ತಿರುವನಂತಪುರ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಶನಿವಾರ ರಾತ್ರಿ ಕೇರಳಕ್ಕೆ ತಲುಪಿದ್ದು, ರವಿವಾರ ಬೆಳಗ್ಗೆ ಕೇರಳದಲ್ಲಿ ಸಂಚಾರ ಆರಂಭಿಸಿದೆ.
ಒಟ್ಟು 19 ದಿನಗಳ ಕಾಲ ಭಾರತ್ ಯಾತ್ರಿಗಳು ದೇವರ ನಾಡಿನಲ್ಲಿ ಸಂಚರಿಸಲಿದ್ದಾರೆ.
ಕೇರಳಕ್ಕೆ ಆಗಮಿಸಿದ ಯಾತ್ರಿಗಳನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ಸೇರಿದಂತೆ ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಬರಮಾಡಿಕೊಂಡರು.
ಪರಶಾಲಾ ಜಂಕ್ಷನ್‌ನಲ್ಲಿ ಯಾತ್ರೆ ಆರಂಭವಾಗಿದ್ದು, ಸಾವಿರಾರು ಮಂದಿ ಪಾಲ್ಗೊಂಡು ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದರು. 19 ದಿನಗಳ ಅವಧಿಯಲ್ಲಿ ರಾಹುಲ್ 450 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ.
ಮದುವೆ ಮಾತು!: ಶನಿವಾರ ತಮಿಳು ನಾಡಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿಯ ಮಹಿಳಾ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದರು. ಈ ವೇಳೆ, ಮಹಿಳೆಯರು, “ನೀವು ತಮಿ ಳುನಾಡನ್ನು ಇಷ್ಟೊಂದು ಇಷ್ಟಪಡುತ್ತೀರಿ. ಹಾಗಾಗಿ ನೀವು ಒಪ್ಪಿದರೆ ಇಲ್ಲಿನ ಯುವತಿಯನ್ನೇ ನಿಮಗೆ ಮದುವೆ ಮಾಡಿಕೊಡುತ್ತೇವೆ’ ಎಂದರು. ಇದಕ್ಕೆ ರಾಹುಲ್ ಜೋರಾಗಿ ನಕ್ಕು, ಆ ಮಹಿಳೆ ಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.