Advertisement
ಮುಖ್ಯ ಪೇಟೆ, ಸರ್ವಿಸ್ ರಸ್ತೆ, ಅಮೃತೇಶ್ವರೀ ದೇವಸ್ಥಾನ ಹಾಗೂ ಪಡುಕರೆ ಮೀನುಗಾರಿಕೆ ರಸ್ತೆಗೆ ಸಂಧಿಸುವ ಸ್ಥಳದಲ್ಲಿ ಈ ಜಂಕ್ಷನ್ ಇರುವುದರಿಂದ ಸರ್ವಿಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಸಾಗುವ ವಾಹನಗಳು ಮತ್ತು ಹೆದ್ದಾರಿಯಲ್ಲಿ ನೇರವಾಗಿ ಸಾಗುವ ವಾಹನಗಳ ನಡುವೆ ಆಗಾಗ ಅಪಘಾತಗಳು ಸಂಭವಿಸುತ್ತದೆ. ಹೆಚ್ಚಿನ ವಾಹನದಟ್ಟಣೆ, ಮಿತಿಮೀರಿದ ವೇಗ ಹಾಗೂ ಕೋಟದಿಂದ ಮಣೂರು- ಪಡುಕರೆ ಕಡೆಗೆ ಸಾಗುವ ಮೀನಿನ ಲಾರಿಗಳು ಇಲ್ಲಿನ ಜಂಕ್ಷನ್‌ನಲ್ಲಿ ನಿಂತು ತಿರುವು ಪಡೆದುಕೊಳ್ಳುವುದರಿಂದ ಮೀನಿನ ನೀರು ಹೇರಳ ಪ್ರಮಾಣದಲ್ಲಿ ಚೆಲ್ಲಿ ರಸ್ತೆ ವಿಪರೀತವಾಗಿ ಜಾರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯವಿದೆ. ಸ್ಥಳೀಯ ಸಿ.ಸಿ. ಕೆಮರದಲ್ಲಿ ಅಪಘಾತಗಳು ಸೆರೆಯಾಗಿದ್ದು ಹೆಚ್ಚಿನವು ಭೀಕರವಾಗಿದೆ ಹಾಗೂ ಕೂದಲೆಳೆಯ ಅಂತರದಲ್ಲಿ ಜೀವ ಹಾನಿ ತಪ್ಪುತ್ತಿದೆ.
Related Articles
Advertisement
ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಂಕ್ಷನ್ ಅನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಇದೆ ಹಾಗೂ ಕೋಟದಿಂದ ಗಿಳಿಯಾರು, ಕೋಟ ಮೂರ್ಕೈ ತನಕ ಸರ್ವಿಸ್ ರಸ್ತೆ ನಿಮಾಣವಾಗಬೇಕು ಎನ್ನುವ ಕೂಗು ಇರುವುದರಿಂದ ಸರ್ವಿಸ್ ರಸ್ತೆ ವಿಸ್ತರಣೆ ಜತೆಗೆ ಜಂಕ್ಷನ್ ಬೇರೆ ಕಡೆಗೆ ಸ್ಥಳಾಂತರಿಸುವ ಕುರಿತು ಚಿಂತನೆ ಅಗತ್ಯವಿದೆ. ಸಾಲಿಗ್ರಾಮ ಗುರುನರಸಿಂಹ ದೇಗುಲದ ಎದುರಿಗಿನ ಜಂಕ್ಷನ್ ನಲ್ಲೂ ಇದೇ ರೀತಿ ಸಾಕಷ್ಟು ಅಪಘಾತ, ಜೀವ ಹಾನಿ ಸಂಭವಿಸಿದ್ದರಿಂದ ಪ್ರತ್ಯೇಕ ಜಂಕ್ಷನ್ ಕುರಿತು ಅಲ್ಲಿನ ಸಾರ್ವಜನಿಕರು ಹೋರಾಟ ನಡೆಸಿದ್ದು, ಇದರ ಫಲವಾಗಿ ಮುಂದೆ ಈ ಬಗ್ಗೆ ಸೂಕ್ತ ಯೋಜನೆ ರೂಪಿಸುವುದಾಗಿ ಸಂಬಂಧಪಟ್ಟ ಇಲಾಖೆ ಮೌಖೀಕ ಭರವಸೆ ನೀಡಿದೆ. ಅದೇ ಮಾದರಿಯಲ್ಲಿ ಕೋಟದಲ್ಲೂ ಸಾರ್ವಜನಿಕ ಹೋರಾಟ ನಡೆದರೆ ಜಂಕ್ಷನ್ ಸ್ಥಳಾಂತರಕ್ಕೆ ಯೋಚನೆ-ಯೋಜನೆಗಳು ರೂಪುಗೊಳ್ಳಬಹುದು.
ಕಳವಳದ ಸಂಗತಿ: ಕೋಟ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತರುವುದು ಕಳವಳದ ಸಂಗತಿಯಾಗಿದೆ ಹಾಗೂ ನಾವು ಒಂದಷ್ಟು ಮಂದಿ ಆರಂಭದಲ್ಲೇ ಜಂಕ್ಷನ್‌ನ ಅಪಾಯದ ಕುರಿತು ಧ್ವನಿ ಎತ್ತಿದ್ದೆವು. ಇನ್ನಾದರೂ ಜಂಕ್ಷನ್ ಸ್ಥಳಾಂತರ ಅಥವಾ ಬೇರೆ ರೀತಿಯ ಪರಿಹಾರದ ಕುರಿತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಿದೆ. –ಕೇಶವ ಆಚಾರ್ಯ ಕೋಟ, ಸ್ಥಳೀಯರು
ತಾತ್ಕಾಲಿಕ ಪರಿಹಾರಕ್ಕೆ ಚಿಂತನೆ: ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚುತ್ತಿವೆ. ರಾತ್ರಿ ವೇಳೆ ಬ್ಯಾರಿಕೇಡ್ ತೆರವುಗೊಳಿಸುವ ಹಾಗೂ ಹಗಲು ಅಳವಡಿಸುವ ಜವಾಬ್ದಾರಿಯನ್ನು ಸ್ಥಳೀಯರು ವಹಿಸಿಕೊಳ್ಳುವುದಾದರೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಾಧ್ಯವಾದಷ್ಟು ಮಟ್ಟಿಗೆ ಅಪಘಾತದ ಪ್ರಮಾಣ ತಗ್ಗಿಸಬಹುದು. ಶಾಶ್ವತ ಪರಿಹಾರದ ಕುರಿತು ಯೋಜನೆ ಅಗತ್ಯವಿದೆ. –ಮಧು ಬಿ., ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕರು
-ರಾಜೇಶ್ ಗಾಣಿಗ ಅಚ್ಲಾಡಿ