Advertisement

ನಿವೇಶನ ರಹಿತರಿಗೆ 1058 ಮನೆ ನಿರ್ಮಾಣ

10:23 AM Feb 24, 2022 | Team Udayavani |

ವಾಡಿ: ಪಟ್ಟಣದ ಹೊರ ವಲಯದಲ್ಲಿ ಖರೀದಿಸ ಲಾಗಿರುವ 16 ಎಕರೆ ಜಮೀನಿನಲ್ಲಿ ಒಟ್ಟು 1058 ಆಶ್ರಯ ಮನೆ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ನಿವೇಶನ ರಹಿತರು ಮಾ.10ರ ಒಳಗಾಗಿ ಡಿಡಿ ಪಾವತಿಸುವಂತೆ ಪುರಸಭೆ ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿ ತಿಳಿಸಿದ್ದಾರೆ.

Advertisement

ಬುಧವಾರ ಪುರಸಭೆಯಲ್ಲಿ ಅಧ್ಯಕ್ಷೆ ಝರೀನಾ ಬೇಗಂ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್‌- 2021ರಿಂದ ಜನವರಿ-2022ರ ವರೆಗಿನ ಆಯವ್ಯಯ ಕುರಿತ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಮುಖ್ಯಾಧಿಕಾರಿ, ನಗರದ ಚಾಮನೂರ ರಸ್ತೆಯಲ್ಲಿ ಸಿದ್ಧಗೊಳ್ಳುತ್ತಿರುವ ನ್ಯೂ ಟೌನ್‌ ನಿವೇಶನದಲ್ಲಿ ಜಿ+1 ಮಾದರಿಯಲ್ಲಿ ತಲಾ 6.50 ಲಕ್ಷ ರೂ. ವೆಚ್ಚದಡಿ ಸಾವಿರಾರು ಮನೆ ನಿರ್ಮಿಸಲಾಗುತ್ತಿದೆ. 5.40 ಲಕ್ಷ ರೂ. ಬ್ಯಾಂಕ್‌ ಸಾಲ ಮತ್ತು ಪಿಎಂಎವೈನ್ನು ನಿಗಮದಿಂದ ಪಾವತಿಸಲಾಗುತ್ತಿದೆ. ಫಲಾನುಭವಿಗಳು 65000ರೂ. ವಂತಿಗೆ ಫಾವತಿಸಬೇಕಿದೆ. ನಿವೇಶನ ರಹಿತ ಪಜಾ/ಒಬಿಸಿ ಮತ್ತು ಇತರ ಸಮುದಾಯಗಳ ಅರ್ಹ ಫಲಾನುಭವಿಗಳು ಮುಖ್ಯಾಧಿಕಾರಿ ಹೆಸರಿನಲ್ಲಿ 10,000ರೂ. ಮೊತ್ತದ ಡಿಡಿ ಪಡೆದು, ದಾಖಲಾತಿಗಳೊಂದಿಗೆ ಪುರಸಭೆಗೆ ಸಲ್ಲಿಸಬೇಕು ಎಂದರು.

