ಗಂಗಾವತಿ: ತಾಲೂಕಿನ ಸಾಣಾಪುರ ಗ್ರಾಮದ 2.35 ಎಕರೆ ಗಾಂವಠಾಣಾ ಭೂಮಿಯನ್ನು ಕೆಲವರು ಒತ್ತುವರಿ ಮಾಡಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ. ಲಕ್ಷಾಂತರ ರೂ. ಬೆಲೆಬಾಳುವ ಜನವಸತಿಗಾಗಿ ಮೀಸಲಿದ್ದ ಭೂಮಿ ಅನ್ಯರ ಪಾಲಾಗಿದ್ದರೂ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಸಾಣಾಪುರ ಗ್ರಾಮದ ಸರ್ವೇ ನಂಬರ್ 31ರ ಪೈಕಿ 2.35 ಎಕರೆ ಭೂಮಿಯನ್ನು ಸರಕಾರ ಜನವಸತಿಗಾಗಿ ಗಾಂವಠಾಣಾ ಎಂದು ಗುರುತಿಸಿ ಮೀಸಲಿರಿಸಿದ್ದು ಹಲವು ದಶಕಗಳಿಂದ ಕೆಲವರು ಸ್ವಂತ ಭೂಮಿ ಇದ್ದರೂ ಗಾಂವಠಾಣಾ ಭೂಮಿ ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ.
ಇದೀಗ ಸಾಣಾಪುರ ಮಧ್ಯೆ ಭಾಗದಲ್ಲಿ ರಾಜ್ಯ ಹೆದ್ದಾರಿ 130ನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಾಡುವ ಮಾಡುವ ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲು ಮುಖ್ಯಮಂತ್ರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಿಟ್ನಾಳ-ಗಂಗಾವತಿವರೆಗೆ ಚತುಷ್ಪಥ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಸಾಣಾಪುರದಲ್ಲಿ ನೂರಾರು ಮನೆಗಳು, ಗ್ರಾಪಂ ಕಟ್ಟಡ, ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳನ್ನು ತೆರವು ಮಾಡಬೇಕಿದೆ. ಸಾಣಾಪುರ ಗ್ರಾಮಕ್ಕೆಂದು ಮೀಸಲಿರುವ ಸರ್ವೇ ನಂಬರ್ 31ರಲ್ಲಿರುವ 2.35 ಎಕರೆ ಗಾಂವಠಾಣಾ ಭೂಮಿಯಲ್ಲಿ ಅಕ್ರಮವಾಗಿ ಈ ಹಿಂದೆ ಸಾಗುವಳಿ ಚೀಟಿ ನೀಡಿದ್ದನ್ನು ಸಹಾಯಕ ಆಯುಕ್ತರು ರದ್ದುಗೊಳಿಸಿ ರಸ್ತೆ ನಿರ್ಮಾಣದಲ್ಲಿ ನಿರಾಶ್ರಿತರಾಗುವವರಿಗೆ ಮನೆಯ ನಿವೇಶನ ಹಾಗೂ ಸರಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಬಳಕೆ ಮಾಡುವಂತೆ ಸಾಣಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗಾಂವಠಾಣಾ ಭೂಮಿಯನ್ನು ಸಾಗುವಳಿ ಮಾಡಲು ಮಂಜೂರಿ ಮಾಡಲು ಸರಕಾರದ ಹಲವು ನಿಯಮಗಳಿದ್ದರೂ ಅಕ್ರಮ ಸಕ್ರಮ ಕಮಿಟಿಯಲ್ಲಿ ಅರ್ಜಿ ಸಲ್ಲಿಸಿ ಸರ್ವೇ ನಂಬರ್ 31ರಲ್ಲಿರುವ 2.35 ಎಕರೆ ಭೂಮಿಗೆ ಸಾಗುವಳಿ ಚೀಟಿ ಪಡೆಯುವ ಜತೆಗೆ ಅಕ್ಕಪಕ್ಕದಲ್ಲಿರುವ ಪಾರಂಪೋಕ್ ಭೂಮಿಯನ್ನು ಸಹ ಒತ್ತುವರಿ ಮಾಡಿಕೊಂಡಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅಕ್ರಮ ಸಕ್ರಮ ಕಮಿಟಿ ಮೂಲಕ ಸಾಗುವಳಿ ಚೀಟಿ ಪಡೆದಿರುವವರಿಗೆ ಈ ಮೊದಲು ಸಾಗುವಳಿ ಪಟ್ಟಾ ಭೂಮಿ ಸಾಣಾಪುರ ಹಾಗೂ ಇತರೆ ಗ್ರಾಮಗಳಲ್ಲಿದ್ದರೂ ಭೂಮಿ ರಹಿತರೆಂದು ಅಫಿಡವಿಟ್ ಸಲ್ಲಿಸಿ ಸರಕಾರಿ (ಗಾಂವಠಾಣಾ) ಭೂಮಿಯನ್ನು ಪಡೆಯಲಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿ ಕಾರಿಗಳು ಗಾಂವಠಾಣಾ ಭೂಮಿಯ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಂಡು ಖಾಲಿ ಮಾಡಿಸಿ ವಸತಿ ರಹಿತರಿಗೆ ನಿವೇಶನ ಹಂಚಬೇಕಿದೆ.
-ಕೆ. ನಿಂಗಜ್ಜ