Advertisement

ಶಾಲಾರಂಭಕ್ಕೆ ಮುನ್ನ ಸಮೀಕ್ಷೆ ಅಂಶ ಪರಿಗಣಿಸಿ

12:38 AM Oct 04, 2020 | mahesh |

ಬೆಂಗಳೂರು: ಶಾಲೆಗಳನ್ನು ಆರಂಭಿಸಬೇಕೇ, ಬೇಡವೇ ಎಂಬ ಬಗ್ಗೆ “ಉದಯವಾಣಿ’ಯು ನಡೆಸಿದ ಮೆಗಾ ಸರ್ವೇಯಲ್ಲಿ ವ್ಯಕ್ತವಾಗಿರುವ ಅಂಶಗಳನ್ನು ಪರಿಗಣಿಸಿ, ವಿಸ್ತೃತ ಸಮಾಲೋಚನೆ ನಡೆಸಿದ ಅನಂತರವೇ ಶಾಲೆ ಆರಂಭದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

Advertisement

-ಇದು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರ ಮಾತು. ಶಾಲೆ ಪುನರಾ ರಂಭ ಸಂಬಂಧ “ಉದಯವಾಣಿ’ ನಡೆಸಿದ ಆನ್‌ಲೈನ್‌ ಸಮೀಕ್ಷೆಯನ್ನು ಗಮನಿಸಿದ್ದೇನೆ. ಜನಪ್ರತಿನಿಧಿಗಳು, ಪೋಷಕರ ಮನದಾಳ ಈ ಸಮೀಕ್ಷೆ ಯಲ್ಲಿ ವ್ಯಕ್ತವಾಗಿದೆ. ರಾಜ್ಯ ಸರಕಾರ ಶಾಲೆಗಳ ಆರಂಭ ವಿಷಯದಲ್ಲಿ ಈ ಎಲ್ಲವನ್ನೂ ಪರಿಗಣಿಸುತ್ತದೆ. ಹೆತ್ತವರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಅಭಯ ನೀಡಿದ್ದಾರೆ.

ಅತ್ತ ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ, ಸದ್ಯಕ್ಕೆ ಶಾಲೆ ಆರಂಭ ಬೇಡವೇ ಬೇಡ. ಈ ವಿಚಾರದಲ್ಲಿ ನಾವು ಪ್ರಯೋಗ ಮಾಡುವ ಸ್ಥಿತಿಯಲ್ಲಿ ಇಲ್ಲ. ಶಾಲಾರಂಭ ಸಂಬಂಧ ಅವಸರದ ತೀರ್ಮಾನದಿಂದ ಪುಟ್ಟ ಮಕ್ಕಳನ್ನು ಅಪಾಯಕ್ಕೆ ತಳ್ಳಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಳಿಯಲ್ಲಿ ಆರಂಭಿಸಿ
“ಉದಯವಾಣಿ’ಯ ಸಮೀಕ್ಷೆ ನೋಡಿದ್ದೇನೆ. ಅದರಲ್ಲಿ ವ್ಯಕ್ತವಾಗಿ ರುವ ಅಭಿಪ್ರಾಯಗಳು ಸರಿಯಾ ಗಿವೆ. ಈ ಬಗ್ಗೆ ಸರಕಾರ ಗಮನಹರಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಮತ್ತು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಒಂದು ತರಗತಿಯಲ್ಲಿ 50 ವಿದ್ಯಾರ್ಥಿಗಳಿದ್ದರೆ ಅವರನ್ನು ಐದು ತಂಡ ಮಾಡಿ ಪ್ರತಿ ಹತ್ತು ವಿದ್ಯಾರ್ಥಿಗಳಿಗೆ ಒಂದು ಕೊಠಡಿಯಲ್ಲಿ ಒಂದೊಂದು ತಾಸು ನಿತ್ಯವೂ ಒಂದೊಂದು ವಿಷಯ ಬೋಧನೆ ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೂ ಶಾಲೆಯ ಸಂಪರ್ಕ ಇದ್ದಂತಾಗುತ್ತದೆ. ಪಿಯುಸಿ ವಿಚಾರದಲ್ಲಿ ತಲಾ 20 ವಿದ್ಯಾರ್ಥಿಗಳನ್ನು ಒಂದೊಂದು ತರಗತಿಯಲ್ಲಿ ಕುಳ್ಳಿರಿಸಿ ಬೋಧನೆ ಮಾಡಬಹುದು. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಿಗೆ ಪಾಳಿ ಆಧಾರದಲ್ಲಿ ತರಗತಿ ನಡೆಸಬಹುದು. ಸರಕಾರಕ್ಕೂ ನಾನು ಈ ಬಗ್ಗೆ ಹೇಳಲು ಬಯಸುತ್ತೇನೆ. ಸಚಿವರಿಗೂ ಸಲಹೆ ನೀಡಲಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

