Advertisement

ನಂದಿನಿ ನದಿ ಪ್ರದೇಶಕ್ಕೆ ಕಾಂಕ್ರೀಟ್‌ ರಸ್ತೆ, ತಡೆಗೋಡೆ ನಿರ್ಮಾಣ

11:04 AM Dec 30, 2017 | Team Udayavani |

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್‌ನ ನಂದಿನಿ ನದಿಯ ಪಕ್ಕದಲ್ಲಿರುವ ಪಾವಂಜೆ-ಅರಾಂದ್‌ ರಸ್ತೆಯು ನದಿಯ ಒಳ ಅರಿವಿನ ಕೊರೆತದಿಂದ ತೀವ್ರವಾಗಿ ಕುಸಿತ ಕಂಡು, ರಸ್ತೆಯು ನದಿಯ ಪಾಲಾಗುವುದನ್ನು ತಡೆಹಿಡಿಯುವ ಕಾಮಗಾರಿ ಕೊನೆಯ ಹಂತದಲ್ಲಿದೆ. 

Advertisement

ಸುಮಾರು 30ಕ್ಕಿಂತಲೂ ಹೆಚ್ಚು ಮನೆಗಳಿರುವ ಈ ಪ್ರದೇಶದ ಜನರ ಸಂಚಾರಕ್ಕೆ ಸೂಕ್ತ ಪರಿಹಾರ ಕಂಡಂತಾಗಿದೆ. ಈ ಬಗ್ಗೆ ಕಳೆದ ಎಪ್ರಿಲ್‌ನಲ್ಲಿಯೇ ಉದಯವಾಣಿಯ ಸುದಿನ ಸವಿವರವಾದ ವರದಿಯಿಂದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿತ್ತು.

ಕುಸಿತದ ಭೀತಿಯಲ್ಲಿದ್ದ ರಸ್ತೆ
ಅರಾಂದ್‌ ರಸ್ತೆಯು ಹೆದ್ದಾರಿ ಸೇತುವೆಗೆ ಸಂಪರ್ಕದ ಏಕೈಕ ರಸ್ತೆಯಾಗಿದೆ. ನಂದಿನಿ ನದಿಯ ಒಳಹರಿವಿನ ಕೊರೆತದಿಂದ ತೀವ್ರವಾಗಿ ಕುಸಿತ ಕಂಡು ಇನ್ನೇನು ರಸ್ತೆಯು ನದಿಗೆ ಸೇರುವ ಆತಂಕ ಸ್ಥಳೀಯರಲ್ಲಿ ಮೂಡಿಸಿತ್ತು. ರಸ್ತೆಯು ಮೀನುಗಾರಿಕಾ ಇಲಾಖೆಯ ವ್ಯಾಪ್ತಿಗೆ ಸೇರಿರುವುದರಿಂದ ಕಳೆದ ವರ್ಷವಷ್ಟೇ ರಸ್ತೆಗೆ ಡಾಮರೀಕರಣಗೊಳಿಸಲಾಗಿತ್ತು. ಅರಾಂದ್‌ ಪ್ರದೇಶದ ನಾಗರಿಕರು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿರುವುದರಿಂದ ಕುಸಿತ ಆದಲ್ಲಿ ರಸ್ತೆಯ ಸಂಪರ್ಕ ಕಡಿದುಕೊಂಡು ದ್ವೀಪ ಪ್ರದೇಶದಲ್ಲಿ ಇರಬೇಕಾದ ಆತಂಕ ಮನಮಾಡಿತ್ತು.

2 ಯೋಜನೆಗಳ ಮಂಜೂರಾತಿ
ಕುಸಿತದ ಪ್ರದೇಶಕ್ಕೆ ಸ್ಥಳೀಯ ಜಿ.ಪಂ., ತಾ.ಪಂ. ಮತ್ತು ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಸದಸ್ಯರ ಸಹಿತ ನಿಯೋಗವೊಂದು ಭೇಟಿ ನೀಡಿ ಗ್ರಾಮಸ್ಥರ ಮೂಲಕ ಶಾಸಕ ಕೆ.ಅಭಯಚಂದ್ರ ಜೈನ್‌ರಲ್ಲಿ ಮನವಿ ಮಾಡಿಕೊಂಡಿತ್ತಲ್ಲದೇ, ರಸ್ತೆ ಹಾಗೂ ತಡೆಗೋಡೆ ಎರಡೂ ಕಾಮಗಾರಿ ಏಕಕಾಲದಲ್ಲಿ ತುರ್ತಾಗಿ ನಡೆಯಬೇಕು ಎಂದು ಮನವರಿಕೆ ಮಾಡಿ ಸ್ಥಳ ಸಮೀಕ್ಷೆ ನಡೆಸಿತ್ತು.

