ಬೆಂಗಳೂರು: ಕಾಂಗ್ರೆಸ್‌ನೊಳಗೆ ಸಿಎಂ ಕುರ್ಚಿ ಕಾದಾಟ ಶುರುವಾಗಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ಬಾಂಬ್‌ಗಳು ಜಾಸ್ತಿ. ಸಿಎಂ ರೇಸ್‌ನ ಮ್ಯೂಸಿಕಲ್ ಚೇರ್‌ನಲ್ಲಿ ಓಡಾಡುತ್ತಿರುವ ಕಾಂಗ್ರೆಸ್ಸಿಗರು ಯಾವ ಪಟಾಕಿ ಇಟ್ಟಿದ್ದಾರೋ, ಆಟಂ ಬಾಂಬ್ ಇಟ್ಟಿದ್ದಾರೋ, ಇಲ್ಲವೇ ರಾಕೆಟ್ ಇಟ್ಟಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್‌ನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಕೆಟ್ ಹೊಡೆಯುವುದು ಗ್ಯಾರಂಟಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರಿಗಿಂತಲೂ ಜಾಸ್ತಿ ಸಿದ್ದರಾಮಯ್ಯ ಅವರು ಬದಲಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡರಿಗೆ ಖಚಿತವಾಗಿದೆ. ಮುಡಾ ಪ್ರಕರಣ ಸಂಬಂಧ ನಾವು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದ ಒಳಗೆ ಈಗ ಸಿಎಂ ಸ್ಥಾನ ಪಡೆಯಲು ತರಾತುರಿ ಶುರುವಾಗಿದೆ. ಕೋರ್ಟ್ ಆದೇಶಕ್ಕಿಂತಲೂ ಮೊದಲೇ ಟವೆಲ್ ಹಾಕುವ ಕೆಲಸ ಆಗಿದೆ ಎಂದರು.
ಬಸ್‌ನಲ್ಲಿ ಸೀಟ್ ಸಿಗುತ್ತೋ ಇಲ್ಲವೋ ಎಂದು ಟವೆಲ್ ಹಾಕುವುದನ್ನು ನೋಡಿದ್ದೇವೆ. ಆ ಪ್ರಕ್ರಿಯೆ ಈಗ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ವಿಚಾರದಲ್ಲಿ ನಡೆಯುತ್ತಿದೆ. ಹಿರಿತನ ಮತ್ತು ಪಕ್ಷ ನಿಷ್ಠೆ ಮುಂದಿಟ್ಟುಕೊಂಡು ಸಚಿವ ಎಂ.ಬಿ.ಪಾಟೀಲ್ ಮಾತನಾಡುತ್ತಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿ ಅವರು ಜಾಲತಾಣದಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಪ್ರಚಾರವನ್ನು ಆರಂಭಿಸಿದ್ದಾರೆ. ದೇಶಪಾಂಡೆ ಅವರು ನಾನು ಸಿದ್ದರಾಮಯ್ಯ ಅವರಿಗಿಂತ 2 ವರ್ಷ ದೊಡ್ಡವನು, ಸಾಮಾಜಿಕ ನ್ಯಾಯ ಸಿಗಬೇಕು ಎನ್ನುತ್ತಿದ್ದಾರೆ ಎಂದು ಆರ್. ಅಶೋ ಕ್ ಲೇವಡಿ ಮಾಡಿದರು.
ಡಿಕೆಶಿ ಪ್ರಧಾನಿ ಭೇಟಿ ಮಾಡಿ ಸ್ಟಿಕ್ಕರ್ ಅಂಟಿಸಿದ್ದಾರೆ:
ನಾನು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಕಳೆದ ಬಾರಿ ನನ್ನನ್ನು ಸಿದ್ದರಾಮಯ್ಯ ಸೋಲಿಸಿದರು. ಅನ್ಯಾಯವಾಗಿದೆ ಅದನ್ನು ಈಗ ಸರಿಪಡಿಸಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳುತ್ತಿದ್ದರೆ, ಇತ್ತ ಪ್ರಧಾನಿ ಅವರನ್ನು ಭೇಟಿಯಾಗಿ ಬಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ಸಿಎಂ ಕುರ್ಚಿಗೆ ಸ್ಟಿಕ್ಕರ್’ ಅಂಟಿಸಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಶುರುವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಕೂಡ ಡಿಕೆಶಿ ಮೇಲೆ ಗುರ್ ಅನ್ನುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನವರ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು 2 ಸಲ ಹೇಳಿಕೆ ನೀಡಿದ್ದಾರೆ. ಅವರ ಬೆನ್ನ ಹಿಂದೆ ಬಂಡೆಯಂತೆ ಇರುವವರೇ ಅವರಿಗೆ ಮೋಸ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್‌ಟಿಐ ಅರ್ಜಿ ಹಾಕಿಲ್ಲ, ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ. ಕಾಂಗ್ರೆಸ್‌ನವರೇ ಸಿದ್ದರಾಮಯ್ಯ ಅವರನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ದೂರಿದರು.
ಈಗಾಗಲೇ ಹಿಮಾಚಲ ಪ್ರದೇಶ ಆರ್ಥಿಕ ದುಸ್ಥಿತಿಗೆ ತಲುಪಿದೆ. ಕರ್ನಾಟಕ ಪಾಪರ್ ಆದರೂ ಪರವಾಗಿಲ್ಲ, ನಮ್ಮ ಬೇಳೆ ಬೇಯಬೇಕು ಎಂದು ಕಾಂಗ್ರೆಸ್ ಯೋಚಿಸಿದೆ. ಅಧಿಕಾರಿಗಳು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ಸ್ವಯಂ ನಿವೃತ್ತಿ ಪಡೆಯಬೇಕು ಎಂಬಂತಹ ಸ್ಥಿತಿ ಇದೆ. ಇಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬದುಕುವ ಗ್ಯಾರಂಟಿ ಇಲ್ಲ ಎಂದು ಹೇಳಿದರು.