Advertisement

ರಾಜ್ಯದಲ್ಲಿ ಇನ್ನೂ 12 ಏರ್‌ಪೋರ್ಟ್‌ ನಿರ್ಮಾಣ: ನಡ್ಡಾ

09:34 PM Mar 17, 2023 | Team Udayavani |

ಚಳ್ಳಕೆರೆ: ನವಭಾರತದ ವಿಕಾಸವನ್ನು ನವ ಕರ್ನಾಟಕದಿಂದಲೇ ಆರಂಭಿಸಬೇಕಿದೆ. ರಾಜ್ಯದಲ್ಲಿ ಈಗಾಗಲೇ ಪ್ರಧಾನಿ ಮೋದಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದು, ರಾಜ್ಯ ಅಭಿವೃದ್ಧಿಯತ್ತ ಮುನ್ನಡೆದಿದೆ.

Advertisement

ಕರ್ನಾಟಕದಲ್ಲಿ ಇನ್ನೂ 12 ವಿಮಾನ ನಿಲ್ದಾಣ ಆರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯ ಪ್ರಕಾಶ್‌ ನಡ್ಡಾ ತಿಳಿಸಿದರು.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ನೆಹರೂ ವೃತ್ತದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಇಂಗ್ಲೆಂಡ್‌, ಯುರೋಪ್‌ನ ಖಾಸಗಿ ಚಾನೆಲ್‌ ಸಂದರ್ಶನದಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು ಅಮೆರಿಕ ಮತ್ತು ರಷ್ಯಾ ಸಹಾಯಕ್ಕೆ ಬರಬೇಕೆಂದು ಹೇಳಿಕೆ ನೀಡಿದ್ದಾರೆ.

1975ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾದಾಗ ತಮ್ಮ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ದೇಶಭಕ್ತರನ್ನು ಜೈಲಿಗೆ ಕಳುಹಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಮಾನವೆಸಗಿದ್ದರು. ರಾಷ್ಟ್ರದ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್‌ ಹೇಳಿಕೆ ಕಾಂಗ್ರೆಸ್‌ ಪಕ್ಷದ ಅಧಃಪತನದ ಸಂಕೇತ ಎಂದು ಗುಡುಗಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಜಿ2 ಸಭೆಯಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚಿನ ವಹಿವಾಟು ನಡೆಯಿತು. ಇದರಿಂದ ಕರ್ನಾಟಕದ ಆರ್ಥಿಕ ಸ್ಥಿತಿಗೆ ಹೆಚ್ಚು ಸಹಾಯಕವಾಗಿದೆ. ದೇಶದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ನಂ.1 ಸ್ಥಾನದಲ್ಲಿದೆ. ದೇಶ ಮತ್ತು ರಾಜ್ಯದ ಯುವಕರಿಗೆ ಉದ್ಯೋಗ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಹೆಲಿಕಾಪ್ಟರ್‌ ಘಟಕ ಆರಂಭಿಸಲಾಗಿದೆ.

Advertisement

ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿ, ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮುಂತಾದ ಕಾರ್ಯಕ್ರಮಗಳು ಬಿಜೆಪಿ ಜನಪರ ಕಾಳಜಿ ತೋರಿಸುತ್ತದೆ. ಬೆಂಗಳೂರಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಯಾವುದೇ ಸರ್ಕಾರ ಮುಂದಾಗಲಿಲ್ಲ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೆಚ್ಚು ಆಸಕ್ತಿ ಹೊಂದಿದ್ದರು. ಖುದ್ದು ಪ್ರಧಾನಿ ಮೋದಿ ಈ ಕಾರ್ಯವನ್ನು ನೆರವೇರಿಸಿದರು. ಇಂದು ರಾಷ್ಟ್ರ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಪರ ಚಿಂತನೆಗಳು ಹೊಸ ಶಕ್ತಿ ಪಡೆದಿವೆ. ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌.ಅಶೋಕ್‌, ಶಾಸಕ ಜಿ.ಎಚ್‌.ತಿಪಾರೆಡ್ಡಿ, ಜಿಲ್ಲಾಧ್ಯಕ್ಷ ಎ.ಮುರಳಿ, ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌, ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ಜೆ.ಪಿ.ಜಯಪಾಲಯ್ಯ, ಬಿಜೆಪಿ ಮುಖಂಡರಾದ ಎಂ.ಎಸ್‌. ಜಯರಾಮ್‌, ಆರ್‌.ಅನಿಲ್‌ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next