ಮುಳಬಾಗಿಲು: ನಗರದ ಅಂಚಿನಿಂದ ಕರ್ನಾಟಕ ಗಡಿ ಭಾಗದವರೆಗಿನ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಜೆಎಸ್ ಆರ್ ಟೋಲ್‌ವೇಸ್ ಕಂಪನಿಯು ಉತ್ತಮ ಹಾಗೂ ಸುರಕ್ಷತೆಯುಳ್ಳ ಬಸ್ ಶೆಲ್ಟರ್ ನಿರ್ಮಿಸದೇ ಇರುವುದು ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶಾನುಸಾರ ಜೆಎಸ್‌ಆರ್ ಟೋಲ್‌ವೇಸ್ ಪ್ರೈ. ಕಂಪನಿಯು 2015ರಲ್ಲಿ ಮುಳಬಾಗಿಲು ನಗರದ ಅಂಚಿನಿಂದ ಕರ್ನಾಟಕ ಗಡಿ ಭಾಗದವರೆಗೆ 15 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆಯನ್ನು ನೂರಾರು ಕೋಟಿ ರೂ.ನಲ್ಲಿ ನಿರ್ಮಿಸಿದೆ. ಇದು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ.
ವಾಹನಗಳಿಂದ ಶುಲ್ಕ ವಸೂಲಿ: ಅಂತೆಯೇ ಎನ್ .ಯಲುವಹಳ್ಳಿ ಬಳಿ ನಿರ್ಮಿಸಿರುವ ಟೋಲ್ ಪ್ಲಾಜಾವನ್ನು 2015ರ ಜೂ.13ರಂದು ಅಂದಿನ ಮುಳಬಾಗಿಲು ಶಾಸಕ ಜಿ. ಮಂಜುನಾಥ್, ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್, ಜೆಎಸ್‌ಆರ್ ಕಂಪನಿ ಚೇರ್‌ವೆುನ್ ಜೆ. ಶ್ರೀನಿವಾಸರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಭಕ್ತವತ್ಸಲರೆಡ್ಡಿ, ಸಮ್ಮುಖದಲ್ಲಿ ಪ್ರಾರಂಭಿಸಿ, ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ.
ಶೆಲ್ಟರ್ ನಿರ್ಮಾಣ: ಈ ಮಾರ್ಗದಲ್ಲಿ ಹಲವು ಗ್ರಾಮಗಳಿದ್ದು, ಗೇಟ್‌ಗಳ ಬಳಿ ಬಸ್‌ಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ ನಿರ್ಮಿಸಲಾಗಿದೆ. ಈಗಾಗಲೇ ಸೊನ್ನವಾಡಿ ಬೈಪಾಸ್ ಸಮೀಪ, ನರಸಿಂಥತೀರ್ಥ, ಸೀಗೇನಹಳ್ಳಿ, ಅಲಾಲಸಂದ್ರ ಗೇಟ್, ಕಪ್ಪಲಮಡಗು, ಶ್ರೀರಂಗಪುರ, ವೆಂಕಟಾಪುರ, ಎನ್.ವಡ್ಡಹಳ್ಳಿ, ಪದ್ಮಘಟ್ಟ, ತಾತಿಕಲ್, ಹಳೆಕುಪ್ಪ, ನಂಗಲಿ, ಮುದಿಗೆರೆ, ಗಡೂxರು ಗೇಟ್ ಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.
ಯಾವುದೇ ಸೌಲಭ್ಯಗಳಿಲ್ಲ: ಆದರೆ, ಬಸ್ ನಿಲುಗಡೆ ಒಂದು ಕಡೆಯಾದರೆ, ಶೆಲ್ಟರ್ ನಿರ್ಮಿಸಿರುವುದು ಮತ್ತೂಂದು ಕಡೆ ಆಗಿದೆ. ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ಈ ತಂಗುದಾಣ ಆಶ್ರಯಿಸಿದರೆ, ಯಾವುದೇ ಪ್ರಯೋಜನವಾಗುವುದಿಲ್ಲ. ಕೋಟ್ಯಂತರ ರೂ.ನಲ್ಲಿ ನಿರ್ಮಿಸಿರುವ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಪ್ರತಿಯೊಂದು ಗೇಟ್‌ನ ಎರಡೂ ಕಡೆಗಳಲ್ಲಿ ಸುರಕ್ಷತೆಯುಳ್ಳ ತಂಗುದಾಣಗಳನ್ನು ನಿರ್ಮಾಣ ಮಾಡಬೇಕಾಗಿದೆ.
ಜನರ ತೆರಿಗೆ ಹಣದಿಂದ ನಿರ್ಮಿಸಿರುವ ರಸ್ತೆಯಲ್ಲಿ ಜನರಿಂದ ಶುಲ್ಕ ವಸೂಲಿ ಮಾಡಿದರೂ, ಸುರಕ್ಷತೆಗಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಉತ್ತಮ ತಂಗುದಾಣ ನಿರ್ಮಿಸದೇ ಇರುವುದು ವಿಪರ್ಯಾಸ. ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ರಾ.ಹೆ.75ರ ಮುಳಬಾಗಿಲಿನಿಂದ ಕರ್ನಾಟಕ ಗಡಿ ಭಾಗದವರೆಗೂ ಜೆಎಸ್‌ಆರ್ ಕಂಪನಿಯು ನಿರ್ಮಿಸಿರುವ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಯಾ ಗೇಟ್‌ಗಳಲ್ಲಿ ಸುರಕ್ಷತೆಯುಳ್ಳ ಬಸ್ ಶೆಲ್ಟರ್ ನಿರ್ಮಿಸಬೇಕಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು.
-ಮಂಜುನಾಥ್, ಅನಹಳ್ಳಿ ನಿವಾಸಿ.
ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜೊತೆ ಚರ್ಚಿಸಿ, ಜನರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ಎಚ್.ನಾಗೇಶ್, ಮುಳಬಾಗಿಲು ಶಾಸಕ