Advertisement

Agricultural; ಪ್ರಾಕೃತಿಕ ಜಲಮೂಲದಿಂದಲೇ 14 ಎಕ್ರೆ ಭೂಮಿಗೆ ನೀರುಣಿಸುವ ರೈತ

11:31 PM Aug 11, 2024 | Team Udayavani |

ವಿಟ್ಲ: ವೈಜ್ಞಾನಿಕ ಪದ್ಧತಿಗಳು, ನವೀನ ತಂತ್ರಜ್ಞಾನ ಅಳವಡಿಕೆ, ಸಂಶೋಧನೆ, ಆವಿಷ್ಕಾರಗಳ ಜತೆಗೆ ಶ್ರಮದಿಂದಲೇ ಕೃಷಿ ಸಾಮ್ರಾಜ್ಯವನ್ನು ಕಟ್ಟಬಹುದು ಎನ್ನುವುದಕ್ಕೆ ಪ್ರಗತಿಪರ ಕೃಷಿಕ ಬಲ್ನಾಡು ಸುರೇಶ್‌ ಭಟ್‌ ಒಂದು ಉದಾಹರಣೆ.

Advertisement

ಸುರೇಶ್‌ ಭಟ್ಟರಿಗೆ 14.50 ಎಕ್ರೆ ಭೂಮಿಯಿದೆ. 7 ಎಕ್ರೆಯಲ್ಲಿ ಅಡಿಕೆ, ತೆಂಗು, ಮೂರು ಎಕ್ರೆಯಲ್ಲಿ ರಬ್ಬರ್‌ ಬೆಳೆ ಇದೆ. ಜತೆಗೆ ಸಾಗುವಾನಿ, ಸಂಪಿಗೆ, ಮಾವಿನ ಮರಗಳೂ ಇವೆ. ಈ ಎಲ್ಲ ಮರಗಳಿಗೆ ಕಾಳುಮೆಣಸು ಬಳ್ಳಿ ಬಿಡಲಾಗಿದೆ.   ಔಷಧೀಯ ಸಸ್ಯಗಳು, ಮಾವು, ಹಲಸು, ಪಪ್ಪಾಯಿ, ಪೇರಳೆ, ಅನಾನಸು, ಪುನರ್ಪುಳಿ ಇತ್ಯಾದಿಗಳೂ ಇವೆ. ನೀರು ಸಂಗ್ರಹಿಸುವ ಮೂರು ಬೃಹತ್‌ ಕೆರೆ ಇದ್ದು, ಇನ್ನೊಂದು ನಿರ್ಮಾಣ ಹಂತದಲ್ಲಿದೆ.

2004ರಲ್ಲೇ ವಿದ್ಯುತ್‌ ಸ್ವಾವಲಂಬನೆ
ಹಳ್ಳಿಯಲ್ಲಿ ಕಾಡುವ ವಿದ್ಯುತ್‌  ಸಮಸ್ಯೆಗೆ  ಸುರೇಶ್‌ ಭಟ್‌  20 ವರ್ಷಗಳ ಹಿಂದೆಯೇ  ಪರಿಹಾರ ಕಂಡುಕೊಂಡಿದ್ದಾರೆ. 60 ಅಡಿ ಎತ್ತರದಿಂದ ಇಳಿಯುವ ನೀರನ್ನು ಉಪಯೋಗಿಸಿ, ಜಲವಿದ್ಯುತ್‌ ಉತ್ಪಾದನೆ ಆರಂಭಿಸಿದ್ದಾರೆ. 2004 ರಿಂದ ಎರಡು ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದು, ಮನೆ ಅಗತ್ಯಕ್ಕೆ ಬಳಕೆಯಾಗುತ್ತಿದೆ.

ಕೃಷಿ ಪಂಡಿತ ಪ್ರಶಸ್ತಿ
ಸುರೇಶ್‌ ಭಟ್‌ ಅವರ ಕೃಷಿ ಯಶೋಗಾಥೆಯನ್ನು ಕಂಡು ಸರಕಾರವು ಎರಡು ವರ್ಷಗಳ ಹಿಂದೆ  ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ಥಳೀಯವಾಗಿ ವಿವಿಧ ಸಂಘ ಸಂಸ್ಥೆಗಳು ಕೂಡ ಅವರನ್ನು ಗೌರವಿಸಿವೆ.

