Advertisement

ನಾಗರಿಕರಿಂದಲೇ ಹಳ್ಳಕ್ಕೆ ಸೇತುವೆ ನಿರ್ಮಾಣ

04:14 PM Aug 05, 2021 | Team Udayavani |

ರಾಮನಗರ: ನಕ್ಷೆಯಲ್ಲಿರುವ ರಸ್ತೆಯ ನಡುವೆ ಹಾದು ಹೋಗಿರುವ ಹಳ್ಳಕ್ಕೆ ಸರ್ಕಾರ ಸೇತುವೆ ನಿರ್ಮಿಸದ ಕಾರಣ ಆ ಭಾಗದ ನಾಗರಿಕರೇ
ಸೇತುವೆ ನಿರ್ಮಿಸಿಕೊಂಡಿದ್ದು, ಅಧಿಕೃತ ಎಂದು ಘೋಷಿಸಲು ತಾಲೂಕು ಮತ್ತು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ಗ್ರಾಮಸ್ಥರು
ದೂರಿದ್ದಾರೆ.

Advertisement

ತಾಲೂಕಿನ ಬಿಡದಿ ಪುರಸಭೆ ವ್ಯಾಪ್ತಿಯ ಸರ್ವೆ ಸಂಖ್ಯೆ 14ರಲ್ಲಿರುವ ಗುಂಡುತೊಫಿನ ಪೈಕಿ 110×40 ಅಡಿಗಳ ವಿಸ್ತೀರ್ಣದ ರಸ್ತೆಗೆ ಕರ್ನಾಟಕ‌ ಭೂ ಕಂದಯ ಅಧಿನಿಯಮ ಕಲಂ 71ರಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೊಂದು ರಸ್ತೆಗಾಗಿ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ. ಆದರೆ, ಸದರಿ ರಸ್ತೆ ಮತ್ತು ಬೆಂಗಳೂರು -ಮೈಸೂರು ಹೆದ್ದಾರಿ ರಸ್ತೆ ನಡುವೆ ಹಳ್ಳಹರಿಯುತ್ತಿದ್ದು, ಆ ಭಾಗದ ನಾಗರಿಕರೇ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಸ‌ರ್ಕಾರ ಮಾಡ ಬೇಕಾದ ಕೆಲಸವನ್ನು ಆಭಾಗದ ನಾಗರಿಕರೇ ಮಾಡಿಕೊಂಡಿದ್ದು, ಸೇತುವೆಯನ್ನು ಅಧಿಕೃತ ಎಂದು ಘೋಷಿಸುವಂತೆ ನಾಗರಿಕರು ಮಾಡಿಕೊಂಡ ಮನವಿಗೆ ತಾಲೂಕು ಮತ್ತು ಜಿಲ್ಲಾಡಳಿತ ಇನ್ನೂ ಸ್ಪಂದಿಸಿಲ್ಲ. ಈ ಮಧ್ಯೆ ಕೆಲವು ಕಿಡಿಗೇಡಿಗಳು ಕಾನೂನು ತೊಡಕು ಹುಟ್ಟು ಹಾಕಲು ಹವಣಿಸುತ್ತಿದ್ದಾರೆ ಎಂದು ಅಲ್ಲಿನ ನಾಗರಿಕರು ಆರೋಪಿಸಿದ್ದಾರೆ.

