ಮೊಳಕಾಲ್ಮೂರು: ಭೂಮಿ ಮೇಲಿನ ಮನುಷ್ಯ ಹಾಗೂ ಸಕಲ ಜೀವರಾಶಿಗಳು ಜೀವಿಸಲು ಅತ್ಯವಶ್ಯವಾಗಿರುವ ಜೀವ ಜಲವನ್ನು ಮಿತವಾಗಿ ಬಳಸಿ ಸಂರಕ್ಷಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧಿಧೀಶರಾದ ಎಸ್. ನಿರ್ಮಲಾ ಕರೆ ನೀಡಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮೊಳಕಾಲ್ಮೂರು ಸಹಯೋಗದೊಂದಿಗೆ ವಿಶ್ವ ಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಭೂಮಿ ಮೇಲೆ ಜೀವನ ಮಾಡಲು ಮುಖ್ಯವಾಗಿ ಗಾಳಿ, ಬೆಳಕು, ಆಹಾರ, ಬಟ್ಟೆ ಸೇರಿದಂತೆ ಬಹು ಮುಖ್ಯವಾದ ನೀರು ತುಂಬಾ ಅವಶ್ಯಕ. ಇವುಗಳಿಲ್ಲದೆ ಜೀವನ ಮಾಡುವುದು ಕಷ್ಟ ಸಾಧ್ಯವಾಗಿದೆ. ಮನುಷ್ಯ ಬೆಟ್ಟ, ಗುಡ್ಡಗಳಲ್ಲಿ ಜೀವನ ಮಾಡುವುದು ಅಸಾಧ್ಯವಾಗಿದ್ದು, ಗಿಡ, ಮರ ಇನ್ನಿತರ ಪ್ರಕೃತಿ ಸಂಪತ್ತನ್ನು ಅವಲಂಬಿಸಿದ್ದಾನೆ. ಗಾಳಿ, ನೀರು ಇಲ್ಲದಿದ್ದಲ್ಲಿ ಬದುಕಲು ಅಸಾಧ್ಯವಾಗಿರುವುದರಿಂದ ನೀರನ್ನು ಜೀವ ಜಲ ಎನ್ನುತ್ತಾರೆ. ಭೂಮಿ ಮೇಲೆ ಶೇ. 75 ರಷ್ಟು ನೀರಿದ್ದರೂ, ಅದರಲ್ಲಿ ಶೇ. 2 ರಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭೂಮಿ ಮೇಲೆ ಜನಸಂಖ್ಯಾ ಸ್ಫೋಟವಾಗಿ ಜನಸಂಖ್ಯೆ ಹೆಚ್ಚಾಗಿದೆ. ವ್ಯವಸಾಯ ಇನ್ನಿತರ ಕೆಲಸಗಳಿಗೆ ನೀರಿನ ಅಭಾವ ಹೆಚ್ಚಾಗಿರುವುದರಿಂದ ಮುಂದಿನ ಪೀಳಿಗೆಗಾಗಿ ಮಿತವಾಗಿ ಬಳಸಿ ಸಂರಕ್ಷಿಸಬೇಕಾಗಿದೆ. ಜೊತೆಗೆ ಗಿಡ ಮರಗಳನ್ನು ಬೆಳೆಸಿ ಅಂತರ್ಜಲವನ್ನು ವೃದ್ಧಿಸಬೇಕೆಂದರು.
ವಕೀಲರ ಸಂಘದ ಕಾರ್ಯದರ್ಶಿ ವಿ.ಡಿ. ರಾಘವೇಂದ್ರ ಮಾತನಾಡಿ, ಭೂಮಿ ಮೇಲೆ 1335 ಘನ ಮೀಟರ್ ಪ್ರಮಾಣದ ನೀರು ಇದೆ. ಬಳಕೆಗೆ ಕೇವಲ ಶೇ. 2 ರಷ್ಟು ಮಾತ್ರ ನೀರನ್ನು ಸರೋವರ, ಹಳ್ಳ, ಕೊಳ್ಳ, ಕೆರೆ ಇನ್ನಿತರ ಮೂಲಗಳಿಂದ ಬಳಸಿಕೊಳ್ಳಬಹುದಾಗಿದೆ. ಶುದ್ಧ ಕುಡಿಯುವ ನೀರಿನಿಂದ ಮನುಷ್ಯನಿಗೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಬಾಯಿಯ ಸ್ವತ್ಛತೆ ಕಾಪಾಡಬಹುದಾಗಿದೆ.
ಹೃದಯದ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಮೂತ್ರ ಕೋಶದ ಸಮಸ್ಯೆ, ಚರ್ಮದ ಆರೋಗ್ಯ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿವಾರಿಸಲಾಗುವುದು. ಪರಿಸರ ನಾಶದಿಂದ ಅಂತರ್ಜಲ ಕುಸಿತವುಂಟಾಗಿ ನೀರಿನ ಅಭಾವ ಉಂಟಾಗುವುತ್ತದೆ. ಪರಿಸರವನ್ನು ಬೆಳೆಸಿ ಉಳಿಸುವ ಮೂಲಕ ಅಂತರ್ಜಲವನ್ನು ಸಂರಕ್ಷಿಸಬೇಕೆಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಆರ್. ಆನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಡಿ. ಬಸವರಾಜ್, ವಕೀಲರಾದ ಎಂ.ಎನ್. ವಿಜಯಲಕ್ಷ್ಮೀ, ರಾಮಾಂಜನೇಯ, ಪಾಪಯ್ಯ, ಯರ್ರಿಸ್ವಾಮಿ, ವೆಂಕಟೇಶ್, ಕೆ. ನಾಗೇಶ್, ಎಂ. ಚಂದ್ರಣ್ಣ, ಜೆ. ಬಸಪ್ಪ, ವೀರೇಶ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.