ಕೊಳವೆ ಬಾವಿ, ಪಂಪ್‌ಸೆಟ್‌ ಇಲ್ಲ: ಮಳೆ ನೀರೇ ಆಶ್ರಯ ಸುರೇಶ್‌ ಭಟ್ಟರ ತೋಟದಲ್ಲಿ ಕೊಳವೆ ಬಾವಿ, ಪಂಪ್‌ಸೆಟ್‌ ಇಲ್ಲ.ಪ್ರಾಕೃತಿಕ ಜಲ ಸಂಪತ್ತನ್ನೇ ಸದ್ಬಳಕೆ ಮಾಡಿಕೊಂಡ ಅವರ ಚಿಂತನೆ ಗಮನಾರ್ಹ. ಇಲ್ಲಿ ಪ್ರಾಕೃತಿಕವಾಗಿ ಎತ್ತರದಿಂದ ನೀರು ಹರಿಯುತ್ತದೆ. ಅದನ್ನು ಮೂರು ಕೆರೆ ಮಾಡಿ ಸಂಗ್ರಹಿಸಿಸುತ್ತಾರೆ. 18 ಲಕ್ಷ ಲೀಟರ್‌ ನೀರು ಸಂಗ್ರಹದ ಕೆರೆ ಇದಾಗಿದೆ. ಎಲ್ಲ ಗಿಡಗಳಿಗೂ ಪಂಪ್‌ನ ಹಂಗಿಲ್ಲದೆ ನೀರು ಹರಿಯುತ್ತದೆ. ಇಡೀ ತೋಟಕ್ಕೆ ಮಳೆ ನೀರೇ ಆಶ್ರಯವಾಗಿದೆ.

Advertisement

6,000 ಬಳ್ಳಿಗಳಲ್ಲಿ  ಕಾಳುಮೆಣಸು
ಸುರೇಶ್‌ ಭಟ್ಟರ ತೋಟದಲ್ಲಿ 6,000ಕ್ಕೂ ಅಧಿಕ ಮರಗಳಲ್ಲಿ ಕಾಳುಮೆಣಸು ಬಳ್ಳಿಗಳಿವೆ. 1,400 ಅಡಿಕೆ ಮರಗಳಿವೆ. ತೋಟದಲ್ಲಿರುವ ಎಲ್ಲ ಮರಗಳ ಜತೆಗೆ 400 ಕಾಂಕ್ರೀಟ್‌ ಕಂಬಗಳನ್ನು ಸ್ಥಾಪಿಸಿ, ಅವುಗಳಿಗೂ ಕಾಳುಮೆಣಸು ಬಳ್ಳಿ ಬಿಟ್ಟಿದ್ದಾರೆ. ಒಂದೇ ವರ್ಷದಲ್ಲಿ ಫಸಲು ನೀಡುತ್ತಿದೆ. ದ.ಕ.ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆಯುವ ಕೃಷಿಕರಲ್ಲಿ ಸುರೇಶ್‌ ಭಟ್‌ ಅಗ್ರಗಣ್ಯ. ಈಗ ವರ್ಷಕ್ಕೆ 4.5 ಟನ್‌ ಕಾಳುಮೆಣಸು ಇಳುವರಿ ಪಡೆಯುವ ಇವರು ಮುಂದಿನ ನಾಲ್ಕೈದು ವರ್ಷಗಳಲ್ಲಿ 10 ಟನ್‌ಗೇರಿಸುವ ಗುರಿ ಹೊಂದಿದ್ದಾರೆ. ಸೋಲಾರ್‌ ಡ್ರೈಯರ್‌ ಮೂಲಕ ಅಡಿಕೆ, ಕಾಳುಮೆಣಸು ಒಣಗಿಸುವ ವ್ಯವಸ್ಥೆ ಇದೆ. ಅಡಿಕೆ ಕೊಯ್ಯಲು ಮತ್ತು ಮರಗಳಿಗೆ ಔಷಧ ಬಿಡುವುದಕ್ಕೆ ಫೈಬರ್‌ ಮತ್ತು ಅಲ್ಯುಮೀನಿಯಂ ದೋಟಿಗಳನ್ನು ಬಳಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಆಧುನಿಕ ಆವಿಷ್ಕಾರಗಳಲ್ಲಿ ತನಗೆ ಅನುಕೂಲಕರವಾಗುವ ಅಂಶಗಳನ್ನು ಕೂಡಲೇ ಅಳವಡಿಸಿಕೊಳ್ಳುತ್ತಿದ್ದಾರೆ.

ಇವರ ತೋಟ ಕೃಷಿ ಪ್ರವಾಸಿ ತಾಣ!
-ಶಾಲಾ ಮಕ್ಕಳು ಶಾಲಾ ಮಕ್ಕಳೂ ಇವರ ತೋಟಕ್ಕೆ ಅಧ್ಯಯನ ಪ್ರವಾಸ ಇಟ್ಟುಕೊಳ್ಳುತ್ತಾರೆ.
-ಕೃಷಿ ಆಸಕ್ತರಿಗೆ ಮುಕ್ತ ಸ್ವಾಗತವಿದೆ. ಸಾಲದ್ದಕ್ಕೆ ಅವರೇ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.
ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳು, ಐಸಿಎಆರ್‌, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಇವರ ತೋಟಕ್ಕೆ ಆಗಮಿಸಿ, ಮಾಹಿತಿ ಕಲೆ ಹಾಕಿದ್ದಾರೆ.

- ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next