Advertisement

ಶಾಲೆಯಲ್ಲಿ ತರಗತಿ ಆರಂಭಿಸದೇ ಇದ್ದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಶೈಕ್ಷಣಿಕ ಗ್ಯಾಪ್‌ ಭರ್ತಿ ಮಾಡುವುದು ತುಂಬಾ ಕಷ್ಟ. ಹೀಗಾಗಿ ಸರಕಾರವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು, ಶಾಲಾರಂಭದ ಬಗ್ಗೆ ನಿರ್ಧರಿಸಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವುದು ಅಷ್ಟೇ ಮುಖ್ಯವಾಗಿದೆ.
-ಪ್ರೊ| ಎಂ.ಕೆ. ಶ್ರೀಧರ್‌, ಶಿಕ್ಷಣ ತಜ್ಞರು

ಇನ್ನೂ ನಿರ್ಧಾರವಾಗಿಲ್ಲ
ರಾಜ್ಯ ಸರಕಾರ ಶಾಲೆಗಳನ್ನು ತೆರೆಯುವುದರ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅ. 15ರಿಂದ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದು, ಅಂತಿಮ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಟ್ಟಿದೆ. ಈ ಬಗ್ಗೆ ವರದಿ ಸಲ್ಲಿಸಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಮುಂದಿನ ಮಂಗಳವಾರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಭೆ ಕರೆಯಲಾಗಿದ್ದು, ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಶಾಲೆ ಆರಂಭ ಬೇಡ
ಸರಕಾರವು ಸಂಪೂರ್ಣ ಸಿದ್ಧವಾಗುವವರೆಗೆ, ಯಾವುದೇ ರೀತಿಯಲ್ಲೂ ಮಕ್ಕಳಿಗೆ ಸೋಂಕು ಹರಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಶಾಲೆ ಆರಂಭಿಸಬೇಕು. ಅಲ್ಲಿಯ ವರೆಗೂ ಬೇಡ. ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಒತ್ತಡ ಹೇರಬಾರದು. ಇನ್ನು ಸ್ವಲ್ಪ ದಿನ ಕಾಯುವುದರಲ್ಲಿ ತಪ್ಪಿಲ್ಲ. ಒಂದು ವರ್ಷ ಹೋದರೂ ಪರವಾಗಿಲ್ಲ.
-ವಾಸುದೇವ ಶರ್ಮಾ, ಶಿಕ್ಷಣ ತಜ್ಞರು

ಶೂನ್ಯ ಶೈಕ್ಷಣಿಕ ವರ್ಷ ಆಗಲಿ
ಸರಕಾರವು ಮಕ್ಕಳ ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಂಡು ಪ್ರಾಥಮಿಕ, ಪೂರ್ವ ಪ್ರಾಥಮಿಕ ತರಗತಿಗಳಿಗೆ ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಣೆ ಮಾಡಿದರೂ ಸಮಸ್ಯೆಯಾಗಲಾರದು. ಶಾಲೆಗಳನ್ನು ಯಾವುದೇ ತರಾತುರಿಯಲ್ಲಿ ಆರಂಭಿಸುವ ನಿರ್ಧಾರ ಮಾಡದೆ ಕೊರೊನಾ ಪರಿಸ್ಥಿತಿ ಸುಧಾರಣೆಯ ಅನಂತರ ಶಾಲಾರಂಭದ ತೀರ್ಮಾನ ಮಾಡಬೇಕು.
ದೇವೇಗೌಡ, ವಿಧಾನ ಪರಿಷತ್‌ ಸದಸ್ಯ

ಮಕ್ಕಳ ಜೀವ ಮುಖ್ಯ
ಮಕ್ಕಳ ಜೀವ ಮತ್ತು ಆರೋಗ್ಯ ಸಾಕಷ್ಟು ಮುಖ್ಯ. ಆದರೆ ಅವರ ಶೈಕ್ಷಣಿಕ ಹಿತದೃಷ್ಟಿಯನ್ನೂ ನೋಡಬೇಕಾಗುತ್ತದೆ. ವಿದ್ಯಾಗಮದ ಅನುಷ್ಠಾನದಲ್ಲಿ ಕೆಲವು ಲೋಪಗಳಿವೆ. ಅವುಗಳನ್ನು ಸರಿಪಡಿಸಿ ಇನ್ನಷ್ಟು ಚೆನ್ನಾಗಿ ಅನುಷ್ಠಾನ ಮಾಡಬೇಕು. ಶಾಲಾರಂಭಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಎಸ್‌ಒಪಿ ಸಿದ್ಧಪಡಿಸಬೇಕು.
ಅರುಣ್‌ ಶಹಪುರ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next