಲಿ ಪ್ರವಾಹ ತಲೆದೋರಿತ್ತು. ಜುಲೈ 27ರಂದು ಭಾರೀ ಪ್ರವಾಹಕ್ಕೆ ಸಿಲುಕಿ ಈ ಸೇತುವೆಯು ಸಂಪೂರ್ಣವಾಗಿ ಕೊಚ್ಚಿಹೋಯಿತು. ಇದೇ ಸಂದರ್ಭದಲ್ಲಿ ಭೂಕುಸಿತದಂಥ ಘಟನೆಗಳೂ ಸಂಭವಿಸಿದ ಕಾರಣ, ಅನೇಕರು ಬಲಿಯಾಗಿದ್ದಲ್ಲದೆ, ರಸ್ತೆ ಸಂಪರ್ಕಗಳೂ ಕಡಿತಗೊಂಡವು.

ಗ್ರಾಮಸ್ಥರಿಗೆ ಸಿಕ್ಕಿತು ರಿಲೀಫ್
ಈ ಸೇತುವೆಯು ಜೌಲ್ಜಿಬಿ ಹಾಗೂ ಮುನ್ಸಿಯಾರಿ ನಡುವಿನ ಸಂಪರ್ಕದ ಕೊಂಡಿಯಾದ ಕಾರಣ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಸುಲಭವಾಯಿತು. ಸೇತುವೆ ನಿರ್ಮಾಣದಿಂದಾಗಿ 20 ಗ್ರಾಮಗಳ 15 ಸಾವಿರಕ್ಕೂ ಅಧಿಕ ಮಂದಿಗೆ ರಿಲೀಫ್ ಸಿಕ್ಕಿತು.

ಸವಾಲುಗಳನ್ನು ಮೆಟ್ಟಿನಿಂತ ಬಿಆರ್‌ಒ
ಸಂಪರ್ಕಕ್ಕಾಗಿ ಇದ್ದ ಸೇತುವೆಯೂ ಕೊಚ್ಚಿಹೋದ ಕಾರಣ ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲೂ ತೊಡಕುಂಟಾಯಿತು. ಇದನ್ನು ಅರಿತ ಬಿಆರ್‌ಒ, ಕೂಡಲೇ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಿತು. ಆದರೆ, ಧಾರಾಕಾರ ಮಳೆ ಹಾಗೂ ಭೂಕುಸಿತದಿಂದಾಗಿ ಪಿತ್ತೋರ್‌ಗಢದಿಂದ ನಿರ್ಮಾಣ ಸಾಮಗ್ರಿಗಳನ್ನು ತರುವುದೇ ದೊಡ್ಡ ಸವಾಲಾಗಿತ್ತು. ಹೀಗಿದ್ದರೂ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತ ಬಿಆರ್‌ಒ, ಸಮರೋಪಾದಿ ಯಲ್ಲಿ ಕಾರ್ಯನಿರ್ವಹಿಸಿ ಆ.16ರಂದು ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿತು.

180 ಅಡಿ ಸೇತುವೆಯ ಉದ್ದ
3 ವಾರಗಳು ನಿರ್ಮಾಣಕ್ಕೆ ತಗಲಿದ ಸಮಯ
20 ಗ್ರಾಮಗಳಿಗೆ ಸಂಪರ್ಕ
15,000ಕ್ಕೂ ಹೆಚ್ಚು ಮಂದಿಗೆ ಅನುಕೂಲ

Advertisement
Advertisement

Udayavani is now on Telegram. Click here to join our channel and stay updated with the latest news.

Next