ಈಗ ಕೊಟ್ಟ ಆಶ್ವಾಸನೆಯಂತೆ ಶಾಸಕರ ಮುತುವರ್ಜಿಯಲ್ಲಿ ಎರಡೂ ಕಾಮಗಾರಿ ಕೊನೆಯ ಹಂತದಲ್ಲಿದೆ. ತಡೆಗೋಡೆಯನ್ನು ಕಟ್ಟುವಾಗ ಒಂದೇ ಬ್ರೇಕ್‌ ವಾಟರ್‌ ಬಳಸಲಾಗಿದೆ ಇದು ಕನಿಷ್ಠ ಮೂರಕ್ಕೇರಿಸಬೇಕು ಎಂದು
ಸ್ಥಳೀಯರು ಹೇಳುತ್ತಾರೆ.

Advertisement

30 ಲಕ್ಷ ರೂ. ವೆಚ್ಚದ ಯೋಜನೆ
ಸಣ್ಣ ನೀರಾವರಿ ಇಲಾಖೆಯಿಂದ ನದಿ ದಂಡೆಯ ತಡೆಗೋಡೆಯನ್ನು 20 ಲಕ್ಷ ರೂ. ವೆಚ್ಚದಲ್ಲಿ 300 ಮೀ. ಉದ್ದದಲ್ಲಿ ನಿರ್ಮಿಸಲಾಗಿದೆ. ಮೀನುಗಾರಿಕಾ ಇಲಾಖೆಯಿಂದ ಒಂದು ಕಿ.ಮೀ. ಉದ್ದದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ.

ಈಗ ಈ ಎರಡೂ ಕಾಮಗಾರಿಗಳು ಇನ್ನಷ್ಟು ವಿಸ್ತರಣೆಯಾದಲ್ಲಿ ಸಂಪೂರ್ಣ ಅರಾಂದ್‌ ಪ್ರದೇಶಕ್ಕೆ ಸಂಚರಿಸುವಾಗ ಸುಂದರ ನದಿ ತೀರದ ನೋಟದಲ್ಲಿ ಸಂಚಾರಿಗಳು ಚಿತ್ರಣವನ್ನು ಸವಿಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಬಹುಬೇಡಿಕೆ
ಅರಾಂದ್‌ ಪ್ರದೇಶದಲ್ಲಿನ ನಿವಾಸಿಗಳು ರಸ್ತೆಯ ಕುಸಿತದಿಂದ ದ್ವೀಪ ಪ್ರದೇಶದಲ್ಲಿ ಸಿಲುಕುವ ಸಾಧ್ಯತೆ ಇತ್ತು. ಆದರೆ ಶಾಸಕರಾದ ಅಭಯಚಂದ್ರರ ವಿಶೇಷ ಪ್ರಯತ್ನದಿಂದ ಇದೀಗ ಗ್ರಾಮಸ್ಥರ ಬಹು ಬೇಡಿಕೆಯಾಗಿದ್ದ ರಸ್ತೆಯ ಜೊತೆಗೆ ತಡೆಗೋಡೆ ನಿರ್ಮಾಣವಾಗಿದೆ. ಇದನ್ನು ಅರಾಂದ್‌ನ ಕೊನೆಯವರೆಗೂ ವಿಸ್ತರಣೆಯಾದಲ್ಲಿ ಇನ್ನಷ್ಟು ಅನುಕೂಲವಾಗುತ್ತದೆ.
 -  ರಾಜೇಶ್‌ ದೇವಾಡಿಗ, ಅರಾಂದ್‌ ನಿವಾಸಿ

ನದಿ ಪ್ರದೇಶ ಉಳಿವು
10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆಯನ್ನು ಏಕಕಾಲದಲ್ಲಿ ನಿರ್ಮಿಸಿರುವುದರಿಂದ ಒಂದು ನದಿ ಪ್ರದೇಶವನ್ನೇ ಉಳಿಸಿದಂತಾಗಿದೆ. ಸ್ಥಳೀಯರ ಬೇಡಿಕೆಯಂತೆ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡಲು ಪ್ರಯತ್ನ ನಡೆಸಲಾಗುವುದು. ಈಗ ಈ ಪ್ರದೇಶ ಹೆದ್ದಾರಿಯಿಂದ ಸುಂದರವಾಗಿ ಕಾಣುತ್ತಿದೆ. ರಾಜ್ಯ ಸರಕಾರದ ಯೋಜನೆಯ ಅನುಷ್ಠಾನದ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜನರು ಮೆಚ್ಚಿದ್ದಾರೆ.
ಕೆ.ಅಭಯಚಂದ್ರ ಜೈನ್‌
  ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next