ಹುಣಸೂರು: ಪ್ರಾಚೀನ ಕಾಲದಿಂದಲೂ ಕೆರೆ, ಕೊಳ, ಪುಷ್ಕರಣಿ, ಬಾವಿಗಳು ಜನರ ಕುಡಿಯುವ ನೀರಿನ ಬೇಡಿಕೆಗಳನ್ನು ನೀಗಿಸುತ್ತಿದ್ದವು. ಪ್ರಸಕ್ತ ಕಾಲಘಟ್ಟದಲ್ಲಿ ಈ ಜಲ ಮೂಲಗಳು ವಿವಿಧ ಕಾರಣಗಳಿಂದ ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ಪುನರುಜ್ಜೀವನ ಗೊಳಿಸದಿದ್ದರೆ ಮುಂದೆ ಜೀವಜಲಕ್ಕೆ ಹಾಹಾಕಾರ ಎದುರಾಗಲಿದೆ ಎಂದು ನಗರಸಭೆ ಪೌರಾಯುಕ್ತ ಎಸ್.ಶಿವಪ್ಪನಾಯಕ ಆತಂಕ ವ್ಯಕ್ತಪಡಿಸಿದರು. ನಗರದ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಜಲಶಕ್ತಿ ಅಭಿಯಾನ ಯೋಜನೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಅಭಿಯಾನ ಯಶಸ್ವಿಗೊಳಿಸಿ: ಜಲಮೂಲಗಳ ಒತ್ತುವರಿ, ಅನಾವಶ್ಯಕವಾಗಿ ಹೆಚ್ಚಿನ ಬಳಕೆ, ಅಕ್ರಮ ಬೋರ್‌ವೆಲ್ ಕೊರೆಯುವಿಕೆಯಿಂದಲೂ ಜಲಮೂಲಗಳು ಬರಿದಾಗುತ್ತಿವೆ. ನೀರಿನ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಹೀಗಾಗಿ ಜಲಶಕ್ತಿ ಅಭಿಯಾನದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಜಲಮೂಲಗಳ ರಕ್ಷಣೆಗೆ ಸರ್ಕಾರಗಳು ಮುಂದಾಗಿವೆ. ಈ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಲಾ ವಿದ್ಯಾರ್ಥಿಗಳು, ಸಂಘ, ಸಂಸ್ಥೆಯವರು ಭಾಗವಹಿಸುವ ಮೂಲಕ ಜಲಶಕ್ತಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಸಪ್ರಶ್ನೆ ಸ್ಪರ್ಧೆ: ನಂತರ ನಗರಸಭೆ ಅವರಣದಲ್ಲಿ ಮಳೆ ನೀರು ಕೊಯ್ಲು, ಸಂಸ್ಕರಿಸಿದ ಕೊಳಚೆ ನೀರಿನ ಮರುಬಳಕೆ, ನೀರಿನ ಮೂಲಗಳ ಜೀರ್ಣೋದ್ಧಾರ, ಪುನಶ್ಚೇತನ, ಹಸಿರೀಕರಣ-ಗಿಡ ನೆಡುವ ವಿಷಯ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಬ್ರಿಲಿಯನ್ಸ್ ಸ್ಕೂಲ್ 45 ಅಂಕ ಪಡೆದು ಪ್ರಥಮ ಸ್ಥಾನ, ನ್ಯೂ ಕೇಂಬ್ರಿಡ್ಜ್ ಸ್ಕೂಲ್ 25 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಮಾಧವ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು.
ಚರ್ಚಾ ಸ್ಪರ್ಧೆಯಲ್ಲಿ ಮಾಧವ ಪ್ರೌಢಶಾಲೆಯ ವಿದ್ಯಾರ್ಥಿ ಅಂಕೇಶ (ಪ್ರಥಮ), ಬ್ರಿಲಿಯನ್ಸ್ ಸ್ಕೂಲ್‌ನ ಐಶ್ವರ್ಯ (ದ್ವಿತೀಯ), ಚಿತ್ರಕಲಾ ಸ್ಪರ್ಧೆಯಲ್ಲಿ ಪೃಥ್ವಿನ್ ಕೆಂಡಗಣ್ಣ (ಪ್ರಥಮ) ನ್ಯೂ ಕೇಂಬ್ರಿಡ್ಜ್ ಸ್ಕೂಲ್, ಸರ್ಕಾರಿ ಪದವಿ ಪೂರ್ವ ಬಾಲಕರ ಪ್ರೌಢಶಾಲೆಯ ಸುಬ್ರಹ್ಮಣ್ಯ. ಆರ್, (ದ್ವಿತೀಯ), ಮಾಧವ ಪ್ರೌಢಶಾಲೆ ಅಂಕೇಶ್ ತೃತೀಯ ಸ್ಥಾನಗಳಿಸಿ ಬಹುಮಾನ ಹಾಗೂ ಪ್ರಶಂಸನೀಯ ಪತ್ರ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮಹಿಳಾ ಕಾಲೇಜಿ ಪ್ರಾಚಾರ್ಯ ಜ್ಞಾನಪ್ರಕಾಶ್, ಅಧ್ಯಾಪಕರಾದ ಪುಟ್ಟಶೆಟ್ಟಿ, ನಗರಸಭೆ ಎಂಜಿನಿಯರ್ ಸಿ.ಎನ್.ಅನುಪಮಾ, ಆರೋಗ್ಯ ನಿರೀಕ್ಷಕರಾದ ಸತೀಶ, ಮೋಹನ್, ರಾಜೇಂದ್ರ, ಜಲಶಕ್ತಿ ಅಭಿಯಾನದ ಸಂಪನ್ಮೂಲ ವ್ಯಕ್ತಿ ಜಿ.ಎಸ್.ಜಗದೀಶ್, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು.