ಬೆಂಗಳೂರು: ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಹೈಕೋರ್ಟ್ ಅಸ್ತು ಎಂದಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆ 2022ರ ನ. 18ರಂದು 1:1 ಅನುಪಾತದಲ್ಲಿ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಮಹತ್ವದ ಆದೇಶ ನೀಡಿದೆ.
2023ರ ಜೂ. 8ರಂದು ಸಿದ್ದಪಡಿಸಿರುವ ಆಯ್ಕೆ ಪಟ್ಟಿಯಲ್ಲಿ ಸೇರಿರುವ 13,352 ಅಭ್ಯರ್ಥಿಗಳನ್ನು ಶಿಕ್ಷಕರನ್ನಾಗಿ ನೇಮಕ ಮಾಡುವ ಪ್ರಕ್ರಿಯೆ ಮುಂದು ವರಿಸುವಂತೆ ಹೈಕೋರ್ಟ್ ಸರಕಾರಕ್ಕೆ ಆದೇಶಿಸಿದೆ.
ಏಕಸದಸ್ಯ ನ್ಯಾಯಪೀಠ ಜ. 30ರಂದು ನೀಡಿದ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಜಿ.ವಿ. ನರೇಂದ್ರ ಬಾಬು ಹಾಗೂ ಇತರ 42 ಅಭ್ಯರ್ಥಿಗಳ ಮೇಲ್ಮನವಿ ಸಹಿತ ಇದೇ ವಿಚಾರಕ್ಕೆ ಸಂಬಂಧಿಸಿದ 6 ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠ ಜ. 30ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿ, ಮೇಲ್ಮನವಿಗಳನ್ನು ಭಾಗಶಃ ಮಾನ್ಯ ಮಾಡಿ ಮಹತ್ವದ ಆದೇಶ ಪ್ರಕಟಿಸಿದೆ.
ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರವನ್ನು ಮತ್ತು ಮೆರಿಟ್/ರೋಸ್ಟರ್ ಪರಿಗಣಿಸಿ ತಾತ್ಕಾಲಿಕ ಆಯ್ಕೆಪಟ್ಟಿ ಸಿದ್ಧಪಡಿಸಿ ಜೂ. 6ರಂದು ಪ್ರಕಟಿಸಲಾಗಿದೆ ಎಂದು ಸರಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿತು. ಅದ ರಂತೆ ನೇಮಕಾತಿಗೆ ಸರಕಾರ ಹೊರಡಿಸಿದ್ದ ಅಧಿಸೂಚನೆ ಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮ ಗೊಳಿಸಬಹುದಾಗಿದೆ.