ಶಿಡ್ಲಘಟ್ಟ:ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವ ಕೆ.ಎಚ್. ಮುನಿಯಪ್ಪ ಅವರಂಥ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಶಕ್ತಿಯಿದ್ದಂತೆ ಅವರ ಶಕ್ತಿಯನ್ನು ಬಳಸಿಕೊಳ್ಳದ ಆ ಪಕ್ಷದ ನಾಯಕರು ನಿಜವಾದ ನತದೃಷ್ಟರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವತೆ ಕಾಳಿಕಾಂಬ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದರು.
ಮೂರು ದಶಕಗಳಿಂದ ಕೆ.ಎಚ್.ಮುನಿಯಪ್ಪ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಮಾಡಲು ಶ್ರಮಿಸಿದ್ದಾರೆ. ವಿವಿಧ ಪಕ್ಷಗಳ ಬಾಗಿಲು ಬಡಿಯುತ್ತಿದ್ದ ರಮೇಶ್‌ಕುಮಾರ್ ರನ್ನು ಪಕ್ಷಕ್ಕೆ ಕರೆತಂದ ಕಾರಣಕ್ಕೆ ಆತ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆಯೇ ಹೊರತು ಅವರಿಂದ ಪಕ್ಷಕ್ಕಾಗಲಿ, ಜಿಲ್ಲೆಗಾಗಲಿ ಯಾವುದೇ ಕೊಡುಗೆಯಿಲ್ಲ. 2 ತಿಂಗಳ ಹಿಂದೆಯಷ್ಟೇ ಗ್ರಾಮ ದೇವತೆ ಶ್ರೀ ಕಾಳಿ ಕಾಂಬ ದೇಗುಲದ ಪ್ರತಿಷ್ಠಾಪನೆ ನಡೆಸಿದ್ದು ಗ್ರಾಮಕ್ಕೆ ಆಹ್ವಾನಿಸಿದ್ದ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಸದ್ಯಕ್ಕೆ ನಮ್ಮ ಭೇಟಿಯನ್ನು ರಾಜಕೀಯವಾಗಿ ಬಿಂಬಿಸುವುದು ಬೇಡ ಎಂದು ಹೇಳಿದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಗ್ರಾಮದೇವತೆ ಕಾಳಿಕಾಂಬೆ ಅನುಗ್ರಹದಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಹೋಗಲು ಸಾಧ್ಯವಾಯಿತು. 50 ವರ್ಷಗಳಿಂದ ಡಾ.ಕೆ.ಸುಧಾಕರ್ ಕುಟುಂಬಕ್ಕೂ ನಮಗೂ ಉತ್ತಮ ನಂಟಿರುವುದರಿಂದ ಗ್ರಾಮದೇವತೆ ಕಾಳಿಕಾಂಬಾ ದೇವಿಯ ದೇಗುಲದ ಮರು ಪ್ರತಿಷ್ಠಾಪನೆ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸೇರಿದಂತೆ ಎರಡೂ ಜಿಲ್ಲೆಗಳ ವಿವಿಧ ಪಕ್ಷಗಳ ಮುಖಂಡರು
ಹಾಜರಾಗಿದ್ದಾರೆ. ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ, ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದರು.
ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಸಿಎಸ್‌ಬಿ ಮಾಜಿ ಅಧ್ಯಕ್ಷ ಬಿಸ್ಸೇಗೌಡ, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಮುನೇಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ (ಬಂಗಾರಪ್ಪ), ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್ ನಿರ್ದೇಶಕ ಭಕ್ತರಹಳ್ಳಿ ಮುನಿರಾಜು, ಜಿಪಂ ಮಾಜಿ ಸದಸ್ಯೆ ಕಮಲಮ್ಮ ಇತರರಿದ್ದರು.
ಬೇರೆ ಪಕ್ಷಕ್ಕೆ ಸೇರಿದರೆಪಕ್ಷಕ್ಕೇ ಭಾಗ್ಯ!
ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಕೆ.ಎಚ್.ಮುನಿಯಪ್ಪ ಪಾತ್ರ ಮಹತ್ವದ್ದಾಗಿದೆ ಅವರು ನನಗೂ ರಾಜಕೀಯವಾಗಿ ಮಾರ್ಗ ದರ್ಶಕರಾಗಿದ್ದಾರೆ. ಯಾವುದೇ ಪಕ್ಷದಲ್ಲಿರಲಿ ಆ ಪಕ್ಷಕ್ಕೆ ಶಕ್ತಿಯಾಗಿ ದುಡಿಯುತ್ತಾರೆ. ಅವರ ಶಕ್ತಿಯನ್ನು ಬಳಸಿಕೊಳ್ಳದವರು ನಿಜವಾಗಿಯೂ ನತದೃಷ್ಟರು ಒಂದು ವೇಳೆ ಅವರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದರೆ ಅವರನ್ನು ಬರಮಾಡಿಕೊಳ್ಳುವ ಪಕ್ಷದವರು ನಿಜವಾಗಿಯೂ ಭಾಗ್ಯವಂತರು ಎಂದು ಸುಧಾಕರ್ ಎಂದರು.