Advertisement

ಶಿಶಿಲ-ಭೈರಾಪುರ- ಸುವರ್ಣ ಚತುಷ್ಪಥ ರಸ್ತೆಗೆ ಸಂಪರ್ಕ

03:48 PM Nov 24, 2017 | |

ಬೆಳ್ತಂಗಡಿ: ಚಿಕ್ಕಮಗಳೂರು, ಸುವರ್ಣ ಚತುಷ್ಪಥ ರಸ್ತೆಗೆ ಸಂಪರ್ಕ ಕಲ್ಪಿಸಲು ಶಿಶಿಲ-ಭೈರಾಪುರ- ಮೂಡಿಗೆರೆ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ನಡೆಸುವ ಕುರಿತು ವಿಧಾನಸಭೆಯಲ್ಲಿ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಈ ಮೂಲಕ ಪಶ್ಚಿಮಘಟ್ಟದ ದಟ್ಟ ಕಾಡು, ಬೆಟ್ಟ ಪ್ರದೇಶವನ್ನು ಹಾಳುಗೆಡವಲು ಪ್ರಸ್ತಾವನೆ ತಯಾರಿಸಲಾಗಿದೆ ಎಂದು ಪರಿಸರಪ್ರಿಯರು ರಸ್ತೆ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿದ್ದಾರೆ. ಆದರೆ ರಸ್ತೆ ಆಗಬೇಕೆಂದು ಅನೇಕರು ಹೋರಾಟ ಮಾಡಿದ್ದು ಪ್ರಸ್ತಾವನೆ ಜಾರಿಯಾಗಲು ಅವರೂ ಹೋರಾಟಕ್ಕೆ ಹೊರಟಿದ್ದಾರೆ. ಒಟ್ಟಿನಲ್ಲಿ ಪರ ವಿರೋಧದ ಹೋರಾಟ ನಿಚ್ಚಳವಾಗಿದೆ.

Advertisement

ಪೂರ್ವಭಾವಿ ಸಭೆ
ಈಗಾಗಲೇ ಮಂಗಳೂರಿನಿಂದಉಜಿರೆ – ಚಾರ್ಮಾಡಿ – ಮೂಡಿಗೆರೆ – ಚಿಕ್ಕಮಗಳೂರು -ಕಡೂರು -ಹೊಳಲ್ಕೆರೆಯಿಂದ ಚಿತ್ರದುರ್ಗ ತಲುಪಲು 303 ಕೀ.ಮೀ. ಅಂತರದ ಉತ್ತಮವಾದ ಹೆದ್ದಾರಿ ಇದ್ದರೂ ಈಗ ಬಂಟ್ವಾಳ- ನೆಲ್ಯಾಡಿ-ಶಿಶಿಲ-ಭೈರಾಪುರ-ಮೂಡಿಗೆರೆ ಮೂಲಕ ಚಿಕ್ಕಮಗಳೂರು-ಕಡೂರು- ಹೊಳಲ್ಕೆರೆ ಮೇಲೆ ಚಿತ್ರದುರ್ಗ ತಲುಪಲು ಹೊಸ ರಸ್ತೆಯೊಂದರ ಪ್ರಸ್ತಾವನೆಯನ್ನು ದೆಹಲಿಯ ಎಲ್‌.ಇ.ಎ ಅಸೋಸಿಯೇಟ್ಸ್‌ ಸೌತ್‌ ಏಷ್ಯಾ ಎಂಬ ಖಾಸಗಿ ಸಂಸ್ಥೆ ಸಿದ್ಧಪಡಿಸಿದ್ದು, ಅದರ ಆಧಾರದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆಯೊಂದನ್ನು ನಡೆಸಲಾಗಿದೆ.