2006ರಲ್ಲೇ ರಸ್ತೆಗೆ ಅನುಮತಿ: ಈ ವಿಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ಬನಕುಪ್ಪೆ ಗ್ರಾಮದ ನಿವಾಸಿ ಸುಜ್ಞಾನ ಮೂರ್ತಿ, ಹಾಲಿ ಬಿಡದಿ ಪುರಸಭೆಯ ಸರ್ವೆ ಸಂಖ್ಯೆ 14ರಲ್ಲಿ ಗುಂಡು ತೋಪಿನ ಲಕ್ಷಣಗಳನ್ನು ಕಳೆದುಕೊಂಡಿರುವ ಸರ್ಕಾರಿ ಭೂಮಿಯ ಮೂಲಕ ಸರ್ವೆ ಸಂಖ್ಯೆಗಳಾದ 22, 24, 25, 23/1 ಹಾಗೂ ಜ್ಞಾನ ವಿಕಾಸ ಸಂಸ್ಥೆಗೆ ತೆರಳಲು ಗ್ರಾಮಸ್ಥರು ಮತ್ತು ಜಮೀನಿನ ರೈತರು ರಸ್ತೆ ಮಾಡಿಕೊಂಡಿದ್ದರು. 2006ರಲ್ಲಿ ಅವಿ ಭಾಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು 110×40 ಅಡಿಗಳ ವಿಸ್ತೀರ್ಣದ ಭೂಮಿಯನ್ನು ಸಾರ್ವಜನಿಕರ ದಾರಿಗಾಗಿ ಎಂದು ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಿ.ಎಂ.ಲಿಂಗಪ್ಪ ಶಿಫಾರಸು: ಜಿಲ್ಲಾಧಿಕಾರಿಗಳ ಅದೇಶದನ್ವಯ ಸದರಿ ರಸ್ತೆ ತಾಲೂಕಿನ ನಕ್ಷೆಯಲ್ಲಿಯೂ ಕಾಣಿಸಿಕೊಂಡಿದೆ. ಬಿಡದಿ ಪಟ್ಟಣದ ಜ್ಞಾನ ವಿಕಾಸ ವಿದ್ಯಾ ಸಂಸ್ಥೆಯ ಬಳಿ ಇರುವ ಈ ರಸ್ತೆ ಬೆಂಗಳೂರು -ಮೈಸೂರು ಹೆದ್ದಾರಿ ರಸ್ತೆಗೆ ಸಂಪರ್ಕ ಹೊಂದಲು ಒಂದು ಹಳ್ಳ ಅಡ್ಡಿಯಾಗಿತ್ತು. ಸದರಿ ಹಳ್ಳಕ್ಕೆ ಆ ಭಾಗದ ನಾಗರಿಕರೇ ಸೇತುವೆ ನಿರ್ಮಿಸಿ ಕೊಂಡಿದ್ದಾರೆ. ಹೀಗೆ ನಿರ್ಮಿಸಿಕೊಂಡ ಸೇತುವೆ ಯನ್ನು ಅಧಿಕೃತ ಎಂದು ಘೋಷಿಸುವಂತೆ ನಾಗರಿಕರ ಜೊತೆಗೆ ವಿಧಾನ ಪರಿಷತ್‌ ಸದಸ್ಯ ಸಿ. ಎಂ.ಲಿಂಗಪ್ಪ ಅವರು ಸಹ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಈ ಮನವಿಗಳಿಗೆ ಸ್ಪಂದಿಸಿಲ್ಲ ಎಂದು ಸುಜ್ಞಾನ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಹಳ್ಳಕ್ಕೆ ಸೇತುವೆ ನಿರ್ಮಿಸಿದ್ದರಿಂದ ಗ್ರಾಮಸ್ಥರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅವರು ಸೇತುವೆ ಕಾಮಗಾರಿಯ ಪರಿಮಿತಿ ತಮ್ಮ ಕಚೇರಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಹಿಂಬರಹ ಕೊಟ್ಟಿದ್ದಾರೆ. ಹೆದ್ದಾರಿಗೆ ಸಂಪರ್ಕ ಹೊಂದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೊಟ್ಟ ಮನವಿಗೂ ಇದೇ ರೀತಿಯ ಉತ್ತರ ಲಭಿಸಿದೆ. ಹೀಗಾಗಿ ಗ್ರಾಮಸ್ಥರು ತಾಲೂಕು ಮತ್ತು ಜಿಲ್ಲಾಡಳಿತದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರೂ ಉಪಯೋಗವಾಗಿಲ್ಲ, ನೂರಾರು ಮಂದಿ ಗ್ರಾಮಸ್ಥರು ಬಳಸುತ್ತಿರುವ ರಸ್ತೆಗೆ ಸೇತುವೆ ನಿರ್ಮಿಸಿಕೊಳ್ಳುವುದಕ್ಕೆ ಕೆಲವರು ತಕರಾರು ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

ಭೂಪರಿವರ್ತನೆ
ಕಾನೂನು ಬಾಹೀರ
ಕೆಲವರು ರಾಮನಗರ ತಹಶೀಲ್ದಾರ‌ರಿಗೆ ಪತ್ರ ಬರೆದು ಸರ್ವೆ ಸಂಖ್ಯೆ23/1ರ ಮಾಲೀಕರು ಸರ್ಕಾರಿ ಗುಂಡುತೋಪು ಜಾಗವನ್ನು ಒತು ¤ವರಿ ಮಾಡಿ ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಂಡು ವಸತಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಹೊರೆಸಿದ್ದಾರೆ. ಸರ್ವೆ ಸಂಖ್ಯೆ 23/1 ಜಮೀನಿಗೆ ರಸ್ತೆಯ ಸಂಕರ್ಪವೇ ಇಲ್ಲದ ಕಾರಣ ಭೂಮಿ ಪರಿವರ್ತನೆ ಆಗಿರುವುದೇ ಕಾನೂನು ಬಾಹೀರ ಎಂದು ವಾದಿಸಿ, ರಾಜಕಾಲುವೆಗೆ ನಿರ್ಮಿಸಿರುವ ಸೇತುವೆಯನ್ನು ತೆರವುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ತಮ್ಮ ಜಮೀನಿಗೆ ಹೋಗಲು ಅನುಕೂಲವಾಗುವಂತೆ ಜಮೀನು ಮಾಲೀಕರು ಮತ್ತು ನಾಗರಿಕರು ರಸ್ತೆಗೆ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಕೆಲವರು ಇದನ್ನು ಸಹಿಸದೆ ತಕರಾರು ಮಾಡುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸೇತುವೆಯನ್ನು ಅಧಿಕೃತ ಎಂದುಘೋಷಿಸಬೇಕು.
-ಕೆ.ರಾಜು, ಮಾಜಿ ಶಾಸಕ, ರಾಮನಗರ

ಸೇತುವೆ ನಿರ್ಮಾಣದ ಅಧಿಕೃತ ಮಾಡುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಸೂಕ್ತವಾಗಿ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯುವೆ.
-ವಿಜಯ್‌ಕುಮಾರ್‌, ತಹಶೀಲ್ದಾರ್‌,
ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next