ಸಾಗರ: ನಾವು ಮಕ್ಕಳಿಗೆ ಶೂ ಸಾಕ್ಸ್ ಕೊಡುತ್ತೇವೆ ಎಂದ ಮೇಲೆ ಕಾಂಗ್ರೆಸ್‌ನವರಿಗೆ ಭಿಕ್ಷೆ ಎತ್ತಿ ಶೂ ಸಾಕ್ಸ್ ಕೊಡುವ ನೆನಪಾಗಿದೆ. ಕಾಂಗ್ರೆಸ್‌ನವರ ಇಂತಹ ಡ್ರಾಮಾ ಮಾಮೂಲಿಯದ್ದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಬುಧವಾರ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಪತ್ರಕರ್ತರ ಜೊತೆ ಅವರು ಮಾತನಾಡಿ, ಹಿಂದೆ ಪ್ರವಾಹ ಸಂದರ್ಭದಲ್ಲಿ ಭಿಕ್ಷೆ ಎತ್ತಿ ಕೊಟ್ಟಿದ್ದ ೧ ಕೋಟಿ ರೂಪಾಯಿ ಚೆಕ್ ಬೌನ್ಸ್ ಮಾಡಿಕೊಂಡದ್ದನ್ನು ಬಹುಶಃ ಕಾಂಗ್ರೆಸ್ ಮರೆತಿದೆ. ಸರ್ಕಾರ ಮಕ್ಕಳಿಗೆ ಶೂ ಸಾಕ್ಸ್ ಕೊಡಲು ಎಲ್ಲ ಸಿದ್ಧತೆ ಮಾಡಿಕೊಂಡಾಗ ಭಿಕ್ಷೆ ಎತ್ತುತ್ತೇವೆ ಎಂದು ಕಾಂಗ್ರೆಸ್ ನಾಟಕ ಮಾಡುತ್ತಿದೆ. ಶೂಸಾಕ್ಸ್ ಕೊಡಲು ಸ್ಥಳೀಯವಾಗಿ ಶಾಲಾಭಿವೃದ್ಧಿ ಸಮಿತಿಗೆ ಸೂಚನೆ ನೀಡಲಾಗಿದೆ. ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆಯಲ್ಲಿ ಕಾಗದದ ಕೊರತೆಯಿಂದ ಪುಸ್ತಕ ಮುದ್ರಣ ವಿಳಂಬವಾಗಿತ್ತು. ಆದರೂ ಜುಲೈ ೧೫ರೊಳಗೆ ಮಕ್ಕಳಿಗೆ ಪಠ್ಯಪುಸ್ತಕ ಪೂರೈಸಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಹಿಂದೆ ಆಗಸ್ಟ್ ಸೆಪ್ಟೆಂಬರ್ ಕಳೆದರೂ ಪುಸ್ತಕ ಕೊಡುತ್ತಿರಲಿಲ್ಲ. ರಾಜ್ಯದ ಶೇ. ೯೬ರಷ್ಟು ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಖಾಯಂ ಶಿಕ್ಷಕರ ಕೊರತೆ ಇದೆ. ಆದರೆ ಸರ್ಕಾರ ಇತಿಹಾಸದಲ್ಲಿ ೩೬ ಸಾವಿರ ಅತಿಥಿ ಶಿಕ್ಷಕರನ್ನು ಶಾಲೆ ಪ್ರಾರಂಭದಲ್ಲಿಯೇ ನೀಡಿ ಶೈಕ್ಷಣಿಕ ವ್ಯವಸ್ಥೆ ಸುಗಮಗೊಳಿಸುವ ಪ್ರಯತ್ನ ನಮ್ಮ ಸರ್ಕಾರ ಮಾಡಿದೆ. ಈಗಾಗಲೇ ೧೫ ಸಾವಿರ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಶಿಕ್ಷಣ ಇತರ ಇಲಾಖೆಯಂತೆ ಅಲ್ಲ. ಗುಣಮಟ್ಟದ ಶಿಕ್ಷಣ ನೀಡಲು ಗುಣಮಟ್ಟದ ಶಿಕ್ಷಕರ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು ಮುಂದಿನ ಒಂದೆರಡು ತಿಂಗಳಿನಲ್ಲಿ ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಲಾಗುತ್ತದೆ ಎಂದರು.
ವಿಶೇಷವಾಗಿ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಒತ್ತು ಕೊಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಆಗಿರುವ ಶೈಕ್ಷಣಿಕ ಚಟುವಟಿಕೆ ಹಿನ್ನೆಡೆ ಸರಿದೂಗಿಸಲು ಕಲಿಕಾ ಚೇತರಿಕೆ ಯೋಜನೆ ಜಾರಿಗೆ ತಂದಿದೆ. ಮಕ್ಕಳ ಜೊತೆಗೆ ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಲಾಗುತ್ತಿದೆ. ಹೊಸದಾಗಿ ಆಯ್ಕೆಯಾಗುವ ಶಿಕ್ಷಕರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಹೊಸ ಶಿಕ್ಷಕರಿಗೆ ಏಳೆಂಟು ವರ್ಷ ವರ್ಗಾವಣೆ ಇರುವುದಿಲ್ಲ. ಅವರು ಕಡ್ಡಾಯವಾಗಿ ನೇಮಕಗೊಂಡ ಶಾಲೆಯಲ್ಲಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಪ್ರಮುಖರಾದ ಮ.ಸ.ನಂಜುಂಡಸ್ವಾಮಿ, ಹಾರಾಡಿ ರಾಜೇಂದ್ರ ಪೈ, ಈಳಿ ಶ್ರೀಧರ್, ಕೆ.ಎನ್.ಶ್ರೀಧರ್, ಸುಪ್ರತೀಕ್ ಭಟ್, ನಾರಾಯಣಮೂರ್ತಿ, ಬಿಂಬ ಕೆ.ಆರ್. ಇನ್ನಿತರರು ಹಾಜರಿದ್ದರು.