ಬೆಂಗಳೂರು: ಕೋಲಾರ ಎಸ್ ಸಿ ಮೀಸಲು ಲೋಕಸಭಾ ಕ್ಷೇತ್ರದ ಟಿಕೆಟ್ ಕುರಿತು ಕಾಂಗ್ರೆಸ್ ನಲ್ಲಿ ಬಂಡಾಯ ಸ್ಫೋಟಗೊಂಡಿದ್ದು , ಸಚಿವ ಮತ್ತು ಶಾಸಕರು ರಾಜೀನಾಮೆ ನೀಡುವ ಮಟ್ಟಕ್ಕೆ ಬಂದು ನಿಂತಿದೆ.
ಪಕ್ಷದ ಐವರು ವಿಧಾನಸಭೆ ಸದಸ್ಯರು, ಇಬ್ಬರು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರ ಕ್ಷೇತ್ರದಿಂದ ಪಕ್ಷ ಟಿಕೆಟ್ ನೀಡುವುದು ಖಚಿತವಾದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್,ಶಾಸಕರು “ಮುನಿಯಪ್ಪ ಕುಟುಂಬಕ್ಕೆ ಗುಲಾಮರಾಗಿರಲು ಸಾಧ್ಯವಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಮಾಧ್ಯಮ ಪ್ರತಿನಿಷಿಗಳೊಂದಿಗೆ ಮಾತನಾಡಿದ್ದು,ಕೆ.ಎಚ್.ಮುನಿಯಪ್ಪ ಅವರ ಕುಟುಂಬ ಟಿಕೆಟ್ ನೀಡದಂತೆ ಮನವಿ ಮಾಡಿದ್ದೇವೆ. ಒಂದು ವೇಳೆ ನೀಡಿದರೇ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಚಿಂತಾಮಣಿ ಶಾಸಕ, ಸಚಿವ ಎಂ.ಸಿ.ಸುಧಾಕರ್,ಮಾಲೂರು ಶಾಸಕ ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆ ನೀಡಲಿದ್ದೇವೆ ಎಂದು ಹೇಳಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವಕ್ಕೆ ಭಾರೀ ತಲೆನೋವು ತಂದಿಟ್ಟಿದ್ದಾರೆ.
ವಿಧಾನಸೌಧಕ್ಕೆ ತೆರಳಿ ಸಭಾಪತಿ ಅವರಿಗೆ ರಾಜಿನಾಮೆ ಪತ್ರ ನೀಡುತ್ತೇವೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಪ್ರಯಾಣ ಬೆಳೆಸಿ ಸಂಜೆ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.