Advertisement

ಮೂಲ ನಕಾಶೆ ಬದಲಿಸಿ ಅಂಬೇಡ್ಕರ್‌ ಭವನ ನಿರ್ಮಾಣ

02:10 PM Sep 05, 2022 | Team Udayavani |

ಪಿರಿಯಾಪಟ್ಟಣ: ಮೂಲ ನಕಾಶೆ ಬದಲಿಸಿ ತರಾತುರಿಯಲ್ಲಿ ಡಾ.ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿ ಮುಗಿಸಿ ಕೈ ತೊಳೆದುಕೊಳ್ಳಲು ಅವಣಿಸುತ್ತಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ಧ ಅಂಬೇಡ್ಕರ್‌ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ ಬಿ.ಎಂ.ರಸ್ತೆ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಭವನ ನಿರ್ಮಿಸುತ್ತಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಮಾಜಿ ಶಾಸಕ ಕೆ.ವೆಂಕಟೇಶ್‌ ಅವರು 5 ಕೋಟಿ ರೂ.ನಲ್ಲಿ ಮೂಲ ನಕಾಶೆ ತಯಾರಿಸಿ, ನಿರ್ಮಿತಿ ಕೇಂದ್ರಕ್ಕೆ ಭವನ ನಿರ್ಮಾಣದ ಜವಾಬ್ದಾರಿ ನೀಡಿದ್ದರು. ಆದರೆ, ಸರ್ಕಾರ ನಿಗದಿತ ವೇಳೆಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡದ ಕಾರಣ, ಮೊದಲ ಮಹಡಿ ಮುಗಿಸಿ, 2ನೇ ಹಂತದ ಚಾವಣಿ ಕಾಮಗಾರಿ ಆರಂಭ ಆಗುವಷ್ಟರಲ್ಲಿ ಬಿಡುಗಡೆ ಆದ ಹಣ ಪೂರ್ಣ ಖರ್ಚಾಗಿ, ಹಲವು ವರ್ಷ ಭವನದ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ಗುಣಮಟ್ಟದ ಕಾಮಗಾರಿಗೆ ಸೂಚನೆ: ಈ ಸಂದರ್ಭದಲ್ಲಿ ಶಾಸಕ ಕೆ.ಮಹದೇವ್‌, ಭವನ ಹಾಗೆ ಉಳಿಯುವುದು ಬೇಡ ಎಂದು ಮೂಲ ನೀಲ ನಕಾಶೆ ಬದಲಾಯಿಸಿ, ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 1.50 ಕೋಟಿ ರೂ. ಅನ್ನು ಆರಂಭಿಕವಾಗಿ ಸರ್ಕಾರದಿಂದ ಬಿಡುಗಡೆ ಮಾಡಿಸಿ, ಕಾಮಗಾರಿ ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಆದರೆ, ಭವನ ನಿರ್ಮಾಣ ಮಾಡುತ್ತಿರುವ ಮುಂಭಾಗ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಎಂಜಿನಿಯರ್‌ಗಳು ನಡೆಸಿರುವ ರಸ್ತೆ, ಚರಂಡಿ ಕಾಮಗಾರಿಯೂ ಅವೈಜ್ಞಾನಿಕವಾಗಿದೆ.

ಎತ್ತರದಲ್ಲಿ ಚರಂಡಿ ನಿರ್ಮಾಣ: ಇದನ್ನು ಗಮನಿಸಿದ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯ ಮುಖಂಡರು, ಪ್ರತಿಭಟನೆ ನಡೆಸಿದ ಪರಿಣಾಮ, ತಹಶೀಲ್ದಾರ್‌ ಕೆ.ಚಂದ್ರಮೌಳಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಭವನದ ಆವರಣದಲ್ಲಿ ಯಾವುದೇ ನೀರು ನಿಲ್ಲದೆ ಹೊರಗೆ ಹೋಗುವಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡ ಬೇಕೆಂದು ಹೇಳಿದ್ದರು. ಆದರೆ, ಭವನದ ಕಟ್ಟಡದಿಂದ 4 ಅಡಿ ಎತ್ತರಕ್ಕೆ ನಿರ್ಮಿಸಿರುವ ಚರಂಡಿಯಿಂದ ಆಗುತ್ತಿರುವ ತೊಂದರೆ ಸರಿಪಡಿ ಸುವಂತೆ ವೇದಿಕೆ ಮುಖಂಡರು ಹೇಳಿಕೊಂಡರೂ, ನಿರ್ಮಿತಿ ಕೇಂದ್ರದ ಎಂಜಿನಿಯರ್‌, ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ.

ಮೂಲ ನಕಾಶೆ ಬದಲಾವಣೆ: ಇಷ್ಟೆಲ್ಲ ಅವ್ಯವಸ್ಥೆಯ ನಡುವೆ ಕಾಟಾಚಾರಕ್ಕೆ ಭವನದ ಕಾಮಗಾರಿ ಮುಗಿಸಿ ನವೆಂಬರ್‌ ತಿಂಗಳಲ್ಲಿ ಕಟ್ಟಡ ಉದ್ಘಾಟಿಸಿ ಕೈ ತೊಳೆದುಕೊಳ್ಳಬೇಕೆಂಬ ಆತುರದಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಇದ್ದಾರೆ. ಹಣದ ಕೊರತೆಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ಕಟ್ಟಡದ ಮೂಲ ನಕಾಶೆಯನ್ನು ಬದಲಾಯಿಸಿ, ನಿರ್ಮಾಣ ಮಾಡಲಾಗುತ್ತಿದೆ. ಹಣದ ಅನುಕೂಲಕ್ಕೆ ತಕ್ಕಂತಾದರೂ ಗುಣಮಟ್ಟದಲ್ಲಿ ಭವನದ ಕಟ್ಟಡ ನಿರ್ಮಾಣ ಮಾಡಿ ಸೂಕ್ತ ಚರಂಡಿ ವ್ಯವಸ್ಥೆ ಮಾಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆಯ ಮುಖಂಡರು ಪತ್ರಿಕೆಗೆ ತಿಳಿಸಿದ್ದಾರೆ.

Advertisement

 

-ಪಿ.ಎನ್‌.ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next