ಸಿಂಧನೂರು: ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಸರಕಾರಿ ಸೌಲಭ್ಯ ಕಲ್ಪಿಸಲು ತಾಯಂದಿರು ಹಾಗೂ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಕಲ್ಲೂರು ಗ್ರಾಮದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಬುಧವಾರ ಗುದ್ದಲಿ ಪೂಜೆ ಹಾಗೂ ಕಲ್ಲೂರು ಗ್ರಾಮದ 7 ಶಾಲೆ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತಾಯಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಇದೊಂದು ನನ್ನ ಕನಸಿನ ಯೋಜನೆ. 18 ತಿಂಗಳ ಕಾಲಮಿತಿಯಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವುದರಿಂದ ಆರೋಗ್ಯ ಸೇವೆ ದೊರೆಯಲಿದೆ. ವೈದ್ಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಶ್ರಮಿಸಲಾಗುವುದು. ಶಿಕ್ಷಣ ಕ್ಷೇತ್ರಕ್ಕೂ ಒತ್ತು ನೀಡಲಾಗಿದ್ದು, ಕಳೆದ ಎರಡು ವರ್ಷದಲ್ಲಿ 500 ಕೊಠಡಿಗಳನ್ನು ಕಟ್ಟಿಸಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಸಂಸದ ಸಂಗಣ್ಣ ಕರಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ವೆಂಕೋಬ ಕಲ್ಲೂರು, ವೆಂಕಟೇಶ ನಂಜಲದಿನ್ನಿ, ಶಂಕರಗೌಡ ಎಲೆಕೂಡ್ಲಿಗಿ, ಧರ್ಮನಗೌಡ ಮಲ್ಕಾಪುರ, ಚಂದ್ರಶೇಖರ ಮೈಲಾರ, ತಾಲೂಕು ವೈದ್ಯಾಧಿಕಾರಿ ಅಯ್ಯನಗೌಡ, ಬಿಇಒ ಶರಣಪ್ಪ ವಟಗಲ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಇದ್ದರು.
65ನೇ ಜನ್ಮದಿನ ಆಚರಣೆ
ಶಾಸಕ ವೆಂಕಟರಾವ್ ನಾಡಗೌಡರ 65ನೇ ವರ್ಷದ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಬೆಂಬಲಿಗರು, ಅಭಿಮಾನಿಗಳು ಹಲವು ಕಡೆ ಕೇಕ್ ಕತ್ತರಿಸಿ, ಸಂಭ್ರಮಿಸಿದರು. ಶಾಸಕರ ಸ್ವಗ್ರಾಮ ಜವಳಗೇರಾದಲ್ಲಿ ಅವರ ನಿವಾಸಕ್ಕೆ ತೆರಳಿ, ಹಲವರು ಶುಭಾಶಯ ತಿಳಿಸಿದರು. ವಿವಿಧ ವಾರ್ಡ್ ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ತೆರಳಿದಾಗ, ಬರ್ತಡೇ ಸಂಭ್ರಮ ಕಳೆಗಟ್ಟಿತು. ಕಾರುಣ್ಯ ವೃದ್ಧಾಶ್ರಮದಲ್ಲೂ ಶಾಸಕರ ಜನ್ಮದಿನ ಆಚರಿಸಲಾಯಿತು. ವೃದ್ಧರಿಗೆ ಹಣ್ಣು, ಹಂಪಲು ವಿತರಿಸಲಾಯಿತು.