Advertisement

ಯಶಸ್ವಿನಿ ಚಿಕಿತ್ಸಾ ದರ ಪರಿಷ್ಕರಣೆಗೆ ಚಿಂತನೆ: ಸಹಕಾರ ಸಚಿವ ಕೆ.ಎನ್‌.ರಾಜಣ್ಣ

11:22 PM Jul 11, 2023 | Team Udayavani |

ಬೆಂಗಳೂರು: ಯಶಸ್ವಿನಿ’ ಯೋಜನೆಯ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಪ್ರತಾಪಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಿರುವ ಚಿಕಿತ್ಸಾ ದರಗಳು ಕಡಿಮೆ ಅನಿಸುತ್ತದೆ. ಹಾಗಾಗಿ, ಅನೇಕ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಆದ್ದರಿಂದ ಯಶಸ್ವಿನಿ ಯೋಜನೆಯ ಚಿಕಿತ್ಸಾ ದರಗಳನ್ನು ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ. ಅಲ್ಲದೇ ಹೆಚ್ಚು ಫ‌ಲಾನುಭವಿಗಳನ್ನು ನೋಂದಾಯಿಸಿ ಅವರಿಗೆ ಹತ್ತಿರವಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾಸಾಂತ್ಯಕ್ಕೆ ಕಾರ್ಡ್‌
ಪರಿಷ್ಕೃತ ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಳ್ಳಲು ಗುರಿ ನಿಗದಿಪಡಿಸಲಾಗಿತ್ತು. 2023ರ ಮಾರ್ಚ್‌ ವೇಳೆಗೆ 45.80 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 12.89 ಲಕ್ಷ ಕಾರ್ಡುಗಳನ್ನು ಫ‌ಲಾನುಭವಿ ಕುಟುಂಬಗಳಿಗೆ ಜುಲೈ 1ಕ್ಕೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಕಾರ್ಡುಗಳನ್ನು ಕಾರ್ಡು ಮುದ್ರಕರು ನೇರವಾಗಿ ರವಾನಿಸಿರುತ್ತಾರೆ. ಅಪೂರ್ಣ ಅಥವಾ ಅಸ್ಪಷ್ಟ ಮಾಹಿತಿ ಇರುವ ಸುಮಾರು 70 ಸಾವಿರ ಸದಸ್ಯರಿಗೆ ಸಂಬಂಧಿಸಿದಂತೆ 18,153 ಕಾರ್ಡುಗಳು ಮುದ್ರಣವಾಗದ ಕಾರಣ ವಿತರಣೆ ಮಾಡಿಲ್ಲ. ಯೋಜನೆಯಡಿ ಕಾರ್ಡ್‌ ಸಿಗದೆ ಬಾಕಿ ಇರುವ ಅರ್ಹ ಸದಸ್ಯರಿಗೆ ಜುಲೈ 31ರೊಳಗಾಗಿ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಮೆ ಪದ್ಧತಿಗೆ ಹೋಗಲ್ಲ
ಯಶಸ್ವಿನಿ ಯೋಜನೆ ಸಹಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಜಾರಿಗೆ ತರಲಾಗಿದೆ. ಆಯುಷ್ಮಾನ್‌ ಯೋಜನೆಯಲ್ಲಿ ರೆಫೆರಲ್‌ ಆಸ್ಪತ್ರೆ ವ್ಯವಸ್ಥೆ ಇದೆ. ಯಶಸ್ವಿನಿ ಯೋಜನೆಯಲ್ಲಿ ಇಲ್ಲ. ವಿಮೆ ವ್ಯವಸ್ಥೆಯಲ್ಲಿ 60 ವರ್ಷ ಮೇಲ್ಪಟ್ಟವರನ್ನು ವಿಮಾ ಕಂಪೆನಿಗಳು ಪರಿಗಣಿಸುವುದಿಲ್ಲ. ಆದರೆ, ಯಶಸ್ವಿನಿ ಯೋಜನೆಗೆ ಸರಕಾರ ಅಂತಹ ಯಾವುದೇ ಷರತ್ತು ವಿಧಿಸಲು ಬರುವುದಿಲ್ಲ. ಹಾಗಾಗಿ, ಯಶಸ್ವಿನಿ ಯೋಜನೆಯಡಿ ವಿಮೆ ಪದ್ದತಿಗೆ ಹೋಗಲ್ಲ.

ನಾಲ್ಕು ಜನ ಸದಸ್ಯರು ಇರುವ ಗ್ರಾಮೀಣ ಕುಟುಂಬಗಳಿಗೆ 500 ರೂ. ವಂತಿಕೆ ಇರುತ್ತದೆ. ಎಸ್ಸಿ-ಎಸ್ಟಿ ಕುಟುಂಬಗಳಿಗೆ ಯಾವುದೇ ವಂತಿಕೆ ಇರುವುದಿಲ್ಲ. ನಗರ ಪ್ರದೇಶದ ಕುಟುಂಬಗಳಿಗೆ 1 ಸಾವಿರ ರೂ. ವಂತಿಕೆ ಇರುತ್ತದೆ. ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ಗ್ರಾಮೀಣ ಭಾಗದಲ್ಲಿ ಪ್ರತಿ ಹೆಚ್ಚುವರಿ ಸದಸ್ಯರಿಗೆ 100 ರೂ. ನಗರ ಪ್ರದೇಶದ ಸದಸ್ಯರಿಗೆ 200 ರೂ. ವಂತಿಕೆ ಇರುತ್ತದೆ ಎಂದು ಜೆಡಿಎಸ್‌ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಇದೇ ವೇಳೆ ಸಚಿವ ಕೆ.ಎನ್‌. ರಾಜಣ್ಣ ಉತ್ತರಿಸಿದರು.

Advertisement

544 ನೆಟ್‌ವಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಯಶಸ್ವಿನಿ ಯೋಜನೆಯಡಿ ನೋಂದಾಯಿತ ಸದಸ್ಯರಿಗೆ ಯೂನಿಕ್‌ ಐಡಿ ಸಂಖ್ಯೆಯುಳ್ಳ ಪ್ಲ್ರಾಸ್ಟಿಕ್‌ ಕಾರ್ಡ್‌ ಒದಗಿಸಲಾಗುತ್ತಿದ್ದು, ರಾಜ್ಯಾದ್ಯಂತ ಗುರುತಿಸಿದ 544 ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಆ ಕಾರ್ಡ್‌ ತೋರಿಸಿ 1,650 ಚಿಕಿತ್ಸೆ/ಶಸ್ತ್ರಚಿಕಿತ್ಸೆಗಳನ್ನು ಮತ್ತು 478 ಐಸಿಯು ಚಿಕಿತ್ಸೆಗಳು ಸೇರಿ ಒಟ್ಟು 2,128 ಚಿಕಿತ್ಸೆಗಳನ್ನು ನಗದುರಹಿತವಾಗಿ ಪಡೆದುಕೊಳ್ಳಬಹುದು. ಈ ವರ್ಷ ಜನವರಿಯಿಂದ ಜೂನ್‌ವರೆಗೆ 22,499 ರೋಗಿಗಳು 476 ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ 38.52 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next