ಮುಂಬಯಿ: ಇತಿಹಾಸ ಪ್ರಸಿದ್ಧ ಭಾರತದ ಅತೀ ಪುರಾತನ ಹಾಗೂ ವಿಶ್ವದಾದ್ಯಂತ ಅಸಖ್ಯಾಂತ ಭಕ್ತಾದಿಗಳ ಸಂಗಮ ಕ್ಷೇತ್ರ ಉಡುಪಿ ಶ್ರೀ ಕೃಷ್ಣ ದೇವಾಲಯ. ಶ್ರೀ ಮಧ್ವಾಚಾರ್ಯರ ತತ್ವದಾರ್ಶ ಹಾಗೂ ಆಧ್ಯಾತ್ಮಿಕವಾಗಿ ಸಂಪದ್ಭರಿತವಾಗಿರುವ ಶ್ರೀ ಕ್ಷೇತ್ರ ನಂಬಿಕೆ, ಶ್ರದ್ಧೆ, ಸಂಸ್ಕಾರ ಮಾನವೀಯ ಧರ್ಮಗಳನ್ನು ಬೋಧಿಸುವ ತಾಣವಾಗಿದೆ. ಸನಾತನ ಧರ್ಮ, ಪೌರಾಣಿಕ ಕಥೆಗಳ ಮೂಲಕ ವಿಕೃತ ಮನಸ್ಸುಗಳನ್ನು ಜಾಗೃತಗೊಳಿಸಿ ಧರ್ಮ ಸಂರಕ್ಷಣೆಗೆ ತಾವೆಲ್ಲರು ಕೈಜೋಡಿಸಬೇಕು ಎಂದು ದ್ವಿತೀಯ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಸೆ. 29ರಂದು ಬೊರಿವಲಿ ಪಶ್ಚಿಮದ ಜೈರಾಜ್ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತುಳುನಾಡಿನ ಆರಾಧನಾ ಪದ್ಧತಿ, ಸಾಂಸ್ಕೃತಿಕ ವೈಭವ, ಆಧ್ಯಾತ್ಮಿಕ ಚಿಂತನೆ ಆಡಳಿತ ಮೊಕ್ತೇಸರ ಪ್ರದೀಪ್ ಸಿ. ಶೆಟ್ಟಿ ಅವರ ನೇತೃತ್ವದಲ್ಲಿ ನಿರಂತರವಾಗಿ ಜರಗುತ್ತಿದೆ ಎಂಬುವುದಕ್ಕೆ ಇಲ್ಲಿನ ಜನ ಸಂದಣಿಯ ಭಕ್ತರೆ ನಿದರ್ಶನವಾಗಿದ್ದಾರೆ. ದಿನನಿತ್ಯ ವಿವಿಧ ಪೂಜಾ ಕೈಂಕರ್ಯ, ಹೋಮ, ಜಪಯಜ್ಞ, ಅನ್ನಸಂತರ್ಪಣೆಯಿಂದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನಂಬಿಕೆ, ಶ್ರದ್ಧೆಗಳಿಂದ ಪಾವಿತ್ರÂ ಹೊಂದಿದೆ. ಪರ್ಯಾಯ ಉತ್ಸವದಲ್ಲಿ ಆಯೋಜಿಸಲಾಗಿರುವ ಲಕ್ಷ ತುಳಸಿ ಅರ್ಚನೆ, ಅಖಂಡ ಭಜನ ನಾಮಾರ್ಚನೆಯಲ್ಲಿ ಮುಂಬಯಿಯ ಜನತೆ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದರು.
ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರದೀಪ್ ಸಿ. ಶೆಟ್ಟಿ ದಂಪತಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾರಾರ್ಪಣೆಗೈದು, ಫಲಪುಷ್ಪಾದಿಗಳಿಂದ ಗೌರವಪೂರ್ವಕವಾಗಿ ಸ್ವಾಗತಿಸಿ, ಮಂತ್ರಾಕ್ಷತೆಯೊಂದಿಗೆ ಆಶೀರ್ವಾದ ಪಡೆದರು. ಪ್ರಬಂಧಕ ಬೆಳ್ಮಣ್ ವೆಂಕಟ್ರಮಣ ತಂತ್ರಿ ಅವರು ಪಲಿಮಾರು ಶ್ರೀಗಳಿಗೆ ತುಳಸಿಮಾಲೆ ಹಾಕಿ ಗೌರವಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರದೀಪ್ ಸಿ. ಶೆಟ್ಟಿ ಸ್ವಾಗತಿಸಿ, ಪಲಿಮಾರು ಶ್ರೀಗಳ ಪರ್ಯಾಯ ಸಂದರ್ಭದಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕು. ಶ್ರೀ ಮಹಿಷಮರ್ದಿನಿ ದೇವ ಸ್ಥಾನದಲ್ಲಿ ಜರಗಲಿರುವ ವರ್ಷದ ಜಾತ್ರೆ, ಬಲಿ ಉತ್ಸವ, ನಾಗರ ಪಂಚಮಿ, ನವರಾತ್ರಿ, ದೀಪಾವಳಿ ಮೊದಲಾದ ವಿಶೇಷ ಹಬ್ಬಹರಿದಿನಗಳು ತುಳುನಾಡಿನ ಆಚರಣೆಯೊಂದಿಗೆ ಆಯೋಜಿಸಲಾಗುತ್ತದೆ. ಶುಭಕಾರ್ಯ ವಿವಾಹ, ಹಾಗೂ ವಿವಿಧ ಪೂಜಾ ಸಂಕಲ್ಪಗಳನ್ನು ದೇವಸ್ಥಾನದಲ್ಲಿ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ತುಳು-ಕನ್ನಡಿಗರೆಲ್ಲರು ಪಡೆದುಕೊಳ್ಳಬೇಕು ಎಂದರು.
ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ದಂಪತಿ, ಸಂತೋಷ್ ಕುಮಾರ್ ಭಟ್, ಪಲಿಮಾರು ಮಠದ ಸಂಚಾಲಕ ಶ್ರೀಶ ಭಟ್, ಗುರುರಾಜ ಉಪಾಧ್ಯಾಯ, ಗಿರೀಶ್ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಅನೇಕ ಗಣ್ಯರು, ತುಳು-ಕನ್ನಡಿಗರು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.
ಚಿತ್ರ-ವರದಿ : ರಮೇಶ್ ಅಮೀನ್