ನೀರಿನ ತೆರಿಗೆ ಹೆಚ್ಚಳ

ಪೌರಾಡಳಿತದ ನಿರ್ದೇಶನದಂತೆ ಕುಡಿಯುವ ನೀರಿನ ತೆರಿಗೆ ಹೆಚ್ಚಿಸುವ ಕುರಿತು ತಿಳಿಸಿದ ಪುರಸಭೆ ಕಂದಾಯ ಅಧಿಕಾರಿ ಎ.ಪಂಕಜಾ, ಸದ್ಯ ವಾರ್ಷಿಕವಾಗಿ 1200ರೂ. ಪಡೆಯಲಾಗುತ್ತಿದೆ. ಇದನ್ನು 300ರೂ. ಗೆ ಹೆಚ್ಚಿಸಲು ಆದೇಶ ಬಂದಿದೆ ಎಂದರು. ವಿರೋಧ ಪಕ್ಷದ ನಾಯಕ ಭೀಮಶಾ ಜಿರೊಳ್ಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ, ಕಸ ವಿಲೇವಾರಿ ಶುಲ್ಕವನ್ನು 140ರೂ.ಗೆ ಹೆಚ್ಚಿಸುವ ಅಗತ್ಯವಿದೆ ಎಂದರು.
ಜನರಿಗೆ ತೆರಿಗೆ ಹೊರೆ ಹಾಕುತ್ತಿರುವ ಬಿಜೆಪಿ ಜನವಿರೋಧಿಯಾಗಿದೆ ಎಂದು ಕಾಂಗ್ರೆಸ್‌ ಸದಸ್ಯರಾದ ಶರಣು ನಾಟೀಕಾರ, ಪೃಥ್ವಿರಾಜ್‌ ಸೂರ್ಯವಂಶಿ, ಮಹ್ಮದ್‌ ಗೌಸ್‌ ಟೀಕಿಸಿದರು. ಪಟ್ಟಣದ ಹೊರ ವಲಯದ ಎರಡೂ ದಿಕ್ಕಿನಲ್ಲಿ ಪ್ರವೇಶ ದ್ವಾರ ನಿರ್ಮಿಸಬೇಕು ಎಂದು ಪುರಸಭೆ ಆಡಳಿತದ ಕಾಂಗ್ರೆಸ್‌ ಸದಸ್ಯೆ ಸುಗಂಧಾ ಜೈಗಂಗಾ, ಬಿಜೆಪಿಯ ರವಿ ನಾಯಕ ಒತ್ತಾಯಿಸಿದರು.

Advertisement

ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ಉಪ ಕಚೇರಿ ನಗರದಲ್ಲೇ ಸ್ಥಾಪಿಸಬೇಕು ಎಂದು ಪಕ್ಷತೇರ ಸದಸ್ಯ ಮಹ್ಮದ್‌ ಗೌಸ್‌ ಅಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟೌನ್‌ ಪ್ಲ್ಯಾನಿಂಗ್‌ ಅಧಿಕಾರಿ ತಿಪ್ಪಣ್ಣ ಎಸ್‌. ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮನವಿಗೆ ಎಸಿಸಿ ಸಿಮೆಂಟ್‌ ಕಂಪನಿ ಆಡಳಿತವು ವಾಡಿಯಲ್ಲಿ ಒಂಭತ್ತು ಮಿನಿ ಬಸ್‌ ನಿಲ್ದಾಣ ನಿರ್ಮಿಸಲು ಒಪ್ಪಿಕೊಂಡಿದೆ. ಬಸವೇಶ್ವರ ವೃತ್ತ, ಶ್ರೀನಿವಾಸಗುಡಿ ವೃತ್ತ, ಬಸ್‌ ನಿಲ್ದಾಣ ಪ್ರದೇಶದಲ್ಲಿ ತಲಾ ಎರಡು, ಬಳಿರಾಮ ಚೌಕ್‌ನಲ್ಲಿ ಮೂರು ಮಿನಿ ಬಸ್‌ ತಂಗುದಾಣಗಳನ್ನು ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ರಸ್ತೆಯಲ್ಲಿ ಮಿನಿ ಬಸ್‌ ನಿಲ್ದಾಣ ಅಳವಡಿಸಿದರೆ ಅಂಗಡಿಗಳ ವ್ಯವಹಾರಕ್ಕೆ ಅಡ್ಡಿಯುಂಟಾಗುತ್ತದೆ ಎಂದು ಸದಸ್ಯ ಮಹ್ಮದ್‌ ಗೌಸ್‌ ಅಪಸ್ವರ ಎತ್ತಿದರು. ಪುರಸಭೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಜೆಇ ಅಶೋಕ ಪುಟ್‌ಪಾಕ್‌, ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ, ಈಶ್ವರ ಅಂಬೇಕರ್‌, ನೋಡಲ್‌ ಅಭಿಯಂತರ ಮನೋಜ ಕುಮಾರ ಹಿರೋಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next