ಸಕಾರಣ
ಇದು ಅಂದಾಜು 357 ಕಿ.ಮೀ. ಉದ್ದದ ರಸ್ತೆ ಎಂದು ಹೇಳಲಾಗಿದೆ. ಪ್ರಸ್ತಾವನೆಯಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಕಾರಣಗಳನ್ನು ನೀಡಿದ್ದು, ಈಗಿರುವ ಮೂಡಿಗೆರೆ-ಚಾರ್ಮಾಡಿ-ಮಂಗಳೂರು ರಸ್ತೆಯನ್ನು ವಿಸ್ತರಣೆಗೊಳಿಸಲು ಸಾಧ್ಯವಿಲ್ಲ. ಅದು ಮೀಸಲು ಅರಣ್ಯಕ್ಕೆ ಒತ್ತಾಗಿ ಸಾಗುತ್ತದೆ. ರಸ್ತೆ ವಿಸ್ತರಣೆಗೆ ಅಗತ್ಯವಾದ ಭೂಸ್ವಾಧೀನವು ಕಠಿನ, ಪರಿಹಾರ ನೀಡುವುದು ಕಷ್ಟವಾಗುತ್ತದೆ. ಈ ಹೊಸ ರಸ್ತೆ ನಿರ್ಮಿಸಿದರೆ ವಾಹನ ಓಡಾಟ ಇನ್ನಷ್ಟು ಸುಗಮವಾಗುವುದಲ್ಲದೆ ಮಂಗಳೂರು ಬಂದರಿನಿಂದ ಹಾಗೂ ಬಂದರಿಗೆ ಸರಕುಸಾಗಣೆ ಸುಲಭವಾಗುತ್ತದೆ ಎಂಬ ಅಂಶಗಳನ್ನು ಉಲ್ಲೇಖೀಸಲಾಗಿದೆ.

ಕೈ ಬಿಡಲಾಗಿತ್ತು
ಈ ರಸ್ತೆ ನಿರ್ಮಾಣವನ್ನು ಈ ಪ್ರದೇಶದ ಪ್ರಾಮುಖ್ಯತೆ ಮತ್ತು ಸೂಕ್ಷ್ಮತೆ ಅರಿತು ರಾಜ್ಯ ಸರಕಾರಕ್ಕೆ ಕೈಬಿಟ್ಟಿತ್ತು. ಆದರೆ
ಕೆಲವು ಜನಪ್ರತಿನಿಧಿಗಳ ಒತ್ತಡದಿಂದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಶಿಶಿಲ- ಭೈರಾಪುರ ಬೆಟ್ಟ ಪ್ರದೇಶ ಬಾಳೂರು, ಮೀಯಾರು ಮತ್ತು ಕಬ್ಬಿನಾಲೆ ಭಾಗವಾಗಿ ರಸ್ತೆ ಹಾದು ಹೋಗಲಿದೆ.

ರಸ್ತೆಗಳಿವೆ
ಈಗಾಗಲೇ ಮಂಗಳೂರನ್ನು ಸಂಪರ್ಕಿಸಲು ಚಾರ್ಮಾಡಿ ಘಾಟಿ ಮೂಲಕ, ಶಿರಾಡಿ ಮೂಲಕ, ಕುದುರೆಮುಖ, ಆಗುಂಬೆ, ಸುಬ್ರಹ್ಮಣ್ಯ, ಶೃಂಗೇರಿ ಮೂಲಕವು ರಸ್ತೆಗಳಿವೆ. ಇವುಗಳನ್ನು ಪರಿಗಣಿಸದೆ ಸುವರ್ಣ ಚತುಷ್ಪಥ ರಸ್ತೆ ನೆಪದಲ್ಲಿ ದಟ್ಟ ಕಾಡು, ಎತ್ತರದ ಬೆಟ್ಟಗಳನ್ನು ಹೊಂದಿರುವ ಹಾಗೂ 300 ರಿಂದ 400 ಇಂಚು ಮಳೆ ಸುರಿಯುವ ಶಿಶಿಲ-ಭೈರಾಪುರ  ಟ್ಟಪ್ರದೇಶವನ್ನು 18 ಕಿ.ಮೀ. ದೂರ ಛಿದ್ರಗೊಳಿಸಿ ಈ ದುರ್ಗಮ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಸರಕಾರ ಮುಂದಾಗಿರುವುದು ಪರಿಸರಪ್ರಿಯರಿಗಷ್ಟೇ ಅಲ್ಲ ಇತರರಿಗೂ ಅಯ್ಯೋ ಅರಣ್ಯ ಹಾಳಾಗುತ್ತದೆ ಎಂಬ ಭಾವನೆ ಮೂಡಿಸಿದೆ.

Advertisement

ವರದಿ ಬಳಿಕ ಕಾಮಗಾರಿ
ಪರ್ಯಾಯ ರಸ್ತೆ ಬೈರಾಪುರ- ಶಿಶಿಲ ಮಾರ್ಗ ಸಮಗ್ರ ಯೋಜನ ವರದಿ ಸಲ್ಲಿಕೆಯಾದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ|ಎಚ್‌. ಸಿ. ಮಹದೇವಪ್ಪ ವಿಧಾನಪರಿಷತ್‌ನಲ್ಲಿ ಹೇಳಿದ್ದಾರೆ.

