ನವದೆಹಲಿ: ಕೆನಡಾ ಮೂಲದ ಭಯೋತ್ಪಾದಕ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಸಂಸ್ಥಾಪಕ ಗುರ್‌ಪತ್ವಂತ್ ಸಿಂಗ್ ಪನ್ನು ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆತ ಭಾರತದ ವಿರುದ್ಧ ಯುವಕರನ್ನು ಎತ್ತಿಕಟ್ಟುತ್ತಿದ್ದಾನೆ ಎಂದು ಗುಪ್ತಚರ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
“ನ.19ರಂದು ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸಲಾಗುವುದು. ಅಂದು ಸಿಖ್ಖರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಿರಿ. ಏಕೆಂದರೆ ನಿಮ್ಮ ಜೀವಕ್ಕೆ ಕುತ್ತಾಗಬಹುದು” ಎಂದು ವಿಡಿಯೋ ಮೂಲಕ ಭಾನುವಾರ ಉಗ್ರ ಪನ್ನು ಭಾರತಕ್ಕೆ ಬೆದರಿಕೆ ಹಾಕಿದ್ದ. 1985ರಲ್ಲಿ ಏರ್ ಇಂಡಿಯಾದ ಕನಿಷ್ಕ ವಿಮಾನ ಸ್ಫೋಟಿಸಿದಂತೆ ಈಗ ಧ್ವಂಸ ಮಾಡಲಾಗುವುದು ಎಂದು ಬೆದರಿಸಿದ್ದಾನೆ. ಕೆನಡಾದ ಟೊರೊಂಟಾದಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 747 ವಿಮಾನವನ್ನು ಮಾರ್ಗ ಮಧ್ಯೆಯೇ ಉಗ್ರರು ಸ್ಫೋಟಿಸಿದ್ದರು. ಘಟನೆಯಲ್ಲಿ 22 ವಿಮಾನ ಸಿಬ್ಬಂದಿ ಸೇರಿ 329 ಪ್ರಯಾಣಿಕರು ಅಸುನೀಗಿದ್ದರು.
ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸುವಂತೆ ಏರ್ ಇಂಡಿಯಾ ವಿಮಾನಗಳು ಸಂಚರಿಸುವ ರಾಷ್ಟ್ರಗಳಿಗೆ ಭಾರತ ಕೇಳಿದೆ.
ಇದೇ ವೇಳೆ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿದ್ದಾನೆ. ಇವರಿಬ್ಬರು ಇಂದಿರಾಗಾಂಧಿ ಅವರ ಅಂಗರಕ್ಷಕರಾಗಿದ್ದು, ಅವರನ್ನು ಹತ್ಯೆ ಮಾಡಿದ್ದರು.
“ಉಗ್ರ ಪನ್ನುಗೆ ಯಾವೆಲ್ಲ ರಾಷ್ಟ್ರಗಳ ಬೆಂಬಲ ನೀಡುತ್ತಿವೆ ಎಂಬುದು ನಮಗೆ ತಿಳಿದಿದ್ದು, ಇದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ನೂ ಅವರಿಗೆ ನಾವು ಆಗ್ರಹಿಸುತ್ತೇವೆ” ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.