ಬೆಂಗಳೂರು: ಶಕ್ತಿಕೇಂದ್ರ ವಿಧಾನಸೌಧದ ಸಮೀಪವೇ ಅತಿ ಭದ್ರತಾ ಪ್ರದೇಶ ಪ್ರದೇಶದಲ್ಲಿರುವ ಗಾಲ್ಫ್ ಕೋರ್ಸ್ ಅನ್ನು ಶಾಸಕರ “ಕಾನ್‌ಸ್ಟಿಟ್ಯೂಷನಲ್ ಕ್ಲಬ್’ ನಿರ್ಮಾಣಕ್ಕೆ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದಂತಿದೆ.
ಬ್ರಿಟಿಷ್ ಆಡಳಿತ ಅವಧಿಯಲ್ಲಿ 1892ರಲ್ಲಿ ಗಾಲ್ಫ್ ಕೋರ್ಸ್‌ಗೆ ನೀಡಲಾಗಿದ್ದ ಪ್ರದೇಶ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಕಡೆಯ ಬಾರಿ ವಿಸ್ತರಿಸಲಾಗಿದ್ದ ಗುತ್ತಿಗೆ ಅವಧಿ 2021ಕ್ಕೆ ಮುಕ್ತಾಯವಾಗಲಿದೆ. ಸಂಸತ್ತಿನ ಕಾನ್‌ಸ್ಟಿಟ್ಯೂಷನಲ್ ಕ್ಲಬ್ ಮಾದರಿಯಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಹಾಗೂ ಮಾಜಿ ಶಾಸಕರಿಗೆ ಕ್ಲಬ್ ಸೇವೆ ಒದಗಿಸಲು ಸೂಕ್ತ ಜಾಗಕ್ಕೆ ಹುಡುಕಾಟ ನಡೆಸಿರುವ ರಾಜ್ಯ ಸರ್ಕಾರ, ಗಾಲ್ಫ್ ಕೋರ್ಸ್ ಜಾಗ ಬಳಸುವ ಆಲೋಚನೆಯಲ್ಲಿದೆ.
ಗಾಲ್ಫ್ ಕೋರ್ಸ್ ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಆ ಜಾಗವನ್ನು ವಶಕ್ಕೆ ಪಡೆದು ಶಾಸಕರ ಕ್ಲಬ್‌ಗ ಬಳಸಿಕೊಳ್ಳುವ ಇಂಗಿತವನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಗಾಲ್ಫ್ ಕೋರ್ಸ್ ಉದ್ದೇಶಕ್ಕೆ ನೀಡಲಾದ ಜಾಗದಲ್ಲಿ ನಿಯಮಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಇಲಾಖೆಯ ಗಮನಕ್ಕೂ ತರದೆ, ಅನುಮತಿಯನ್ನೂ ಪಡೆಯದೆ ಮನಬಂದಂತೆ ನಿರ್ಮಾಣ ಕಾರ್ಯ ಕೈಗೊಂಡು ನಿಯಮ ಉಲ್ಲಂ ಸಿದ್ದಾರೆ. ಅಕ್ರಮವಾಗಿ ಬಾರ್, ಕ್ಲಬ್ ತೆರೆದಿದ್ದಾರೆ. ಈ ಸಂಬಂಧ ಕಳೆದ ಅಕ್ಟೋಬರ್‌ನಲ್ಲಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ಬಂದಿಲ್ಲ. ಮತ್ತೂಮ್ಮೆ ನೋಟಿಸ್ ಜಾರಿ ಮಾಡಲಾಗುವುದು. ನಂತರವೂ ಸಮಜಾಯಿಷಿ ನೀಡದಿದ್ದರೆ ಗುತ್ತಿಗೆ ರದ್ದುಪಡಿಸಿ ಜಾಗವನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ಗಾಲ್ಫ್ ಕೋರ್ಸ್ ನಿರ್ವಹಣೆಯು ಉತ್ತರ ಭಾರತ ಮೂಲಕ ಪ್ರಭಾವಿಗಳ ನಿಯಂತ್ರಣದಲ್ಲಿದೆ. ಜತೆಗೆ ಐಎಎಸ್, ಐಪಿಎಸ್ ಅಧಿಕಾರಿಗಳ ಲಾಬಿ ತೀವ್ರವಾಗಿರುವ ಜಾಗ ಬಿಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಕೈಗೊಳ್ಳಲಾಗುವುದು. ನಿಯಮಬಾಹಿರವಾಗಿ ಕ್ಲಬ್ ನಡೆಸುತ್ತಿರುವುದು ಸೇರಿದಂತೆ ಕಾನೂನು ಉಲ್ಲಂಘನೆ ಕುರಿತಂತೆ ಇಲಾಖೆ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.