ಮಾರ್ಗದ ಸರ್ವೇ ಕಾರ್ಯ ಆರಂಭವಾಗಿದೆ. ಮೂಡಿಗೆರೆ ತಾಲೂಕಿನ ಬೈರಾಪುರದಿಂದ ನಾಯಿಹಳ್ಳ, ಪೇರಿಕೆ, ಶಿಶಿಲ ಮೂಲಕ ಸಂಪರ್ಕಿಸುವ ರಸ್ತೆಗೆ ಸಂಬಂಧಪಟ್ಟಂತೆ ಸಮಗ್ರ ಯೋಜನ ವರದಿ ಸಿದ್ಧವಾಗುತ್ತಿದೆ. ಬೆಂಗಳೂರಿನ ಪೀತಿ ಕ್ಯಾಡ್‌ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ ಪ್ರೈವೇಟ್‌ ಸಂಸ್ಥೆಗೆ ಡಿಪಿಆರ್‌ ಸಲ್ಲಿಸಲು 2016ರ ಆ. 10ರಂದು ಕಾರ್ಯಾದೇಶ ನೀಡಿ 13.84 ಲಕ್ಷ ರೂ. ಒದಗಿಸಲಾಗಿದೆ. ಸರ್ವೇ ವರದಿ ಪರಿಶೀಲಿಸಿದರೆ ಆಲೈನ್‌ ಮೆಂಟ್‌ನ ಬಹುಪಾಲು ಮಾರ್ಗ ಬಾಳೂರು ಮೀಸಲು ಅರಣ್ಯದ ಮೇಲೆ ಹಾದು ಹೋಗುವುದರಿಂದ ರಸ್ತೆ ನಿರ್ಮಾಣ ಕಷ್ಟಕರ ಎಂದು ಈಗಾಗಲೇ ಅಸ್ತಿತ್ವದಲ್ಲಿರುವ ಕಚ್ಚಾರಸ್ತೆಯ ಆಲೈನ್‌ ಮೆಂಟ್‌ನಲ್ಲಿ ಸರ್ವೇ ನಡೆಸಿ ಡಿಪಿಆರ್‌ ಸಲ್ಲಿಸಲು ಸೂಚಿಸಲಾಗಿದೆ. ಸಂಸ್ಥೆ ಕಾಲಮಿತಿಯೊಳಗೆ ವರದಿ ಸಲ್ಲಿಸದ ಕಾರಣ ಕಳೆದ ಜು. 18ರಂದು ಸಾಫ್ಟ್‌ ಟೆಕ್‌ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪರಿಸರ ಹಾನಿ ಮಾಡದಿರಿ
ರಸ್ತೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾಳು ಮಾಡುವುದು ಸರಿಯಲ್ಲ. ಇಷ್ಟೊಂದು ದಟ್ಟ ಪ್ರಮಾಣದ ಕಾಡು ನಾಶವಾದರೆ ಅಷ್ಟನ್ನು ಬೆಳೆಸಲು ಏನು ಪರ್ಯಾಯ ಕ್ರಮ ತೆಗೆದು ಕೊಂಡಿದ್ದಾರೆ? ಇರುವ ಮರಗಳನ್ನು ರಕ್ಷಿಸುವುದು ಬಿಟ್ಟು ಹೊಸದಾಗಿ ಬೇರೆಡೆ ನೆಡುವ ಸಬೂಬು ಅಗತ್ಯವಿಲ್ಲ. ಇರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸಲಿ.
–  ಶಶಿಧರ ಶೆಟ್ಟಿ,
   ಪರಿಸರ ಹೋರಾಟಗಾರ 

ಈ ರಸ್ತೆ ತೀರಾ ಅವಶ್ಯವಾಗಿದ್ದು ತುರ್ತಾಗಿ ಆಗಬೇಕಿದೆ. ವಾಹನ ದಟ್ಟಣೆ ಕಡಿಮೆ ಮಾಡುವುದರ ಜತೆಗೆ ಎರಡು
ಜಿಲ್ಲೆಗಳಿಗೆ ಅತ್ಯಂತ ಸನಿಹದಲ್ಲಿ ಸಂಪರ್ಕ ಒದಗಿಸಿದಂತಾಗುತ್ತದೆ.
ಬಿ. ಜಯರಾಮ
  ನೆಲ್ಲಿತ್ತಾಯ, ಶಿಶಿಲ

  ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next