Advertisement

ಸ್ಫೂರ್ತಿದಾಯಕ ಶಿಕ್ಷಕರಿಂದ ಉತ್ತಮ ಪ್ರಜೆಗಳ ನಿರ್ಮಾಣ: ನ್ಯಾ|ಆ್ಯಂಟನಿ

10:50 AM Mar 11, 2018 | |

ಮಹಾನಗರ: ಸ್ಫೂರ್ತಿದಾಯಕ ಶಿಕ್ಷಕರಿಂದ ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಉತ್ತಮ ಪ್ರಜೆಗಳಾಗುತ್ತಾರೆ ಹಾಗೂ ಇದರಿಂದ ಶಿಕ್ಷಕರಿಗೂ ಶಿಕ್ಷಣ ಸಂಸ್ಥೆಗೂ ಕೀರ್ತಿ ಬರುತ್ತದೆ ಎಂದು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಹಾಗೂ ಮಂಗಳೂರಿನ ಎಸ್‌.ಡಿ.ಎಂ. ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾ| ಆ್ಯಂಟನಿ ಡೊಮಿನಿಕ್‌ ಹೇಳಿದರು. ಶನಿವಾರ ಇಲ್ಲಿನ ಎಸ್‌ಡಿಎಂ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಅವರು ಉದ್ಘಾಟಿಸಿ ಮಾತನಾಡಿದರು.

Advertisement

ಕಾನೂನು ವ್ಯಾಸಂಗಕ್ಕಾಗಿ ನಾನು ಮಂಗಳೂರಿಗೆ ಬಂದಾಗ ಮುಂದೊಂದು ದಿನ ನಾನು ಈ ಹಂತಕ್ಕೆ ತಲುಪುತ್ತೇನೆ ಎಂದು ಭಾವಿಸಿರಲಿಲ್ಲ. ಎಸ್‌ಡಿಎಂ ಕಾನೂನು ಕಾಲೇಜು ಪ್ರತಿಭೆಗಳ ಆಗರವಾಗಿದ್ದು, ಇಲ್ಲಿನ ಸ್ಫೂರ್ತಿದಾಯಕ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಲಭಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯ ಚಿಲುಮೆ ತುಂಬುವ ಶಿಕ್ಷಕರಿರುವ ಕಾರಣ ನಾನು ಇಷ್ಟೊಂದು ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಯಿತು ಎಂದು ಅವರು ವಿವರಿಸಿದರು.

ಅರ್ಪಣಾ ಮನೋಭಾವ
ಇನ್ನೋರ್ವ ಹಳೆ ವಿದ್ಯಾರ್ಥಿ ದೇಶದ ಅಡೀಶನಲ್‌ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಮುಖ್ಯ ಅತಿಥಿಯಾಗಿ ಮಾತನಾಡಿ, ನ್ಯಾ| ಆ್ಯಂಟನಿ ಡೊಮಿನಿಕ್‌ ಅವರು ಎಸ್‌ಡಿಎಂ ಕಾನೂನು ಕಾಲೇಜು ರೂಪಿಸಿದ ಮೊದಲ ಮುಖ್ಯ ನ್ಯಾಯಾಧೀಶರಾಗಿರುತ್ತಾರೆ. ಪರಿಶ್ರಮ ಮತ್ತು ಅರ್ಪಣಾ ಮನೋಭಾವದ ಸೇವೆ ಅವರನ್ನು ಈ ಹಂತಕ್ಕೆ ಕೊಂಡೊಯ್ದಿದೆ ಎಂದವರು ಅಭಿನಂದಿಸಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಎಸ್‌ಡಿಎಂ ಲಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಆರ್‌. ಬಲ್ಲಾಳ್‌ ಸ್ವಾಗತಿಸಿದರು. ಎಸ್‌ ಡಿಎಂ ಲಾ ಕಾಲೇಜಿನ ಪ್ರಾಂಶುಪಾಲ ಡಾ| ತಾರಾನಾಥ್‌ ಪ್ರಾಸ್ತಾವನೆಗೈದರು.

ಸಮ್ಮಾನ
ನ್ಯಾ| ಆ್ಯಂಟನಿ ಡೊಮಿನಿಕ್‌ ಅವರನ್ನು ಈ ಸಂದರ್ಭ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪರವಾಗಿ ಸಮ್ಮಾನಿಸಲಾಯಿತು. ಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ| ಎನ್‌.ಜೆ. ಕಡಂಬ ಮತ್ತು ಪ್ರೊ| ಅರಳ ರಾಜೇಂದ್ರ ಶೆಟ್ಟಿ ಅವರು ಸಮ್ಮಾನವನ್ನು ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಉದಯ ಪ್ರಕಾಶ್‌ ಮುಳಿಯ ಅವರು ಅಭಿನಂದನ ಪತ್ರ ವಾಚಿಸಿದರು.

Advertisement

ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಎಸ್‌. ಬೀಳಗಿ, ಎಸ್‌ಡಿಎಂ ಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಪಿ.ಡಿ. ಸೆಬಾಸ್ಟಿಯನ್‌, ಪ್ರೊ| ಉದಯ ಕುಮಾರ್‌, ಎಚ್‌.ವಿ. ರಾಘವೇಂದ್ರ ರಾವ್‌, ಮಹೇಶ್‌ ಕಜೆ, ಸೌಜನ್ಯಾ ಹೆಗ್ಡೆ, ರಾಘವೇಂದ್ರ ರಾವ್‌, ಸತೀಶ್‌ ಮತ್ತಿರರು ಉಪಸ್ಥಿತರಿದ್ದರು.

ವೆಬ್‌ಸೈಟ್‌, ಬೈಲಾ ಅನಾವರಣ
ಹಳೆ ವಿದ್ಯಾರ್ಥಿ ಸಂಘವು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಳೆ ವಿದ್ಯಾರ್ಥಿಗಳನ್ನು ಸಂಬೋಧಿಸುವ ಆಂಗ್ಲ ಪದ ‘ಅಲ್ಮಾ ಮ್ಯಾಟರ್‌’ ಎಂದರೆ ‘ಸಲಹುವ ತಾಯಿ’ ಎಂದರ್ಥ. ಎಸ್‌ ಡಿಎಂ ಕಾಲೇಜು ನನಗೆ ವಿದ್ಯಾರ್ಜನೆ ಮಾಡಿ ವಕೀಲನನ್ನಾಗಿ ಹಾಗೂ ಜವಾಬ್ದಾರಿಯುತ ಪ್ರಜೆಯನ್ನಾಗಿ ಬೆಳೆಸಿದೆ ಎಂದು ಹೇಳಿದ ಅವರು ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಹಳೆ ವಿದ್ಯಾರ್ಥಿ ಸಂಘವು ಚೆನ್ನಾಗಿ ಬೆಳೆಯಲಿ ಎಂದು ಹಾರೈಸಿದರು. ಹಳೆ ವಿದ್ಯಾರ್ಥಿ ಸಂಘದ ವೆಬ್‌ಸೈಟ್‌ ಮತ್ತು ಬೈಲಾಗಳನ್ನು ನ್ಯಾ| ಆ್ಯಂಟನಿ ಅವರು ಅನಾವರಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next